“..ಪತ್ನಿಯಾದವಳು ಮಂಗಳಸೂತ್ರ, ಬೊಟ್ಟು ಧರಿಸದಿದ್ದರೆ ಗಂಡನಿಗೆ ಅವಳ ಮೇಲಿನ ಆಸಕ್ತಿ ಎಲ್ಲಿರುತ್ತದೆ ಎಂದು ಒಂದು ನ್ಯಾಯಾಲಯ ಹೇಳಿದರೆ, ಮೂರೂವರೆ ವರ್ಷ ಮಗುವಿನ ವರ್ತನೆ ಅದರ ಮೇಲಾದ ಅತ್ಯಾಚಾರಕ್ಕೆ ಕಾರಣ ಎಂದು ಅಧಿಕಾರಿಯೊಬ್ಬ ಮಾತನಾಡುತ್ತಾನೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ
ಕ್ರಿಯಾಶೀಲತೆಯ ವೇಗ ಹೆಚ್ಚಿಸೋಣ ಎನ್ನುತ್ತದೆ ಈ ವರ್ಷದ ಮಹಿಳಾ ದಿನದ ಥೀಮ್. ವರ್ಷ ವರ್ಷವೂ ಮಹಿಳಾ ದಿನಗಳನ್ನು ಆಚರಿಸುತ್ತಲೇ ಬಂದಿದ್ದೇವೆ. ಮಹಿಳಾ ದಿನದ ಅಂಗವಾಗಿ ಏನೆಲ್ಲ ಆಚರಣೆಗಳು, ಸೆಮಿನಾರ್ ಗಳು, ಕಾರ್ಯಕ್ರಮಗಳು, ಸನ್ಮಾನಗಳು ನಡೆಯುತ್ತಲೇ ಇರುತ್ತದೆ. ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಇಟ್ಟಿದ್ದೇವೆ. ಅಸ್ಮಿತೆ ದಾಖಲಾಗುತ್ತಿದೆ. ಆದರೆ ಹಿಂತಿರುಗಿ ನೋಡಿದಾಗ ನಾವು ಬಂದ ಹಾದಿಗಿಂತಲೂ ಹೆಚ್ಚಾಗಿ ಇನ್ನಷ್ಟು ಮತ್ತಷ್ಟು ಸವಾಲುಗಳು ಹೆಚ್ಚುತ್ತಲೇ ಇವೆ.
ಒಂದಿಷ್ಟು ಕ್ಷೇತ್ರಗಳಲ್ಲಿ ಹಕ್ಕುಗಳು, ಅವಕಾಶಗಳು ದೊರೆತಿವೆ ಎನ್ನುವುದನ್ನು ಹೊರತುಪಡಿಸಿ ಭಾರತದಲ್ಲಿ ಮಹಿಳಾ ಸಬಲೀಕರಣದ ಹಾದಿ ಬಹಳಷ್ಟು ದೂರವಿದೆ. ಎಲ್ಲೋ ಇರುವ ಸುನೀತಾ ವಿಲಿಯಮ್ಸ್ ನಮ್ಮವಳು ಎಂದು ಮಾತಾಡುವ ನಾವು ನಮ್ಮಲ್ಲಿ ದಿನಾ ಪತ್ರಿಕೆಗಳಲ್ಲಿ ಇನ್ನೂ ಹೆಣ್ಣು ಭ್ರೂಣಹತ್ಯೆ, ಬಾಣಂತಿ ಸಾವು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎನ್ನುವ ಅಸುರಕ್ಷಿತ ಹಂತದಲ್ಲೇ ಇದ್ದೇವೆ. ಸಾಮಾಜಿಕ, ಆರ್ಥಿಕ, ಲಿಂಗಾಧಾರಿತ ತಾರತಮ್ಯ, ಹಿಂಸೆ, ದೌರ್ಜನ್ಯ ಇನ್ನಿತರ ಸಮಸ್ಯೆಗಳು ಸಬಲೀಕರಣಕ್ಕೆ ಸವಾಲಾಗಿ ಕಾಡುತ್ತಲೇ ಇವೆ.
ಮಹಿಳೆಯರ ಸುರಕ್ಷತೆಗೆ, ಲಿಂಗ ಸಮಾನತೆಗೆ, ಸಬಲೀಕರಣದೆಡೆಗಿನ ಕ್ರಿಯಾಶೀಲತೆಯ ವೇಗವನ್ನು ಹೆಚ್ಚಿಸಬೇಕೆನ್ನುವ ಕರೆಯ ಜೊತೆ ಜೊತೆಗೆ ಹೆಣ್ಣಿನ ಮೇಲಾಗುತ್ತಿರುವ ಹಿಂಸೆಯ ಕುರಿತ ಅಂಕಿ ಅಂಶಗಳು ನಾವು ಮತ್ತೆ ನೂರಾರು ವರ್ಷ ಹಿಂದೆ ಹೋಗಿದ್ದೇವೇನೋ ಎನಿಸುವ ಹಾಗೆ ಮಾಡುತ್ತವೆ. ಹಲವಾರು ಕ್ಷೇತ್ರದಲ್ಲಿ ಸಾಧಿಸಿದರೂ ಇನ್ನೂ ಲಕ್ಷಾಂತರ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಸ್ಥಾಪಿಸಿಕೊಳ್ಳಲು ಸಹ ಸಾಧ್ಯವಾಗಿಲ್ಲ ಅನ್ನುವುದು ಸಹ ಅಷ್ಟೇ ಸತ್ಯ.
ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಉಂಟಾಗುತ್ತಿರುವ ದೊಡ್ಡ ಸವಾಲೆಂದರೆ ಅದು ಮಹಿಳೆಯರ ಮೇಲಾಗುತ್ತಿರುವ ಹಿಂಸೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅನುಸಾರ, 2022 ರಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯದ 4,28,278 ಅಪರಾಧಗಳು ವರದಿಯಾಗಿದ್ದವು. ಇದು 2011 ರಲ್ಲಿನಡೆದ ಗಣತಿಗಿಂತ 87% ಹೆಚ್ಚಳ ಎನ್ನುವುದು ಆಘಾತಕಾರಿ ವಿಷಯ. ಇವುಗಳಲ್ಲಿ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಹೆಣ್ಣುಮಕ್ಕಳ ಮಾರಾಟ ಎಲ್ಲವೂ ಸೇರಿದ್ದವು.
ಕೇವಲ 2022 ಒಂದೇ ವರ್ಷದಲ್ಲಿ 31,677 ಅತ್ಯಾಚಾರಗಳು ನಡೆದಿದ್ದವು. ಅಂದರೆ ಪ್ರತಿ ದಿನಕ್ಕೆ 86 ಅಥವಾ ಪ್ರತಿ ಗಂಟೆಗೆ ಮೂರಕ್ಕೂ ಹೆಚ್ಚು ಅತ್ಯಾಚಾರ. ಭಾರತದಲ್ಲಿ ಪ್ರತಿ ಇಪ್ಪತ್ತೇಳು ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತದೆ ಎನ್ನುತ್ತವೆ ವರದಿಗಳು.
2022 ರಲ್ಲಿ 11,000 ಕ್ಕೂ ಹೆಚ್ಚು ವೈವಾಹಿಕ ಅತ್ಯಾಚಾರದ ಪ್ರಕರಣಗಳು ವರದಿಯಾಗಿದ್ದವು. ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಸಂಗಾತಿಯಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾಳೆ ಎನ್ನುತ್ತದೆ ಯುನಿಸೆಫ್ ನ ವರದಿ. ಇತ್ತೀಚಿನ NCRB ಅಂಕಿ ಅಂಶಗಳ ಅನುಸಾರ, ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ 28% ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ.
ಲೈಂಗಿಕ ದೌರ್ಜನ್ಯಗಳ ಸಮಸ್ಯೆಗಳು ಒಂದೆಡೆಯಾದರೆ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆಗಳಂತಹ ಸಮಸ್ಯೆಗಳು ಇನ್ನೂ ಚಾಲ್ತಿಯಲ್ಲಿವೆ. ದೇಶದ ಎಷ್ಟೋ ಕಡೆ ಇನ್ನೂ ಭ್ರೂಣದ ಲಿಂಗವನ್ನು ಅಕ್ರಮವಾಗಿ ಪತ್ತೆ ಹಚ್ಚುವುದರ ಮೂಲಕ ಹುಟ್ಟುವ ಮೊದಲೇ ಹೆಣ್ಣು ಶಿಶುವನ್ನು ಕೊಲ್ಲಲಾಗುತ್ತದೆ. ಕಳೆದ ಒಂದು ದಶಕದಲ್ಲಿ ಸುಮಾರು 12 ಮಿಲಿಯನ್ ಹೆಣ್ಣು ಭ್ರೂಣಹತ್ಯೆಗಳು ದೇಶದ ಹಲವಾರು ರಾಜ್ಯಗಳಲ್ಲಿ ನಡೆದಿವೆ ಎನ್ನುತ್ತವೆ ಅಧ್ಯಯನಗಳು.
ಪ್ರತಿದಿನವೂ ಪತ್ರಿಕೆಗಳಲ್ಲಿ ಮಹಿಳೆಯರ ಸಾಧನೆ, ಅವಕಾಶ ಅಥವಾ ಮಹಿಳಾ ಸಬಲೀಕರಣದ ಕುರಿತ ಸುದ್ದಿಗಳನ್ನು ಓದಬೇಕಿರುವ ನಾವು ಇಂದು ಮಹಿಳೆಯರ ಮೇಲಿನ ಅಪರಾಧಗಳ ಕುರಿತೇ ಓದುತ್ತಿದ್ದೇವೆ. ನಿರ್ಭಯಾ ಎನ್ನುವ ಬೆಚ್ಚಿಬೀಳಿಸುವ ಪ್ರಕರಣವನ್ನೇ ಹಿಂದಟ್ಟುವಂತೆ ಮೇಲಿಂದ ಮೇಲೆ ಅತ್ಯಾಚಾರ ಪ್ರಕರಣಗಳಾಗುತ್ತಿವೆ. ಜಾತಿಯ ಕಾರಣಕ್ಕೆ ಹೆಣ್ಣುಮಕ್ಕಳನ್ನು ಹೆತ್ತವರೇ ಕೊಲ್ಲುತ್ತಿದ್ದಾರೆ. ಇಲ್ಲೇ ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆಯ ದೊಡ್ಡ ವಿಷ ವರ್ತುಲ ಬೆಚ್ಚಿ ಬೀಳಿಸುವಂತಿತ್ತು. ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಬಾಣಂತಿಯರು ಸಾವಿಗೀಡಾದರು.
ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲದೆಡೆ ಮಾಧ್ಯಮಗಳು ಮಹಿಳೆಯೊಬ್ಬಳು ಪುರುಷನ ರೀತಿ ಮೂತ್ರ ವಿಸರ್ಜಿಸಿದ್ದು ಸರಿಯೇ ಎಂದು ಚರ್ಚೆ ಮಾಡುತ್ತವೆ. ಹತ್ತು ಹನ್ನೆರಡು ವರ್ಷಗಳಾದರೂ ನಡುಬೀದಿಯಲ್ಲಿ ಶವವಾಗುವ ಹೆಣ್ಣುಮಕ್ಕಳಿಗೆ ದೊರೆಯಬೇಕಾದ ನ್ಯಾಯ ಕಣ್ಣು ಮುಚ್ಚಿ ಕುಳಿತಿರುತ್ತದೆ.
ಪತ್ನಿ ಅಪ್ರಾಪ್ತೆಯಾಗಿದ್ದರೂ ಅವಳ ಮೇಲೆ ನಡೆಸುವ ಯಾವುದೇ ದೈಹಿಕ, ಲೈಂಗಿಕ ಕ್ರಿಯೆಯನ್ನು ಅದು ಅಸಹಜವಾಗಿದ್ದರೂ ಅದು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಒಂದು ಹೈಕೋರ್ಟ್ ತೀರ್ಪು ಕೊಟ್ಟರೆ, ವೈವಾಹಿಕ ಅತ್ಯಾಚಾರ ಅಪರಾಧವೇ ಅಲ್ಲ ಎಂದು ಇನ್ನೊಂದು ನ್ಯಾಯಾಲಯ ಹೇಳುತ್ತದೆ. ಪತ್ನಿಯಾದವಳು ಮಂಗಳಸೂತ್ರ, ಬೊಟ್ಟು ಧರಿಸದಿದ್ದರೆ ಗಂಡನಿಗೆ ಅವಳ ಮೇಲಿನ ಆಸಕ್ತಿ ಎಲ್ಲಿರುತ್ತದೆ ಎಂದು ಒಂದು ನ್ಯಾಯಾಲಯ ಹೇಳಿದರೆ, ಮೂರೂವರೆ ವರ್ಷ ಮಗುವಿನ ವರ್ತನೆ ಅದರ ಮೇಲಾದ ಅತ್ಯಾಚಾರಕ್ಕೆ ಕಾರಣ ಎಂದು ಅಧಿಕಾರಿಯೊಬ್ಬ ಮಾತನಾಡುತ್ತಾನೆ.
ಮೂಲಭೂತ ಸೌಕರ್ಯಗಳು, ಹಕ್ಕುಗಳು, ಸುರಕ್ಷತೆ ಎಲ್ಲವೂ ದೊರೆತು ಸುಭದ್ರ ವ್ಯವಸ್ಥೆಯ ನಡುವೆ ಹೆಣ್ಣು ಗಂಡು ಸಮಾನವಾಗಿ, ಸಮತೆಯ ಸಮಾಜ ಕಟ್ಟಬೇಕಾದ ಹೊತ್ತಲ್ಲಿ ನಾವು ಹೆಣ್ಣು ಮಗು ಹೆರುವಷ್ಟು, ಬೆಳೆಸುವಷ್ಟು ಸುರಕ್ಷತೆ ಈಗೆಲ್ಲಿದೆ ಎನ್ನುವಷ್ಟು ಹಿಂದೆ ಹೋಗಿದ್ದೇವೆ.
ಮತ್ತೆ ಮನುವಾದಿ, ಪುರುಷ ಪ್ರಧಾನ ಮನಸ್ಥಿತಿಗಳು ಎಳೆ ಕೂಸುಗಳನ್ನೂ ಬಿಡದೆ ಹಿಂಸಿಸುತ್ತಿದೆ.
ಇದೆಲ್ಲದರ ನಡುವೆ ನಾವು ಮಹಿಳಾ ಅಸ್ಮಿತೆ ಕಂಡುಕೊಳ್ಳುವಿಕೆಯ ಕುರಿತು ಮಾತನಾಡುತ್ತಿರುತ್ತೇವೆ. ನಾವು ಸುರಕ್ಷಿತವಾಗಿ ಕೂತು ಮಾತಾಡುವ ಹೊತ್ತಲ್ಲೇ ಇನ್ನೆಲ್ಲೋ ಒಬ್ಬ ಹೆಣ್ಣುಮಗಳು ಅಸಹಾಯಕತೆಯಿಂದ ನರಳುತ್ತಿರುತ್ತಾಳೆ.