ಕಾರವಾರ/ಸಿದ್ದಾಪುರ: ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದ 43 ವರ್ಷದ ವಸಂತ ನಾಯ್ಕ ಅವರ ಕೊಲೆಗೆ ಸಂಬಂಧಿಸಿದಂತೆ, ಜನಪ್ರಿಯ ಟಿವಿ ಜ್ಯೋತಿಷಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಹೆಮ್ಮನಬೈಲು ಮೂಲದ, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿಷಿ ಕಮಲಾಕರ್ ಹೆಗಡೆ (48) ಮತ್ತು ಮೃತ ವಸಂತ ಅವರ ಅತ್ತಿಗೆ (ಸಹೋದರನ ಪತ್ನಿ) ಸುಚಿತ್ರಾ ನಾಯ್ಕ (36) ಸೇರಿದಂತೆ ಇತರ ಆರು ಶಂಕಿತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಹೆಗಡೆ ಮತ್ತು ಇತರ ಇಬ್ಬರು ಶಂಕಿತರನ್ನು ಸಿದ್ದಾಪುರದಲ್ಲಿ ಇರಿಸಲಾಗಿದ್ದು, ಉಳಿದ ನಾಲ್ವರನ್ನು ಶಿವಮೊಗ್ಗದಲ್ಲಿ ಇರಿಸಲಾಗಿದೆ.
ಆರೋಪಿ ಹೆಗಡೆಯನ್ನು ಸಿದ್ದಾಪುರಕ್ಕೆ ಕರೆತಂದ ವಾಹನಕ್ಕೆ ಅವರಗುಪ್ಪದ ನಿವಾಸಿಗಳು ಮುತ್ತಿಗೆ ಹಾಕಿದರು. ಅಲ್ಲದೆ ಅವರು ಜ್ಯೋತಿಷಿಯ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದರು. ವಸಂತ ನಾಯ್ಕ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಡರಾತ್ರಿಯವರೆಗೂ ಪೊಲೀಸ್ ಠಾಣೆಯ ಹೊರಗೆ ಠಿಕಾಣಿ ಹೂಡಿದ್ದರು.
ಆರೋಪಿ ಹೆಗಡೆ, ಸುಚಿತ್ರಾ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾಗಿದೆ. ಈ ವಿಷಯದಿಂದ ಸುಚಿತ್ರಾ ಪತಿ ಮಹೇಶ್ ನಾಯ್ಕ ಖಿನ್ನತೆಗೆ ಒಳಗಾಗಿದ್ದರು. “ಮಹೇಶ್ ತನ್ನ ಮಗಳೊಂದಿಗೆ ಅವರಗುಪ್ಪದಲ್ಲಿರುವ ತಂದೆಯ ಮನೆಯಲ್ಲಿ ವಾಸವಿದ್ದರು. ಸುಚಿತ್ರಾ, ಹೆಗಡೆಯೊಂದಿಗೆ ಸೇರಿ ತನ್ನ ಪತಿ ಬಳಿಯಿದ್ದ ಮಗಳನ್ನು ಕರೆದೊಯ್ಯಲು ಅಲ್ಲಿಗೆ ಹೋಗಿದ್ದರು,” ಎಂದು ಪೊಲೀಸರು ತಿಳಿಸಿದ್ದಾರೆ.
“ಸುಚಿತ್ರಾ ಮತ್ತು ಹೆಗಡೆ ಸೇರಿ ಮಹೇಶ್ ಅವರ ಹತ್ಯೆಗೆ ಯತ್ನಿಸಿದರು. ಈ ವೇಳೆ ಮಹೇಶ್ ಅವರ ಸಹೋದರ ವಸಂತ ಅಡ್ಡಬಂದಾಗ, ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು,” ಎಂದು ಎಸ್ಪಿ ದೀಪನ್ ಎಂ.ಎನ್ ತಿಳಿಸಿದ್ದಾರೆ.
