ಕೊಪ್ಪಳ: ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿರುವ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಾಕಿಂಗ್ ಘಟನೆ ನಡೆದಿದೆ. ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಒಟ್ಟು ಐವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಇದೀಗ ಮಹಿಳೆಯರ ಮೇಲೆ ಅಪರಿಚಿತರು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.ಸಾಣಾಪುರ ಗ್ರಾಮದ ಎಡದಂಡೆ ಕಾಲುವೆ ಬಳಿ ಮಾರ್ಚ್ 6 ರಂದು ರಾತ್ರಿ ಈ ಘಟನೆ ನಡೆದಿದೆ. ಸಾಣಾಪುರ ಕೆರೆ ಬಳಿ ಹರಿದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ರಾತ್ರಿ 11:30 ರ ವೇಳೆ ವಿದೇಶಿ ಪ್ರವಾಸಿಗರು ಸೇರಿದಂತೆ ಐವರು ವಾಯುವಿಹಾರಕ್ಕೆ ಆಗಮಿಸಿದ್ದರು. ಇಸ್ರೇಲ್‌ನ ಮಹಿಳೆ, ಅಮೆರಿಕದ ಡ್ಯಾನಿಯಲ್, ಮಹಾರಾಷ್ಟ್ರದ ಪಂಕಜ್, ಒಡಿಶಾಸ ಬಿಬಾಸ್ ಹಾಗೂ ರೆಸಾರ್ಟ್ ಮಾಲಕಿ ಕಾಲುವೆ ಬಳಿ ಗಿಟಾರ್ ಬಾರಿಸುತ್ತಾ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೆಟ್ರೋಲ್ ಖಾಲಿ ಆಗಿದೆ, ಸ್ವಲ್ಪ ಹಣ ಕೊಡಿ ಎಂದು ಕೇಳಿದ್ದಾರೆ. ಪ್ರವಾಸಿಗರು ಅಯ್ಯೋ ಪಾಪ ಎಂದು 20 ರೂ. ನೀಡಿದ್ದಾರೆ. ಆದರೆ ಇನ್ನೂ 100 ರೂ. ನೀಡುವಂತೆ ಪಟ್ಟು ಹಿಡಿದು ಅವರ ಬ್ಯಾಗ್ ಅನ್ನು ಕಸಿಯಲು ಮುಂದಾಗಿದ್ದಾರೆ. ಪ್ರವಾಸಿಗರು ಹಾಗೂ ಅಪರಿಚಿತರ ನಡುವೆ ಘರ್ಷಣೆ ನಡೆದು, ದುಷ್ಕರ್ಮಿಗಳು ಎಲ್ಲಾ ಪುರುಷ ಪ್ರವಾಸಿಗರನ್ನು ಪಕ್ಕದಲ್ಲಿದ್ದ ಕಾಲುವೆಗೆ ದೂಡಿದ್ದಾರೆ. ನಂತರ ಇಸ್ರೇಲ್‌ನ ಮಹಿಳೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.ನಂತರ ಕಾಲುವೆಗೆ ಬಿದ್ದಿದ್ದ ಡ್ಯಾನಿಯಲ್ ಹಾಗೂ ಪಂಕಜ್ ಈಜಿ ಹೇಗೋ ಮೇಲೆ ಬಂದಿದ್ದಾರೆ. ಆದರೆ ಬಿಬಾಸ್ ನಾಪತ್ತೆಯಾಗಿದ್ದಾರೆ. ನಂತರ ಎಲ್ಲಾ ಸಂತ್ರಸ್ತರೂ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಇತ್ತ ನಾಪತ್ತೆಯಾಗಿದ್ದ ಬಿಬಾಸ್ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.