ರಾಂಚಿ: ಜಾರ್ಖಂಡ್ ಹಾಗೂ ಹೈದರಾಬಾದ್‌ನ ನಾಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೇಹಾ ಬೋರಾ ಭಾನುವಾರ ಆಗ್ರಹಿಸಿದ್ದಾರೆ.
ನಾಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪ್ರಸ್ತಾವನೆಯನ್ನು ಅಲ್ಲಿನ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮತ್ತೊಂದೆಡೆ, ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ಸ್ ಮಂಚ್’ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಜುಲೈ 25 ರಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಆಯೋಗಗಳ ಕಾರ್ಯವೈಖರಿಯಲ್ಲಿ ಸುಧಾರಣೆ, ವಿವಾದಿತ ಪರೀಕ್ಷೆಗಳ ರದ್ದು ಹಾಗೂ ಸಿಬಿಐ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ.
ಜನಸಾಮಾನ್ಯರ ಬೇಡಿಕೆಗಳಿಗೆ ಧ್ವನಿಯಾಗುವುದು ಮತ್ತು ಬೀದಿಯಲ್ಲಿ ಮೊಳಗುವ ಧ್ವನಿಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುವುದು ಸಂಸದರ ಪ್ರಮುಖ ಕರ್ತವ್ಯವಾಗಿದೆ ಎಂದು ನೇಹಾ ಬೋರಾ ಹೇಳಿದ್ದಾರೆ. “ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ವೇಳೆ ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದು ಶ್ಲಾಘನೀಯ. ಆದರೆ ಅದೇ ರೀತಿಯಲ್ಲಿ, ಜಾರ್ಖಂಡ್‌ನ ಉದ್ಯೋಗಾಕಾಂಕ್ಷಿಗಳು, ನಾಲ್ಸಾರ್ ಕಾನೂನು ವಿಶ್ವವಿದ್ಯಾಲಯ ಹಾಗೂ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ (EFLU) ವಿದ್ಯಾರ್ಥಿಗಳ ಪರವಾಗಿಯೂ ವಿಪಕ್ಷಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು” ಎಂದು ಅವರು ಮನವಿ ಮಾಡಿದ್ದಾರೆ.
