Home ಜನ-ಗಣ-ಮನ ಹೆಣ್ಣೋಟ ಅಳು ನುಂಗಿ ನಡೆದ ಅಪ್ಪ..

ಅಳು ನುಂಗಿ ನಡೆದ ಅಪ್ಪ..

0

(ಈ ವರೆಗೆ…) ತನ್ನ ಗೆಳೆಯನ ಮನೆಯಲ್ಲಿ  ಗಂಗೆಯನ್ನು ಬಿಟ್ಟು ಮೋಹನ ಬೋಗನೂರಿಗೆ ಬಂದು ಮುನಿಸಿನಲ್ಲಿದ್ದ ತನ್ನ ತಾಯಿಯನ್ನು ಸಮಾಧಾನಿಸಿ ಗಂಗೆಯ ಆಸ್ತಿ ಅಂತಸ್ತಿನ ಬಗ್ಗೆ ಹೇಳಿದ. ಸಮಾಧಾನಗೊಂಡ ಆಕೆ ಗಂಗೆಯನ್ನು ಮನೆಗೆ ಕರೆತರಲು ಹೇಳುತ್ತಾಳೆ. ಆ ಕಡು ಬಡತನಕ್ಕೆ  ಹೊಂದಿಕೊಂಡ ಗಂಗೆ ಈ  ನಡುವೆ ಮಾತಾಡಲು ಸಿಕ್ಕ ತನ್ನೂರಿನ ಸಂಕವ್ವನೊಡನೆ ಅಪ್ಪ ಅಮ್ಮನನ್ನು ಮನೆಗೆ ಬರಹೇಳಿದಳು. ಅಪ್ಪ ಅವ್ವ ಬಂದರೇ?  ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಐದನೆಯ ಕಂತು.

ಪೂನಕ್ಕೆಂದು ಹೊರಟ ಮಗಳು  ಭೋಗನೂರಿನಲ್ಲಿದ್ದಾಳೆ ಎಂಬ ಸುದ್ದಿಯನ್ನು ಸಂಕವ್ವನಿಂದ ತಿಳಿದ ಬೋಪಯ್ಯ ಸಾಕವ್ವರು ಆತಂಕಗೊಂಡು ಮಗಳನ್ನು ನೋಡಲು ಭೋಗನೂರಿಗೆ ಓಡಿ ಬಂದರು. ತೊಲೆತುಂಡಿನಂತಿದ್ದ ಬಾಗಿಲ ಹೊರತಾಗಿ, ಮಾಡಿಗೆ ಹೊದೆಸಿದ್ದ ಹೆಂಚುಗಳೆಲ್ಲ  ಚೂರಾಗಿ,  ಗೋಡೆಗಳು ಸೀಳುಬಿಟ್ಟು, ಈಗಲೋ ಆಗಲೋ ಕುಸಿದು ಬಿಡುವಂತೆ ಹೆದರಿಕೆ ಹುಟ್ಟಿಸುತ್ತಿದ್ದ ಮನೆಯ ಮುಂದೆ  ಅಡಿಗೆಯ ಮಡಕೆಗಳನ್ನು ತಿಕ್ಕುತ್ತಾ ಕುಳಿತ  ಗಂಗೆಯನ್ನು ದೂರದಿಂದಲೇ ಕಂಡ ಬೋಪಯ್ಯನ ಕರುಳು ಚುರುಗುಟ್ಟಿತು “ಗಂಡು ಮಕ್ಳು ಗಂಡು ಮಕ್ಳು ಅಂತ ಕುಣಿತಿಯಲ್ಲ ನೋಡು ಇರೋಳು ಒಬ್ಳು ತಂಗಿನ ಎಂಥ ಮನೆಗೆ ತಂದು ಕಟ್ಟಿ ಕೈ ತೊಳ್ಕೊಂಡವ್ರೆ” ಎಂದು ಅಪ್ಪ, ಅವ್ವನಲ್ಲಿ ದುಮುಗುಟ್ಟಿದ. 

ಅಪ್ಪ ಅವ್ವನನ್ನು ಕಂಡು ಸಂತೋಷದಿಂದ ಅರಳಿನಿಂತ ಗಂಗೆ ಬರಬರನೆ ಮಸಿಹಿಡಿದಿದ್ದ ಕೈ ಉಜ್ಜಿಕೊಂಡು  ಓಡಿ ಬಂದು ಅವ್ವನನ್ನು ತಬ್ಬಿ ಯೋಗ ಕ್ಷೇಮ ವಿಚಾರಿಸಿದಳು. ಅಪ್ಪನ ಬಾಡಿದ ಮುಖವನ್ನು ಕಂಡು ” ಯಾಕ್ರಪ್ಪ ಈ ಮನೆ ನೋಡಿ ಬೇಜಾರಾಯ್ತ. ಅದ್ಕ್ಯಾಕೆ ಬೇಜಾರ್ ಮಾಡ್ಕೋತಿರಿ ಇನ್ ಸ್ವಲ್ಪ ದಿನುಕ್ಕೆ ಹೊಸ ಮನೆಗೆ ಕೈ ಹಾಕ್ತರಂತೆ. ಪಾಪ ಒಳ್ಳೆ ಜನ ನನ್ನುನ್ನ ಮಗ್ಳುಗಿಂತ ಹೆಚ್ಚಾಗಿ ನೋಡ್ಕೋತರೆ. ಇವರ್ ಪೂನುದ್ ಕೆಲ್ಸ ಇನ್ನೊಂದು ಸ್ವಲ್ಪ ದಿನುಕ್ಕೆ ಮುಂದುಕ್ ಹೋಗೈತೆ. ಅದ್ಕೆ ನಾನೇ ವಸಿ ದಿನ ನಿಮ್ಮೂರ್ನಲ್ಲಿದ್ದೋಗನ ಬನ್ನಿ ಅಂತ ಹೇಳಿ ಕರ್ಕೊಂಡು ಬಂದೆ” ಎಂದು ಲಘುಬಗೆಯಿಂದ ಒಳ ಕರೆದು ಕೊಂಡು ಬಂದು ನವೆದು ಜೋಲಾಡುತ್ತಿದ್ದ ಚಾಪೆಯೊಂದನ್ನು ಹಾಸಿ ಕೂರಿಸಿದಳು. ಅಪ್ಪ ಬಳೆಗಾರನಿಂದ ಈ ಮನೆಯ ಎಲ್ಲಾ ವಿಷಯವನ್ನು  ತಿಳಿದುಕೊಂಡಿದ್ದರು ಕೂಡ ಈ ಮಟ್ಟದ ಬಡತನವನ್ನು ಅವನು ನಿರೀಕ್ಷಿಸಿರಲಿಲ್ಲ.

ಸೋಗುಹಾಕಿ ಗಂಗೆಯನ್ನು ಕಟ್ಟಿಕೊಂಡು ಬಂದಿದ್ದ ಮೋಹನ  ಮಾವನ ಮುಖಕಾಣುತ್ತಿದ್ದಂತೆ ಅಂಡು ಸುಟ್ಟ ಬೆಕ್ಕಿನಂತಾದ. ನಿಂತಕಡೆ ನಿಲ್ಲಲಾರದೆ ಕೂತಕಡೆ ಕೂರಲಾರದೆ  ಚಡಪಡಿಸತೊಡಗಿದ. ಮಾತೇ ಇಲ್ಲದ ಮಾವನ ತೀಕ್ಷ್ಣ ನೋಟವನ್ನು ಎದುರಿಸಲಾರದೆ “ನನ್ನ ಫ್ರೆಂಡ್ಗೆ  ಸೀರಿಯಸ್ ಆಗಿದ್ಯಂತೆ, ಅರ್ಜೆಂಟಾಗಿ  ಸಂಪಿಗೆ ಕಟ್ಟೆಗೆ ಹೋಗ್ತಿದ್ದೀನಿ ಊಟ  ಮಾಡ್ಕೊಂಡು ಹೋಗಿ” ಎಂದು ಹೊಸ ಕತೆಯೊಂದನ್ನು ಹೊಸೆದು ಅಲ್ಲಿಂದ ಮೆಲ್ಲಗೆ ಜಾಗಖಾಲಿ ಮಾಡಿದ. ಮೋಹನನ ನಾಟಕವನ್ನು ಚೆನ್ನಾಗಿಯೇ ಅರಿತಿದ್ದ ಅಪ್ಪ ಮುಗುಮ್ ಆಗಿಯೇ ಹೂಂಗುಟ್ಟಿದ್ದ.

ಮಗ ಹೋದ ಬೆನ್ನಲ್ಲೆ ಅಡಿಗೆ ಕೋಣೆಯಿಂದ ಹೊರಗೆ ಇಣುಕಿದ ಚಿಕ್ಕತಾಯಮ್ಮ ಕಾಟಾಚಾರಕ್ಕೆ ಎಂಬಂತೆ ಒಂದೆರಡು ಮಾತುಗಳನ್ನೆಸೆದು “ಹೊಲುದಲ್ಲಿ ಎಮ್ಮೆಗೊಳ್ ಕಟ್ಟಿ ಬಂದಿದಿನಿ.. ಪಾಪ ಬಿಸ್ಲಲ್ಲಿ ಒಣಗ್ತಿರ್ತವೆ.. ಏನು ಅನ್ಕಬ್ಯಾಡಿ.. ನಿಧಾನುಕ್ಕೆ ಉಂಡುಕೊಂಡು ಹೋಗಿ”  ಎಂದು ಹೇಳಿ ಅವಳು ಕೂಡ ಹೊರಟು ಹೋದಳು. ಮಗಳ ಪ್ರೀತಿಗೆ ಕಟ್ಟು ಬಿದ್ದು ಉಣ್ಣುವ ಶಾಸ್ತ್ರ ಮುಗಿಸಿದ ಅಪ್ಪ, ಅವ್ವನಿಗೂ ತಿಳಿಯದಂತೆ ತಾನು  ಕೂಡಿಟ್ಟು ಕೊಂಡಿದ್ದ ಒಂದು ಸಾವಿರ ರೂಪಾಯಿಯನ್ನು ಗಂಗೆಯ ಕೈಗೆ ತುರುಕಿ ” ಜೀವ್ನ ಒಂದೇ ಸಮುಕ್ಕಿರದಿಲ್ಲ ಗಂಗು ತಕೊ ಇದುನ್ನ ನಿನ್ನ ಕಷ್ಟ್ ಕಾಲುಕ್ಕಿಟ್ಕೊ ಯಾರ್ಗೂ ತೋರುಸ್ಬ್ಯಾಡ” ಎಂದು ಹೇಳಿ ಒತ್ತರಿಸಿ ಬಂದ ದುಃಖವನ್ನು  ಮಗಳ ಕಣ್ಣಿಗೆ ಕಾಣದಂತೆ ನುಂಗುತ್ತಾ ಅವಳಿಗೆ  ಬೆನ್ನು ಮಾಡಿ ನಡೆದೇ ಬಿಟ್ಟ. 

ಹಾಸಿ ಹೊದ್ದು ಮಲಗುವಷ್ಟು ಬಡತನವಿದ್ದರೂ ಜನ ಜಾತ್ರೆ ಸೇರದೆ, ಅಹಂಕಾರದಿಂದ ಮೆರೆಯುತ್ತಿದ್ದ ಚಿಕ್ಕತಾಯಮ್ಮನ ಕುಟುಂಬವನ್ನು ಕಂಡು ಇಡೀ ಊರಿಗೆ ಊರೆ ಕಂಬಳಿ ಹುಳ ಮೈ ಮೇಲೆ ಹರಿದಂತೆ ಹೇಕರಿಸುತ್ತಿತ್ತು. ಗಂಗೆ ಭೋಗನೂರಿಗೆ ಬಂದ ನಾಲ್ಕನೇ ದಿನ ಮನೆಯ ಬಳಿ ಬಂದ ಕುಲವಾಡಿ ಕಾಳ ಮೋಹನನ್ನು ಕರೆದು “ಅಳ್ಳಿಮರುತವು ಪಂಚಾಯ್ತಿ ಸೇರೈತೆ ಬರ್ಬೇಕಂತೆ ಮೋನಪ್ಪ” ಎಂದು ಕರೆದು ಹೋದ. ಯಾಕೆ? ಏನು? ಎನ್ನುವ ಯಾವ ಪ್ರಶ್ನೆಗೂ ಕಾಳನಲ್ಲಿ ಉತ್ತರವಿರಲಿಲ್ಲವಾದ್ದರಿಂದ ಬನಿಯನ್‌ ನಲ್ಲಿದ್ದ ಮೋಹನ ಶರಟೇರಿಸಿ ಪಂಚಾಯ್ತಿ ಕಟ್ಟೆಗೆ ಬಂದ.

ಅರಳಿ ಕಟ್ಟೆ ಕೆಳಗೆ ಸೇರಿದ್ದ ಜನರನ್ನೆಲ್ಲ ಕೆಕ್ಕರಿಸಿ ನೋಡಿದ ಮೋಹನ “ಏನ್ ಸಮಾಚಾರ ನನ್ನನ್ಯಾಕೆ ಕರಿಯಕ್ ಕಳಿಸಿದ್ರಿ” ಎಂದು ಕೇಳಿದ. ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ಮೋಹನನ ಅಜಾತಶತ್ರು ಗಿರಿ ಗೌಡ “ನೀನು ಇಡೀ ಊರಿಗೆ ಊಟ ಹಾಕ್ಬೇಕು ಇಲ್ಲ ದಂಡ ಕಟ್ಬೇಕು” ಎಂದು ಆಜ್ಞಾಪಿಸಿದ. ಕಾರಣ ತಿಳಿಯದ ಮೋಹನ “ಮೊದ್ಲು ಕಾರಣ ಏನು ಅಂತ ಹೇಳಿ ಆಮೇಲೆ ದಂಡ ಕೇಳಿ” ಎಂದು ಭುಸುಗುಟ್ಟಿದ. ಬೇಕಂತಲೆ ಕಾಲು ಮೇಲೆ ಕಾಲುಹಾಕಿ ಇನ್ನಷ್ಟು  ಸೆಟೆದು ಕುಳಿತ ಗಿರಿಗೌಡ  “ಅದ್ಯಾವುಳುನ್ನೊ ಕರ್ಕೊಂಡ್ ಬಂದ್ ಇಟ್ಕೊಂಡು ನಾಕ್ ದಿನ ಆಯ್ತಂತೆ, ಯಾವ ಜಾತಿಯೋ  ಯಾವ ಕುಲವೋ…..” ಎಂದು ನಾಲಿಗೆ ಹರಿಬಿಟ್ಟದ್ದೆ ಗಿರಿಗೌಡನ ದಿಕ್ಕು ತಪ್ಪುತ್ತಿರುವ ಮಾತನ್ನು ಅರ್ಧಕ್ಕೆ ತಡೆದ ಪಂಚಾಯಿತಿ ಅಧ್ಯಕ್ಷ ಹಲಗೆಗೌಡ “ಏ ನೀನ್ ಸುಮ್ನಿರಪ್ಪ ಗಿರಿಗೌಡ” ಎಂದು ಅವನ ಬಾಯಿ ಮುಚ್ಚಿಸಿ “ಅಲ್ಲ ಕಣಪ್ಪ ಮೋನ ಈ ಊರ್ನಲ್ಲಿ ಯಾರ್ ಮನೆ ಮದುವೆ ಮುಂಜಿ ಆದ್ರೂ ಊರಿಗೆ ಊಟ ಹಾಕುಸ್ಬೇಕು ಅನ್ನೋದು ಮೊದ್ಲಿಂದ ನಡ್ಕೊಂಡು ಬಂದಿರೋ ನಿಯಮ ಅಲ್ವೇನಪ್ಪಾ. ಅದುಕ್ಕೆ ನಿಮ್ಮನೆಯವರು ಹೊರ್ತಲ್ಲ ಅಲ್ವ, ನೋಡು ಊರವ್ರೆಲ್ಲಾ ಕೇಳ್ತಾವ್ರೆ ಒಂದಾ ಊರಿಗೆ ಊಟ ಹಾಕ್ಸು, ಇಲ್ಲ ದಂಡ ಕಟ್ಟು”  ಎಂದು ಅಧಿಕಾರದ ದನಿಯಲ್ಲಿ ಹೇಳಿದ.

ಮೊದಲೇ ಗಿರಿ ಗೌಡನ ಮಾತು ಕೇಳಿ ಕೆರಳಿ ನಿಂತಿದ್ದ ಮೋಹನ ಬಾಯಿ ತೆಗೆದದ್ದೆ ತಡ “ನಾನು ಮಲಗೋದು ನನ್ ಹೆಂಡ್ತಿ ಹತ್ರ ನಿಮ್ಮ್ ಹೆಂಡ್ತಿರ್ ಹತ್ರ ಅಲ್ವಲ್ಲ ನಿಮಗೆಲ್ಲಾ ಊಟ ಹಾಕಕ್ಕೆ ಅಥವಾ ದಂಡ ಕಟ್ಟಕ್ಕೆ ನನಗೇನು ತಲೆಕೆಟ್ಟಿಲ್ಲ ಊರ್ಗೆಲ್ಲ ಊಟಹಾಕೋ ಶಕ್ತಿ ಇದ್ದಿದ್ರೆ ನಾನ್ಯಾಕೆ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡು ಬರ್ತಿದ್ದೆ ಮುಟ್ಟಾಳ್ರ ” ಎಂದು ಹೇಳಿದ್ದೆ ತಡ ಅಲ್ಲಿ ನೆರೆದಿದ್ದ ನೂರಾರು ಜನ ಬೆಂಕಿ ಚೆಂಡಿನಂತೆ ಪುಟಿದು ನಿಂತು ” ಆ ಬಡ್ಡಿಮಗುನ ಹುಟ್ಲಿಲ್ಲ ಅನ್ನುಸ್ಬುಡನ ಕಟ್ರೊ ಅವನ ಎಡಿಮುರಿನ” ಎಂದು ಮೋಹನನ ಸುತ್ತ ಮುತ್ತಿಗೆ ಹಾಕಿತು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಹಿಂದಿನ ಸಂಚಿಕೆ- ಗುಡಿಸಲೆಂಬ ಅರಮನೆಯಲ್ಲಿ ಗಂಗೆ

You cannot copy content of this page

Exit mobile version