ಸೋದರಸಂಬಂಧಿಗಳಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿಯ ನಡುವೆ ಶಿವಸೇನೆ ಮುಖವಾಣಿ ‘ಸಾಮ್ನಾ’ ವಿಶೇಷ ಸಂಪಾದಕೀಯ ಹೆಚ್ಚು ಗಮನ ಸೆಳೆದಿದೆ. ರಾಜ್ ಠಾಕ್ರೆ ತಾನು ಸಂಪೂರ್ಣವಾಗಿ ಬಿಜೆಪಿ ಸಖ್ಯ ತೊರೆದರೆ ಮಾತ್ರ ನಮ್ಮ ದೋಸ್ತಿ ಸಿಗುತ್ತದೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ.
ಮರಾಠಿ ಅಸ್ಮಿತೆಯ ಅಡಿಯಲ್ಲೇ ಹುಟ್ಟಿಕೊಂಡ ಶಿವಸೇನೆಗೆ ಈಗ ಬಿಜೆಪಿ ಮತ್ತು ಏಕನಾಥ ಶಿಂಧೆಯ ಬಣ ಸಮಾನ ಎದುರಾಳಿಗಳು. ಹೀಗಾಗಿ ರಾಜ್ ಠಾಕ್ರೆಯವರು ಅವರಿಬ್ಬರ ದೋಸ್ತಿಯನ್ನು ಸಂಪೂರ್ಣವಾಗಿ ತೊರೆದರೆ ಮಾತ್ರ ಒಟ್ಟಾಗಿ ಎದುರಾಳಿಗಳನ್ನು ಎದುರಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ. ಈ ಮೂಲಕ ರಾಜ್ ಠಾಕ್ರೆಗೆ ಉದ್ಧವ್ ಠಾಕ್ರೆ ಷರತ್ತು ಮತ್ತು ಪರೋಕ್ಷ ಆಹ್ವಾನವನ್ನು ಏಕಕಾಲಕ್ಕೆ ನೀಡಿದ್ದಾರೆ.
‘ರಾಜ್ ಠಾಕ್ರೆ ಮರಾಠಿ ಅಸ್ಮಿತೆ ಕುರಿತು ಮಾತಾಡುತ್ತಾರೆ. ಶಿವಸೇನೆ (ಅವಿಭಜಿತ) ಹುಟ್ಟಿಕೊಂಡಿದ್ದು ಸಹ ಅದೇ ಕಾರಣಕ್ಕಾಗಿ. ಅವರು ಪ್ರತ್ಯೇಕವಾಗಿದ್ದರೆ ಮರಾಠಿಗರಿಗೇ ಸಮಸ್ಯೆ’ ಎಂದಿರುವ ಅದು ರಾಜ್ ಮತ್ತು ಉದ್ಧವ್ ನಡುವಿನ ಮೈತ್ರಿ ಸಾಧ್ಯತೆಯ ಸುಳಿವು ನೀಡಿದೆ.
ಇದರ ಜೊತೆ ಜೊತೆಗೆ ಬಿಜೆಪಿ ಮತ್ತು ಶಿಂಧೆ ಬಣಕ್ಕೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಮತ್ತು ನೈತಿಕತೆ ಇಲ್ಲ ಎಂದು ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ.