Home ದೇಶ ಡಾಲರ್ ಎದುರು 13 ಪೈಸೆ ಚೇತರಿಕೆ ಕಂಡ ಭಾರತದ ರೂಪಾಯಿ

ಡಾಲರ್ ಎದುರು 13 ಪೈಸೆ ಚೇತರಿಕೆ ಕಂಡ ಭಾರತದ ರೂಪಾಯಿ

0

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಅಮೆರಿಕದ ಡಾಲರ್ ಸೂಚ್ಯಂಕ ಕುಸಿತದ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯ ಬುಧವಾರ ಚೇತರಿಕೆ ಕಂಡಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 13 ಪೈಸೆ ಏರಿಕೆಯಾಗಿದ್ದು, ತಾತ್ಕಾಲಿಕವಾಗಿ 95.81 ಮಟ್ಟದಲ್ಲಿ ವಹಿವಾಟು ಮುಗಿಸಿದೆ. ಅಮೆರಿಕದ ಬಾಂಡ್‌‌ ಇಳುವರಿ ಇಳಿಕೆಯಾಗಿದ್ದೂ ರೂಪಾಯಿಗೆ ಬೆಂಬಲ ನೀಡಿತಾದರೂ, ದೇಶೀಯ ಷೇರು ಮಾರುಕಟ್ಟೆಯ ದೌರ್ಬಲ್ಯವು ರೂಪಾಯಿಯ ಭಾರಿ ಜಿಗಿತಕ್ಕೆ ತಡೆಯೊಡ್ಡಿತು.

ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ದಿನದ ಆರಂಭದಲ್ಲಿ 95.87 ಮಟ್ಟದಲ್ಲಿ ವಹಿವಾಟು ಶುರುಮಾಡಿತು. ದಿನದ ವಹಿವಾಟಿನಲ್ಲಿ ಒಂದೊಮ್ಮೆ ಕನಿಷ್ಠ 95.98 ಮಟ್ಟಕ್ಕೆ ಇಳಿದರೂ, ಅಂತಿಮವಾಗಿ ಹಿಂದಿನ ದಿನದ ಮುಕ್ತಾಯ ಮಟ್ಟವಾದ 95.94 ಕ್ಕಿಂತ 13 ಪೈಸೆ ಲಾಭದೊಂದಿಗೆ 95.81 ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಜಾಗತಿಕವಾಗಿ ಪ್ರಮುಖ 6 ಕರೆನ್ಸಿಗಳ ಎದುರು ಡಾಲರ್ ಬಲ ಅಳೆಯುವ ಡಾಲರ್ ಇಂಡೆಕ್ಸ್ ಶೇಕಡ 0.14 ರಷ್ಟು ಕುಸಿದು 101.23 ಮಟ್ಟಕ್ಕೆ ಬಂದಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 103.18 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಡಾಲರ್ ಮಾರಾಟ ಮಾಡಿದ ಕಾರಣ ರೂಪಾಯಿ 96.00 ಮಟ್ಟ ದಾಟದಂತೆ ನಿಯಂತ್ರಣದಲ್ಲಿತ್ತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ, ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬುಧವಾರ ನಷ್ಟ ದಾಖಲಾಗಿದ್ದು, ಸೆನ್ಸೆಕ್ಸ್ 48.78 ಅಂಕ ಕುಸಿದು 72,480.29 ಮಟ್ಟದಲ್ಲಿ ಹಾಗೂ ನಿಫ್ಟಿ 95.75 ಅಂಕ ಇಳಿಕೆಯಾಗಿ 22,620.45 ಮಟ್ಟದಲ್ಲಿ ಮುಕ್ತಾಯಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ಬರೋಬ್ಬರಿ 9,980.22 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

You cannot copy content of this page

Exit mobile version