242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಭೀಕರವಾಗಿ ಪತನಗೊಂಡಿದೆ. ಅಧಿಕಾರಿಗಳು ಮತ್ತು ಪೊಲೀಸರಿಂದ ಸಿಕ್ಕ ಮಾಹಿತಿಯಂತೆ ವಿಮಾನದಲ್ಲಿದ್ದ ಅಷ್ಟೂ 242 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಲಂಡನ್‌ಗೆ ತೆರಳುತ್ತಿದ್ದ ವಿಮಾನ AI 171 ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಐದೇ ಐದು ನಿಮಿಷಗಳ ಅಂತರದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ತೋರಿದ ತಾಂತ್ರಿಕ ಸಮಸ್ಯೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಲುಪುವಷ್ಟರಲ್ಲಿ ಈ ಘೋರ ದುರಂತ ನಡೆದಿದೆ.
242 ಜನರೊಂದಿಗೆ ಲಂಡನ್‌ಗೆ ಹೊರಟಿದ್ದ ಪ್ರಯಾಣಿಕರ ವಿಮಾನ ಗುರುವಾರ ಪತನಗೊಂಡ ನಂತರ ಯಾರೂ ಬದುಕುಳಿದಿರುವ ನಿರೀಕ್ಷೆಯಿಲ್ಲ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.
ವಿಮಾನ ಡಿಕ್ಕಿ ಹೊಡೆದ ಕಟ್ಟಡ ವೈದ್ಯಕೀಯ ಕಾಲೇಜು ಆಗಿದ್ದು, ವಿಮಾನದಲ್ಲಿ ಮೃತಪಟ್ಟವರ ಜೊತೆಗೆ ವೈದ್ಯಕೀಯ ಕಾಲೇಜಿನಲ್ಲಿಯೂ ಹೆಚ್ಚಿನ ಸಾವುಗಳು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ವೈದ್ಯಕೀಯ ಕಾಲೇಜಿನಲ್ಲೇ ಸುಮಾರು 30 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
242 ಪ್ರಯಾಣಿಕರಲ್ಲಿ 169 ಪ್ರಯಾಣಿಕರು ಭಾರತೀಯರು, 53 ಮಂದಿ ಬ್ರಿಟಿಷ್ ಪ್ರಜೆಗಳು, ಏಳು ಮಂದಿ ಪೋರ್ಚುಗೀಸರು ಮತ್ತು ಒಬ್ಬರು ಕೆನಡಾದವರು ಎಂದು ತಿಳಿದು ಬಂದಿದೆ. ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು. ಅವರೂ ಸಹ ಸಾವನ್ನಪ್ಪಿದ್ದಾರೆ.