“..ಇದು ಕೇವಲ ಡಾಕ್ಯುಮೆಂಟರಿ ಅಲ್ಲ – ಬದಲಾಗಿ ಇದು ಮನುಷ್ಯನ ಚಾತುರ್ಯ, ಧೈರ್ಯ, ಚಾಣಾಕ್ಷತನ ಮತ್ತು ಬದುಕುಳಿಯುವ ಹಠ ಹೇಗೆಲ್ಲಾ ತಮ್ಮ ಬದುಕಿನ ದಾರಿಗಳನ್ನು ಸಾಗಿಸುತ್ತವೆ ಎಂಬುದಾಗಿದೆ…” ಪತ್ರಕರ್ತ ಮುರಳಿ ಮಾಲೂರು ಅವರ ಬರಹದಲ್ಲಿ
ಹಾಗೆಯೇ ಒಮ್ಮೆ ಯೋಚಿಸಿ. ನೀವು ಒಂದು ಕತ್ತಲು ಕೋಣೆಯಲ್ಲಿ ಕುಳಿತಿದ್ದೀರಿ. ನೀವು ಹೊರಬರಲು ಸಾಧ್ಯವೇ ಇಲ್ಲದಂತಹ ಕೋಣೆಯದು, “ಇಲ್ಲಿಂದ ಹೇಗೆ ಹೊರಗೆ ಹೋಗಬಹುದು?” ಎಂಬ ಯೋಚನೆ ನಿಮ್ಮನ್ನು ಕಾಡುತ್ತದೆ. ಅದೊಂದು ನರಕದ ಕೂಪವಾಗಿ ಕಾಣುತ್ತಿರುತ್ತದೆ. ದಪ್ಪ ಗೋಡೆಗಳು, ಬಲಿಷ್ಠವಾದ ಕಬ್ಬಿಣದ ಬಾರ್‌ಗಳು, ಕೋಣೆಯ ಸುತ್ತಲೂ ಹೆಜ್ಜೆ ಹೆಜ್ಜೆಗೂ ಕಾವಲುಗಾರರು. ಇಷ್ಟೆಲ್ಲಾ ತಿಳಿದಿದ್ದೂ ಎಲ್ಲೋ ಒಂದು ಕಡೆ ಮನಸ್ಸು, ಆ ಕೋಣೆಯಿಂದ ಹೇಗಾದರೂ ಮಾಡಿ ಹೊರಗೆ ನಡೆಯಬೇಕು ಎಂಬುದನ್ನು ಎಚ್ಚರಿಸುತ್ತಾ ಇರುತ್ತದೆ. ಎಲ್ಲಾದರೂ ಸಣ್ಣ ಅವಕಾಶ ಸಿಗಬಹುದೇ ಎಂದು ಕಾತರಿಸುತ್ತಿರುತ್ತದೆ. History’s Greatest Escapes with Morgan Freeman ಈ ಸರಣಿ ಸಾಕ್ಷ್ಯಚಿತ್ರ ಇದೇ ಮನಸ್ಸಿನ ಆಳಕ್ಕೆ ನಿಮ್ಮನ್ನು ಸೀದಾ ಕರೆದೊಯ್ಯುತ್ತದೆ.
ಆಸ್ಕರ್ ವಿಜೇತ ನಟ ಮಾರ್ಗನ್ ಫ್ರೀಮನ್ ಅವರ ಗಂಭೀರವಾದ, ರೋಮಾಂಚಕ ಧ್ವನಿ ನಿಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತಾ ಈ ಸರಣಿಯ ಪ್ರತಿಯೊಂದು ಎಪಿಸೋಡ್ ಪ್ರಾರಂಭವಾಗುತ್ತದೆ. ಇದು ಕೇವಲ ಡಾಕ್ಯುಮೆಂಟರಿ ಅಲ್ಲ – ಬದಲಾಗಿ ಇದು ಮನುಷ್ಯನ ಚಾತುರ್ಯ, ಧೈರ್ಯ, ಚಾಣಾಕ್ಷತನ ಮತ್ತು ಬದುಕುಳಿಯುವ ಹಠ ಹೇಗೆಲ್ಲಾ ತಮ್ಮ ಬದುಕಿನ ದಾರಿಗಳನ್ನು ಸಾಗಿಸುತ್ತವೆ ಎಂಬುದಾಗಿದೆ. ಇಲ್ಲಿ ಬರುವ ನಿಜವಾದ ಕಥೆಗಳು ನಿಮ್ಮ ಬೆನ್ನು ಹುರಿಯನ್ನು ನೆಟ್ಟಗೆ ಮಾಡಿ ಕಣ್ ರೆಪ್ಪೆಯನ್ನು ಮಿಟುಕಿಸದಂತೆ ಮಾಡುತ್ತವೆ.
ಮೊದಲ ಎಪಿಸೋಡ್‌ನಲ್ಲೇ Alcatraz ದ್ವೀಪದ ಅತ್ಯಂತ ಭಯಂಕರವಾದ ಜೈಲಿನಿಂದ ನಾಲ್ವರು ಖೈದಿಗಳ ಎಸ್ಕೇಪ್ ಪ್ಲಾನ್. ಅಲ್ಲಿ ಚಮಚಗಳನ್ನು ಬಳಸಿ ಗೋಡೆ ಕೊರೆಯುವಂತದ್ದು, ಕಾಗದದಿಂದ ತಯಾರಿಸುವ ಲೈಫ್ ಜಾಕೆಟ್ ಗಳು, ತಣ್ಣಗಿನ ಸಾಗರದಲ್ಲಿ ಮೂರು ಖೈದಿಗಳು ಮರೆಯಾಗುವುದು. ಆ ಮೂರೂ ಖೈದಿಗಳು ಇವತ್ತಿಗೂ ಏನಾದರು? ಎಂಬ ಸತ್ಯ ರಹಸ್ಯವಾಗೇ ಉಳಿದಿರುವುದು. ಈ ಒಂದು ಕಥೆಯೇ ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ.
ಇನ್ನು El Chapoನ ಕಥೆ! ಈ ಕಥೆಯಂತೂ ನಿಮ್ಮನ್ನು ಅಚ್ಚರಿಗೆ ತಳ್ಳುತ್ತದೆ. ಮೆಕ್ಸಿಕೋದ ಅತ್ಯಂತ ಭದ್ರವಾದ ಜೈಲಿನಿಂದ ಅವನು ಹೇಗೆ ಟನಲ್ ಮೂಲಕ ತಪ್ಪಿಸಿಕೊಂಡ? ಮತ್ತು ಈ ಟನಲ್ ಕೊರೆಯುವುದನ್ನು ತಿಳಿಯುವಾಗ ರೋಮಾಂಚನವೆನಿಸುತ್ತದೆ. ಒಂದು ಮೋಟಾರ್‌ಸೈಕಲ್ ಎಂಜಿನ್ ಬಳಸಿ ಕೀಮೀ ಉದ್ದದ ಸುರಂಗ ಕೊರೆಯುವ ಮರು ಸೃಷ್ಟಿಯ ವಿಶ್ಯುಯಲ್ ಗಳು ನಿಮ್ಮ ಕಣ್ಣ ಮುಂದೆ ಬರುತ್ತಿರುತ್ತವೆ. ಹಿಂದೆ ಮಾರ್ಗನ್ ಅವರ ಧ್ವನಿ ಕೇಳಿಸುತ್ತಿರುತ್ತದೆ. ಇವೆರಡೂ ಒಮ್ಮೆಲೆಗೆ ನಿಮ್ಮನ್ನು ಆ ಟನಲ್ ಒಳಗಡೆಗೆ ಕರೆದೊಯ್ಯುತ್ತವೆ. ಪ್ರತೀ ಹಂತದಲ್ಲೂ ಮುಂದೇನಾಗಬಹುದು ಎಂಬ ಕಾತುರ ನಿಮ್ಮನ್ನು ಕಾಡಲಾರಂಭಿಸುತ್ತದೆ.
Dannemora ಜೈಲಿನಿಂದ ಇಬ್ಬರು ಖೈದಿಗಳ ಎಸ್ಕೇಪ್ ಪ್ಲಾನ್ ಅದ್ಭುತವೆನಿಸುತ್ತದೆ. ಪೊಲೀಸರನ್ನೇ ಮರಳು ಮಾಡಿ ಟೂಲ್ ಕಿಟ್ ಬಳಸಿ ಜೈಲಿನಿಂದ ಪರಾರಿಯಾಗುತ್ತಾರೆ. ಸುಮಾರು 23 ದಿನಗಳು ಕಡಿನಲ್ಲಿ ತಮ್ಮ ಜೀವನ ಕಳೆಯುತ್ತಾರೆ. ಈ ಎಪಿಸೋಡ್ ನಿಮ್ಮ ಕ್ಯೂರಿಯಾಸಿಟಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ.
Parchman ಫಾರ್ಮ್‌ನಿಂದ ಒಬ್ಬ ಏಕಾಂಗಿಯಾಗಿ ಎಸ್ಕೇಪ್ ಆಗುವುದು, Sobibor ನಲ್ಲಿ ನಡೆಯುವ ಸಾಮೂಹಿಕ ದಂಗೆ, Devil’s Islandನ ಭಯಾನಕ ಕಥೆಗಳು, ವಿಯೆಟ್ನಾಮ್ ಯುದ್ಧದ ಸಮಯದಲ್ಲಿ POW ಎಸ್ಕೇಪ್… ಹೀಗೆ ಪ್ರತಿ ಎಪಿಸೋಡ್ ನಿಮ್ಮನ್ನು ಅಲುಗಾಡಲು ಬಿಡುವುದಿಲ್ಲ. ಈ ಸರಣಿಯ ವಿಶೇಷತೆ ಏನೆಂದರೆ – ಕೇವಲ ಮಾತುಗಳಷ್ಟೇ ಅಲ್ಲ ಆಧುನಿಕ ತಂತ್ರಜ್ಞಾನ ಬಳಸಿ ಜೈಲುಗಳನ್ನು ಅದ್ಭುತವಾಗಿ ಪುನರ್ನಿರ್ಮಾಣ ಮಾಡಲಾಗಿದೆ. ಹಾಗೆಯೇ ಗ್ರಾಫಿಕ್ಸ್ ಬಹಳ ಅದ್ಭುತವೆನಿಸುತ್ತದೆ. ನೋಡುಗರು ಖೈದಿಗಳ ಜೊತೆಗೆ ಸುರಂಗದಲ್ಲಿ ನಡೆಯುತ್ತಿರುವಂತೆ, ಅವರು ತಪ್ಪಿಸಿಕೊಳ್ಳುವ ಪ್ರತಿ ಹೆಜ್ಜೆಯಲ್ಲೂ ಪ್ರೇಕ್ಷಕ ಇರುವಂತೆ ಭಾಸವಾಗುತ್ತದೆ. ಆ ಖೈದಿಗಳ ಕುಟುಂಬದವರು, ಸೆಲ್‌ಮೇಟ್‌ಗಳು ಮತ್ತು ಅಲ್ಲಿನ ಕಾವಲುಗಾರರ ಸಂದರ್ಶನ ಇಡೀ ಸರಣಿಗೆ ಮತ್ತಷ್ಟು ಜೀವ ತುಂಬುತ್ತಾ ಸಾಗಿದೆ.
ಮಾರ್ಗನ್ ಫ್ರೀಮನ್ ಬಗ್ಗೆ ಹೇಳಲೇಬೇಕು ಈ ವ್ಯಕ್ತಿ ಇಲ್ಲಿ ಕೇವಲ ಹೋಸ್ಟ್, ಯಾಂಕರ್ ಅಲ್ಲ. ಮಾರ್ಗನ್ ನಿಮ್ಮನ್ನು ಆ ಘಟನಾ ಸ್ಥಳಕ್ಕೆ, ಆ ಕ್ಷಣಕ್ಕೆ ಕರೆದೊಯ್ಯುತ್ತಾರೆ. ಅವರ ಧ್ವನಿ ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತಾ, “ಮುಂದೇನಾಗುತ್ತದೆ?” ಎಂಬ ತುಡಿತವನ್ನು ಹೆಚ್ಚಿಸುತ್ತದೆ. ಈ ಸರಣಿ ಒಂದು ಎಪಿಸೋಡ್ ಮುಗಿದರೆ ನಂತರದ ಎಪಿಸೋಡ್ ಗೆ ತಾನಾಗೇ ಕರೆದೊಯ್ಯುತ್ತದೆ.
ಈ ಸರಣಿ ನಿಮಗೆ ಕೇವಲ ಎಂಟರ್‌ಟೈನ್‌ಮೆಂಟ್ ಮಾತ್ರ ನೀಡುವುದಿಲ್ಲ. ಮಾನವ ಸ್ವಭಾವ ಹೇಗೆ? ಎಂಬ ಸತ್ಯವನ್ನು ತೋರಿಸುತ್ತದೆ – ಧೃಡವಾಗಿ ನಿಶ್ಚಯಿಸಿದರೆ ಯಾವುದೂ ನಿಮ್ಮನ್ನು ತಡೆಯಲಾರದು ಎಂಬುದನ್ನು ಈ ಸರಣಿ ನಿಮಗೆ ಅರ್ಥೈಸುವಂತಹ ಕೆಲಸ ಮಾಡುತ್ತದೆ.
ಕೊನೆಯದಾಗಿ ಹೇಳುವುದಾದರೆ. ಈ ಸರಣಿ ನೋಡಿದ ನಂತರ ಜಗತ್ತಿನಲ್ಲಿ ಆಗಿರುವಂತಹ ಮತ್ತಷ್ಟು ಗ್ರೇಟೆಸ್ಟ್ ಎಸ್ಕೇಪ್ ಗಳು ಯಾವುವು? ಎಂಬುದನ್ನು ಗೂಗಲ್ ಮಾಡುವಷ್ಟು ಕುತೂಹಲವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ವರ್ಥ್ ಟು ವಾಚ್ ಎನ್ನುವಂತಹ ಡಾಕ್ಯುಮೆಂಟರಿ ಇದು. ತಪ್ಪದೇ ನೋಡಿ. ಡಿಸ್ಕವರಿ ಪ್ಲಸ್ ಓಟಿಟಿ ಪ್ಲಾಟ್‌ಫಾರ್ಮ್ ನಲ್ಲಿದೆ. ನಂತರ ನಿಮ್ಮ ಅಭಿಪ್ರಾಯವನ್ನೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
