ಚೆನ್ನೈ: ಮಿತ್ರಪಕ್ಷ ಬಿಜೆಪಿಯ ವರ್ತನೆಯಿಂದ ಅಣ್ಣಾಡಿಎಂಕೆ ಪಕ್ಷದಲ್ಲಿ ಅಸಮಾಧಾನ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದಾಗ ಅವರನ್ನು ಭೇಟಿಯಾಗಲು ಅಪಾಯಿಂಟ್‌ಮೆಂಟ್ ನೀಡದಿರುವ ಬಗ್ಗೆ ಪಕ್ಷದ ಹಿರಿಯ ನಾಯಕ ಪನ್ನೀರ್ ಸೆಲ್ವಂ (ಒ.ಪಿ.ಎಸ್.) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ರಾಜ್ಯಕ್ಕೆ ಬರಬೇಕಾದ ₹2,151 ಕೋಟಿ ಸರ್ವಶಿಕ್ಷಾ ಅಭಿಯಾನದ ನಿಧಿಯನ್ನುಕೇಂದ್ರ ಸರ್ಕಾರ ತಡೆಹಿಡಿದಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ಈ ನಡೆ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.
“ಕೇಂದ್ರದ ಈ ಧೋರಣೆಯಿಂದ ಶಿಕ್ಷಣ ಹಕ್ಕು ಕಾಯಿದೆ ಮೂಲಕ 25% ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರಲು ಸಾಧ್ಯವಾಗಲಿಲ್ಲ. ಈ ಯೋಜನೆಯಡಿ ಶಾಲೆಗಳಿಗೆ ಸೇರಿದ್ದವರ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ” ಎಂದು ಅವರು ಹೇಳಿದರು.
ಮೋದಿ ಅಪಾಯಿಂಟ್‌ಮೆಂಟ್ ನಿರಾಕರಿಸಿದ ಬಗ್ಗೆ ಪನ್ನೀರ್ ಸೆಲ್ವಂ ಅವರ ಸಲಹೆಗಾರರು ಪ್ರತಿಕ್ರಿಯಿಸಿ, ಬಿಜೆಪಿ ನೆರಳಿನಿಂದ ಹೊರಬರುವಂತೆ ತಮ್ಮ ನಾಯಕರಿಗೆ ಕರೆ ನೀಡಿದರು.