Home ಬ್ರೇಕಿಂಗ್ ಸುದ್ದಿ ಕನ್ನಡ ಪರ ಹೋರಾಟಗಾರರ ಎಲ್ಲಾ ಕೇಸ್ ವಾಪಸ್: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಪರ ಹೋರಾಟಗಾರರ ಎಲ್ಲಾ ಕೇಸ್ ವಾಪಸ್: ಮುಖ್ಯಮಂತ್ರಿ ಸಿದ್ದರಾಮಯ್ಯ

0

ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿಯ ವೈಭವದ ಪುತ್ಥಳಿಯನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ಗಳನ್ನು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.

ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಬೆಳೆಸಬೇಕು, ಬೆಳಗಬೇಕು ಎನ್ನುವ ಮೂಲಕ ಕನ್ನಡ ಪರ ನಮ್ಮ ನಿಲುವು ಎಂದೂ ಅಚಲ ಎಂದು ಹೇಳಿದ್ದಾರೆ.

ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ಈ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಈ ಸುವರ್ಣೋತ್ಸವವನ್ನು ಬೇಕಂತಲೇ ಕೈಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಲೇಟಾದರೂ ಕರ್ನಾಟಕದ ಸುವರ್ಣೋತ್ಸವವನ್ನು ಆರಂಭಿಸಿ ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕರ್ನಾಟಕ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ‌ಭಾಷೆಯಾಗುತ್ತದೆ ಎಂದರು.

ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಅಕ್ಕ ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ಜನರಾಡುವ ಭಾಷೆಯೇ ಸಾರ್ವಭೌಮ. ನಮ್ಮಲ್ಲೂ ಇದನ್ನೇ ಆಚರಿಸಬೇಕು ಎಂದು ಕರೆ ನೀಡಿದರು.

ಒಂದು ಭಾಷೆ ಮಾತನಾಡುವ ಜನ ಒಂದು ಆಡಳಿತದ ಸೂರಿನಡಿ ಬರಬೇಕು ಎನ್ನುವುದು ಕನ್ನಡ ಏಕೀಕರಣ ಚಳವಳಿಯ ಆಶಯವಾಗಿತ್ತು. ಈ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕನ್ನಡ ಓದುವುದನ್ನು, ಬರೆಯುವುದನ್ನು ಹೆಚ್ಚೆಚ್ಚು ಕಲಿಯಬೇಕು, ಕಲಿಸಬೇಕು ಎಂದು ಕರೆ ನೀಡಿದರು.

You cannot copy content of this page

Exit mobile version