ಬೆಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ 74 ಅಸಹಜ ಸಾವುಗಳ ಪೈಕಿ ನಿಯಮ ಬದ್ಧ ಎಫ್ಐಆರ್ ಆಗದ ಯುಡಿಆರ್ ಪ್ರಕರಣಗಳನ್ನು ಗುರುತಿಸಿ ಎಫ್ಐಆರ್ ದಾಖಲಿಸಲು ಸರ್ಕಾರ ಸಿದ್ದವಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠಕ್ಕೆ ಭರವಸೆ ನೀಡಿದೆ.
ಹಿರಿಯ ವಕೀಲ ಎಸ್ ಬಾಲನ್ ಅವರು ಕುಸುಮಾವತಿ ಪರವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಮುಖ್ಯನ್ಯಾಯಮೂರ್ತಿಯವರ ಪೀಠದಲ್ಲಿ ನಡೆದಿದ್ದು, ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
‘ಸರ್ಕಾರ ನಿಷ್ಪಕ್ಷಪಾತವಾಗಿದೆ. ಅರ್ಜಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ನಮಗೆ ಯಾವ ತಕರಾರೂ ಇಲ್ಲ. ಈಗಾಗಲೇ ಎಸ್ಐಟಿ ರಚನೆಯಾಗಿದೆ. ಎಸ್ಐಟಿ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಸಂತ್ರಸ್ತರನ್ನು ಸಂಪರ್ಕಿಸಿದೆ. ಯಾವ್ಯಾವ ಪ್ರಕರಣದಲ್ಲಿ ಸಂತ್ರಸ್ತರನ್ನು ಸಂಪರ್ಕಿಸಿದ್ದಾರೆ, ಅದರ ಬೆಳವಣಿಗೆಗಳು ಏನು ಎಂಬ ವರದಿಯನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೇಳಿದರು.
‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿರುವ 74 ಪ್ರಕರಣಗಳನ್ನು ಪರಿಶೀಲಿಸಿ ಎಸ್ಐಟಿಯಿಂದ ವರದಿ ತರಿಸಿಕೊಳ್ಳುತ್ತೇವೆ. ಯಾವ್ಯಾವ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿಲ್ಲವೋ ಅಂತಹ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಸೂಚಿಸುತ್ತೇವೆ. ಯಾವ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆಯೋ ಅಂತಹ ಪ್ರಕರಣಗಳ ತನಿಖಾ ವರದಿಯನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೇಳಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್ ‘ ಎಸ್ಐಟಿಗೆ ಸರ್ಕಾರ ಪೊಲೀಸ್ ಠಾಣೆಯ ಮಾನ್ಯತೆ ನೀಡಿದೆ. ಹಾಗಾಗಿ ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಬೇಕಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಎಲ್ಲಾ 74 ಸಾವುಗಳ ಎಫ್ಐಆರ್ ದಾಖಲಿಸಬೇಕಿತ್ತು. ಆದರೆ ಯುಡಿಆರ್ ದಾಖಲಿಸಿ ಕಾನೂನು ಮೀರಿ ಶವಸಂಸ್ಕಾರ ನಡೆಸಲಾಗಿದೆ. ಆದ್ದರಿಂದ ಪ್ರತೀ ಯುಡಿಆರ್ ಪ್ರಕರಣಗಳು ಕಾನೂನು ಪ್ರಕಾರ ಎಫ್ಐಆರ್ ಆಗಬೇಕಿದ್ದು, ಆ ಬಳಿಕ ಅದರ ಬಗ್ಗೆ ಪ್ರತ್ಯೇಕ ಪ್ರತ್ಯೇಕ ವರದಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಕೆಲಸವನ್ನು ಪೊಲೀಸರು ಮಾಡಿಲ್ಲ’ ಎಂದು ವಾದಿಸಿದರು.
ಎಫ್ಐಆರ್ ಮಾಡದೇ ಯುಡಿಆರ್ ತನಿಖೆ ಪೂರ್ಣಗೊಳಿಸದೇ ಪತ್ತೆಯಾಗದ ಪ್ರಕರಣ ಎಂದು ಹೇಳಿರುವ ಪ್ರಕರಣಗಳನ್ನು ಎಫ್ಐಆರ್ ಮಾಡಲು ನೀವೇ (ಸರ್ಕಾರ) ಸೂಚಿಸಬಹುದಲ್ಲವೇ ? ಎಂದು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರನ್ನು ನ್ಯಾಯಪೀಠ ಪ್ರಶ್ನಿಸಿತು.
‘ನಿಯಮಬದ್ಧ ತನಿಖೆ ಪೂರ್ಣಗೊಳಿಸದೇ ಪತ್ತೆಯಾಗದೇ ಇರುವ ಪ್ರಕರಣ ಎಂದು ಘೋಷಿಸಿಕೊಂಡ ಪ್ರಕರಣಗಳನ್ನು ಎಫ್ಐಆರ್ ಮಾಡಲು ಸೂಚಿಸಲಾಗುವುದು. ಎಫ್ಐಆರ್ ಮಾಡಿರುವ ಪ್ರಕರಣಗಳ ಬಗ್ಗೆ ನ್ಯಾಯಪೀಠಕ್ಕೆ ವರದಿ ನೀಡಲಾಗುವುದು’ ಎಂದು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೇಳಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೇವಲ ಎಸ್ಐಟಿಯನ್ನು ಮಾತ್ರ ಪ್ರತಿವಾದಿ ಮಾಡಲಾಗಿತ್ತು. ನ್ಯಾಯಪೀಠವು ಸರ್ಕಾರವನ್ನೂ ಪ್ರತಿವಾದಿ ಮಾಡಿ ನೋಟಿಸ್ ಜಾರಿ ಮಾಡಿತು. ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರ ಮನವಿಯಂತೆ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 19 ಕ್ಕೆ ಮುಂದೂಡಲಾಗಿದೆ.
