Home ಬೆಂಗಳೂರು ಆಗಸ್ಟ್ 15ರೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು – ಸಚಿವ ಈಶ್ವರ ಖಂಡ್ರೆ

ಆಗಸ್ಟ್ 15ರೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು – ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದ ಎಲ್ಲಾ 5,927 ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನು ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಈ ಪ್ರಕ್ರಿಯೆಯನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಂಗಳವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ರಾಜ್ಯ ಬಜೆಟ್‌ನಲ್ಲಿ ಈ ಘೋಷಣೆ ಮಾಡಲಾಗಿದ್ದು, ಇದೀಗ ಸ್ವಾತಂತ್ರ್ಯ ದಿನಾಚರಣೆಯೊಳಗೆ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಹಾಗೂ ಗ್ರಾಮೀಣ ಸ್ವಯಂ ಆಡಳಿತದ ಕನಸು ಕಂಡಿದ್ದ ಮಹಾತ್ಮ ಗಾಂಧಿ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದ ವೇಳೆ, ದೇಶದ 2.68 ಲಕ್ಷ ಗ್ರಾಮ ಪಂಚಾಯಿತಿಗಳಿಗೂ ಮಹಾತ್ಮ ಗಾಂಧಿ ಹೆಸರಿಡುವಂತೆ ತಾವು ಸಲಹೆ ನೀಡಿದ್ದಾಗಿ ಸಚಿವರು ತಿಳಿಸಿದರು. ಜೊತೆಗೆ, VB-G RAM G ಯೋಜನೆಯ ಹೆಸರಿನ ಮುಂಚೆ ಮಹಾತ್ಮ ಗಾಂಧಿ ಅವರ ಹೆಸರನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವುದಾಗಿ ಹೇಳಿದರು. ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಪಂಚಾಯಿತಿ ಅಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಯುವಕರು ನಗರಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.

You cannot copy content of this page

Exit mobile version