Home ವಿದೇಶ ಚಾಕುವಿನಿಂದ ಇರಿದರೂ ಕಾಕ್‌ಪಿಟ್ ಬಾಗಿಲು ತೆರೆದು 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತ ಮೂಲದ ಪೈಲಟ್:...

ಚಾಕುವಿನಿಂದ ಇರಿದರೂ ಕಾಕ್‌ಪಿಟ್ ಬಾಗಿಲು ತೆರೆದು 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತ ಮೂಲದ ಪೈಲಟ್: ಬೆಂಜಮಿನ್ ನೆತನ್ಯಾಹು ಮೆಚ್ಚುಗೆ

0

ಫ್ಲೈದುಬೈ (FlyDubai) ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ಭೀಕರ ಚಾಕು ಇರಿತದ ದಾಳಿಯ ನಡುವೆಯೂ ಅದ್ಭುತ ಧೈರ್ಯ ಪ್ರದರ್ಶಿಸಿ ವಿಮಾನದಲ್ಲಿದ್ದ 174ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ನಿಜವಾದ ಹೀರೋ’ ಎಂದು ಬಣ್ಣಿಸಿದ್ದಾರೆ. ತೀವ್ರ ಗಾಯಗೊಂಡಿದ್ದರೂ ಸ್ಮಿತ್ ಪ್ರದರ್ಶಿಸಿದ ಅಪ್ರತಿಮ ಸಾಹಸವನ್ನು ನೆತನ್ಯಾಹು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್-8 (ಫ್ಲೈಟ್ FZ1073) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಹೆಚ್ಚಿನ ಸಂಖ್ಯೆಯ ಇಸ್ರೇಲಿ ಪ್ರಜೆಗಳು ಸೇರಿದಂತೆ ಒಟ್ಟು 174 ಮಂದಿ ಪ್ರಯಾಣಿಕರಿದ್ದರು. ಹಾರಾಟದ ಮಧ್ಯೆ, ಒಮಾನ್ ಮೂಲದವನೆನ್ನಲಾದ ಸಹ-ಪೈಲಟ್ ಏಕಾಏಕಿ ಭಾರತೀಯ ಮೂಲದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ದಾಳಿಯ ಬೆನ್ನಲ್ಲೇ ವಿಮಾನ ಕೆಲವೇ ಕ್ಷಣಗಳಲ್ಲಿ ಸುಮಾರು 34,000 ಅಡಿಗಳಿಂದ 17,000 ಅಡಿಗಳಿಗೆ ಕ್ಷಿಪ್ರವಾಗಿ ಕೆಳಮುಖವಾಗಿ ಇಳಿಯಲಾರಂಭಿಸಿ ಭಾರಿ ಆತಂಕ ಸೃಷ್ಟಿಯಾಗಿತ್ತು.

ದೇಹದ ಮೇಲೆ ಹಲವು ಇರಿತಗಳಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಎದೆಗುಂದದ ಕ್ಯಾಪ್ಟನ್ ಸ್ಮಿತ್, ಹೇಗೋ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ಒಳನುಗ್ಗಿದ ಪ್ರಯಾಣಿಕರು ಹಾಗೂ ವಿಮಾನದಲ್ಲಿದ್ದ ಇತರ ಇಬ್ಬರು ಪೈಲಟ್‌‌ಗಳು ದಾಳಿಕೋರ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಿಸಿದರು. ಬಳಿಕ ಇತರ ಪೈಲಟ್‌ಗಳು ವಿಮಾನದ ನಿಯಂತ್ರಣ ಸಾಧಿಸಿ, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸುವ ಮೂಲಕ ಭಾರಿ ದುರಂತವನ್ನು ತಪ್ಪಿಸಿದರು.

ಘಟನೆಯ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಸಹ-ಪೈಲಟ್ ನಡೆಸಿದ ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೈದುಬೈ ಸಂಸ್ಥೆಯು ಟೆಲ್ ಅವೀವ್‌ಗೆ ತೆರಳುವ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

You cannot copy content of this page

Exit mobile version