Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ, ಅದು ನಮ್ಮ ಶಕ್ತಿ: ಪ್ರಧಾನಿ ಮೋದಿ

ಹೊಸದೆಹಲಿ: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ, ನಮಗೆ ಅದು ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯಲ್ಲಿ ಎನ್​ಡಿಎ ಮಿತ್ರಪಕ್ಷಗಳ ಸಭೆಯ ನಂತರ ಮಾತನಾಡಿದ ಅವರು, ಎನ್​ಡಿಎ ಮೈತ್ರಿಕೂಟದಲ್ಲಿ ಯಾವ ಪಕ್ಷವೂ ದೊಡ್ಡದಲ್ಲ, ಯಾವುದೂ ಸಣ್ಣದಲ್ಲ. ಲೋಕಸಭೆ ಚುನಾವಣೆಯಲ್ಲಿ 2 ಅವಧಿಯಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿದ್ದು, ನಾವು ಎನ್‌ಡಿಎ ಒಕ್ಕೂಟದ ಸರ್ಕಾರ ರಚನೆ ಮಾಡಿದ್ದೆವು.

ನಮಗೆ ದೇಶದ ಜನರ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.

ನಮ್ಮಲ್ಲಿ (ಎನ್​ಡಿಎ) ವಂಚಿತರು, ಶೋಷಿತರ ನಡುವೆ ಕೆಲಸ ಮಾಡುವ ಪಕ್ಷಗಳಿವೆ. ನಮ್ಮ ಒಕ್ಕೂಟದ ಮುಖ್ಯ ಉದ್ದೇಶವೇ ದೇಶ, ಅಭಿವೃದ್ಧಿ ಮೊದಲು ಎಂಬುದು. ಅಧಿಕಾರಕ್ಕೆ ಬಂದ ಮೇಲೆ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಹೀಗಾಗಿ ಬಡವರು, ರೈತರು ಎನ್‌ಡಿಎ ಸರ್ಕಾರವನ್ನು ನಂಬಿದ್ದಾರೆ. ದೇಶದ ಬಡವರಿಗೆ ಒಂದು ಮನೆ ಬೇಕು, ಬ್ಯಾಂಕ್ ಸಾಲ ಬೇಕು. ಇದರಿಂದ ಅವರ ಕನಸುಗಳಿಗೆ ರೆಕ್ಕೆ ಬರಲಿದೆ ಎಂದು ತಿಳಿಸಿದರು.

ಎನ್​ಡಿಎ ಮೈತ್ರಿಕೂಟವು ದೇಶದ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯಲ್ಲಿ ನಡೆದ ಎನ್​ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್​ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್​ಮೆಂಟ್​ ಆಸ್ಪಿರೇಷನ್​.

ಈ ಮೈತ್ರಿಕೂಟ ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ದೇಶದಲ್ಲಿ ಸ್ಥಿರವಾದ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ನಕರಾತ್ಮಕ ರಾಜಕಾರಣ ಮಾಡಿಲ್ಲ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವು ಪ್ರಯತ್ನ ಮಾಡಿದ್ದೇವೆ. ನಾವೆಲ್ಲರೂ ಒಂದು ಗುರಿ ಸಾಧಿಸಲು ಮುನ್ನುಗ್ಗುತ್ತಿದ್ದೇವೆ. ಆದರೆ, ಅಭಿವೃದ್ಧಿ ವಿಚಾರದಲ್ಲೂ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಮೋದಿ ಟೀಕಿಸಿದರು.

ಎನ್‌ಡಿಎಯ 25 ವರ್ಷಗಳ ಈ ಪಯಣಕ್ಕೆ ಮತ್ತೊಂದು ಕಾಕತಾಳೀಯ ಸಂಗತಿಯೊಂದಿದೆ. ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶವು ದೊಡ್ಡ ಗುರಿಯನ್ನು ಸಾಧಿಸಲು ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವ ಸಮಯ ಇದು. ಈ ಗುರಿಯು ಅಭಿವೃದ್ಧಿ ಹೊಂದಿದ ಭಾರತ, ಸ್ವಾವಲಂಬಿ ಭಾರತವಾಗಿದೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು