Home ಬ್ರೇಕಿಂಗ್ ಸುದ್ದಿ ಅಮೇರಿಕಾ ಸಾಮ್ರಾಜ್ಯಶಾಹಿ ಜಗತ್ತಿನ ಎಲ್ಲಾ ಸಂಪತ್ತನ್ನು ಲೂಟಿ ಮಾಡುತ್ತಲಿದೆ – ಕೆ.ಎಸ್.ರವಿಕುಮಾರ್

ಅಮೇರಿಕಾ ಸಾಮ್ರಾಜ್ಯಶಾಹಿ ಜಗತ್ತಿನ ಎಲ್ಲಾ ಸಂಪತ್ತನ್ನು ಲೂಟಿ ಮಾಡುತ್ತಲಿದೆ – ಕೆ.ಎಸ್.ರವಿಕುಮಾರ್

0

ಹಾಸನ : ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಜಗತ್ತಿನ ಇತರೆ ದೇಶಗಳ ಮೇಲೆ ದಾಳಿ ಮಾಡುವ, ಸುಂಕ ಏರಿಸುವ ಅಮೇರಿಕಾದ ನೀತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ಪ್ರಭಲವಾದ ಪ್ರತಿರೋಧವನ್ನು ಒಡ್ಡುವ ಮೂಲಕ ಮಾತ್ರ ನಮ್ಮ ತನವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಅಮೇರಿಕಾ ಸಾಮ್ರಾಜ್ಯಶಾಹಿ ಜಗತ್ತಿನ ಎಲ್ಲಾ ಸಂಪತ್ತನ್ನು ಲೂಟಿ ಮಾಡಲು ತ್ನನ ಮಿಲಿಟರಿ ಶಕ್ತಿಯನ್ನು ಬಳಸುತ್ತದೆ ಎಂದು ಲೇಖಕರಾದ ಕೆ.ಎಸ್.ರವಿಕುಮಾರ್ ಆರೋಪಿಸಿದರು. ನಗರದ ಶ್ರಮಾದಲ್ಲಿ ಆಯೋಜಿಸಿದ್ದ ‘ಕೆಂಪು ಪುಸ್ತಕ ದಿನ’ದಲ್ಲಿ “ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಜಗತ್ತಿನ ದುಡಿಯುವ ವರ್ಗದ ವಿಮೋಚನೆಗಾಗಿ ಕಾರ್ಲ್ ಮಾಕ್ಸ್ ಮತ್ತು ಫೆಡ್ರಿಕ್ ಏಂಗೆಲ್ಸ್ರವರು ಜಂಟಿಯಾಗಿ ರಚಿಸಿದ “ಕಮ್ಯೂನಿಸ್ಟ್ ಪ್ರಣಾಳಿಕೆ” ಕೃತಿಯು 1848 ಫೆಬ್ರವರಿ 21 ರಂದು ಪ್ರಕಟಗೊಂಡಿತ್ತು. ಇದರ ನೆನಪಿಗಾಗಿ ಜಗತ್ತಿನ ಎಲ್ಲಾ ಪ್ರಗತಿಪರ ಮತ್ತು ಎಡ ಪುಸ್ತಕ ಪ್ರಕಾಶಕರು ಮತ್ತು ಸಂಘಟನೆಗಳು ಸೇರಿ “ಕೆಂಪು ಪುಸ್ತಕ ದಿನ”ವನ್ನ ಆಚರಿಸಲಾಗುತ್ತಿದೆ.

ಅಮೇರಿಕಾ ಹಲವು ಕ್ಷೇತ್ರಗಳಲ್ಲಿ ಕೊಡುಗೆಯನ್ನು ಕೊಟ್ಟಿದೆ ಆದರೆ ಅಲ್ಲಿರುವ ವಿದೇಶಾಂಗ ನೀತಿ ಮತ್ತು ಮಿಲಿಟರಿ ನೀತಿಗಳು ಸಂಪೂರ್ಣವಾಗಿ ಆ ದೇಶದ ಕಾರ್ಪೋರೇಟ್ ಕಂಪನಿಗಳ ವಿಪರೀತ ಲಾಭಕ್ಕಾಗಿ ಮಾತ್ರ ಎಂಬಂತಿದೆ. ಇದರಿಂದಾಗಿ, ಅಮೇರಿಕಾವನ್ನು ಪ್ರತಿರೋಧಿಸುವ ಜಗತ್ತಿನ ಇತರೆ ದೇಶಗಳ ಮೇಲೆ ಅಮೇರಿಕಾ ತನ್ನ ಮಿಲಿಟರಿ ದಾಳಿಯನ್ನು ನಡೆಸಿ, ಆದೇಶದ ಆರ್ಥಿಕತೆಯನ್ನು ಸಂಪೂರ್ಣ ದಿವಾಳಿ ಎಬ್ಬಿಸಿ, ವೆನುಜುವೆಲಾದ ಅಧ್ಯಕ್ಷ ಮತ್ತು ಆತನ ಹೆಂಡತಿಯನ್ನು ಅಪಹರಿಸಿದಂತೆ, ಹಿಂದೆ ಸದ್ದಾಂ ಹುಸೇನನ್ನು ಕೊಂದಂತೆ ಮಾಡುತ್ತದೆ. ಪ್ರತಿ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಮೇರಿಕಾಗೆ ಸವಾಲಾಕುವ ಶಕ್ತಿಯನ್ನು ಬೆಳೆಸಿಕೊಂಡಿರುವುದು ಚೈನಾ ಮಾತ್ರ. ಜಗತ್ತಿನ ಇತರೆ ಎಲ್ಲಾ ದೇಶಗಳು ಒಟ್ಟಾಗಿ ಅಮೇರಿಕಾದ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಕ್ಯೂಬಾದಂತಹ ಸ್ವಾಭಿಮಾನದ ಹೋರಾಟವನ್ನು ಕಟ್ಟುವ ಅನಿವಾರ್ಯತೆ ಜಗತ್ತಿನ ಮುಂದಿದೆ ಎಂದು ಹೇಳಿದರು.

ಎನ್.ಕೆ. ವಸಂತ್ ರಾಜ್ ಅವರು ರಚಿಸಿರುವ “ಯು.ಎಸ್. ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು” ಪುಸ್ತಕದ ಕುರಿತು ಮಾತನಾಡಿದ ವಿದ್ಯಾರ್ಥಿ ಮುಖಂಡರಾದ ವಿವೇಕ್‌ರವರು ಅಮೇರಿಕಾ ಭಾರತದ ಜನತೆಯ ಶತ್ರು ಮಾತ್ರವಲ್ಲಾ, ಜಗತ್ತಿನ ಎಲ್ಲಾ ದುಡಿಯುವ ಜನರ ಶತ್ರುವಾಗಿ ಪರಿವರ್ತನೆಯಾಗುತ್ತಿದೆ ಮತ್ತು ಅದು ಸಾಮ್ರಾಜ್ಯಶಾಹಿಯಾಗಿ ಬೆಳೆದಿದೆ. ಇದನ್ನೇ ಹಲವು ವರ್ಷಗಳ ಹಿಂದೆ ಲೆನಿನ್‌ರವರು ಹೇಳಿದ್ದು ಸಾಮ್ರಾಜ್ಯಶಾಹಿ ಎಂದರೆ ಅದು ‘ಬಂಡವಾಳಶಾಹಿ ವ್ಯವಸ್ಥೆಯ ಅತ್ಯುನ್ನತ ಘಟ್ಟ’ ಎಂದು. ಮೊದಲಿಗೆ ನಾವು ಬಂಡವಾಳಶಾಹಿ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಇಂದಿನ ಸಾಮ್ರಾಜ್ಯಸಾಹಿಯ ಬೆಳವಣಿಗೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ‘ಕಮ್ಯೂನಿಸ್ಟ್ ಪ್ರಣಾಳಿಕೆ’ಯನ್ನು ಓದಲೇ ಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಕ್ರಮೇಣ ಬೆಳೆದಂತೆಲ್ಲಾ ಅದು ತನ್ನ ಹೂಡಿಕೆಯನ್ನು ಉತ್ಪಾದನೆ ಮತ್ತು ಸೇವಾ ವಲಯದಿಂದ ಸಟ್ಟಾ ಜೂಜು ವಲಯಕ್ಕೆ ತೊಡಗಿಸುತ್ತಿದೆ. ಅಂದರೆ ಯಾವ ಉತ್ಪಾದನೆಯೂ ಆಗದೆ, ಉದ್ಯೋಗಗಳೂ ಸೃಷ್ಠಿಯಾಗದೇ ಹೂಡಿದ ಬಂಡವಾಳದಿಂದ ಯತೇಚ್ಚವಾಗಿ ಲಾಭ ಮಾಡುವ ವಿಧಾನ. ಇದನ್ನೇ ಇಂದು ಯು.ಎಸ್.ಅಮೇರಿಕನ್ ಸಾಮ್ರಾಜ್ಯಶಾಹಿ ಜಗತ್ತಿನಾದ್ಯಂತ ಅನುಸರಿಸುತ್ತಿದೆ. ಇದರಿಂದ ಸಂಪತ್ತಿನ ಅಸಮಾನ ಹಂಚಿಕೆ, ಬಡತನ, ನಿರುದ್ಯೋಗ ಹೆಚ್ಚಳ, ಹಸಿವು ಮತ್ತು ಯುದ್ಧಗಳಿಂದಾಗಿ ಜನಸಾಮಾನ್ಯರ ಸಾವು ನೋವು ಸಂಭವಿಸುತ್ತಿದೆ. ಈ ಸಾಮ್ರಾಜ್ಯಶಾಹಿಯ ಅಂತ್ಯ ಇರುವುದು ದುಡಿಯುವ ವರ್ಗದ ಒಗ್ಗಟ್ಟಿನ ಆಧಾರದ ಮೇಲೆ. ಎಲ್ಲಾ ದೇಶದ ದುಡಿಯುವ ಜನ ತಮ್ಮ ವರ್ಗ ಪ್ರಜ್ಞೆಯ ಆಧಾರದಲ್ಲಿ ಒಟ್ಟಾದರೆ ಮಾತ್ರ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ನಿರ್ಣಾಮಗೊಳಿಸಿ, ಎಲ್ಲರೂ ನೆಮ್ಮದಿಯಿಂದ ಬದುಕುವ ಸಮಸಮಾಜವನ್ನು ನಿರ್ಮಿಸಬಹುದು ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಹೊಹಿಸಿದ್ದ ಸಿಪಿಐಎಂ ನ ಹಾಸನ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್‌ಕುಮಾರ್ ಮಾತನಾಡಿ ಅಮೇರಿಕಾ ಸಾಮ್ರಾಜ್ಯಶಾಹಿ ಹೇಗೆ ಬೆಳವಣಿಗೆ ಹೊಂದಿದೆ ಎಂದರೆ, ಅದು ಜಗತ್ತಿನ ಎಲ್ಲಾ ಸಂಪತ್ತಿನ ಒಡೆತನವನ್ನು ತನ್ನ ಕೈಯಲ್ಲಿಟ್ಟುಕೊಳ್ಳಬೇಕು, ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುವವರ ವಿರುದ್ಧ ಎಂತಹ ಪೈಶಾಚಿಕ ಕೃತ್ಯವನ್ನು ಎಸಗಲು ಅದು ಹಿಂದೆ ಮುಂದೆ ನೋಡುವುದಿಲ್ಲ. ಸರಕುಗಳ ಮೇಲಿನ ಸುಂಕ ಏರಿಸುವ ವಿಚಾರದಲ್ಲಿ ಮತ್ತು ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಬಾರದು ಎಂಬ ವಿಷಯವಾಗಿ ಅಮೇರಿಕಾ ಭಾರತದ ಮೇಲೆ ವಿದಿಸಿದ ಶರತ್ತು ಮತ್ತು ದಿಗ್ಬಂದನಗಳಿಗೆ ಭಾರತದ ಒಕ್ಕೂಟ ಸರ್ಕಾರ ಯಾವ ಪ್ರತಿರೋಧವನ್ನೂ ತೋರದೆ ಅಮೇರಿಕಾಗೆ ಸಂಪೂರ್ಣ ಶರಣಾಗುತ್ತಿದೆ. ಇದರ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಹೇಗೆ ಅಮೇರಿಕನ್ ಸಾಮ್ರಾಜ್ಯಶಾಹಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ನಿಂತಿದೆ ಮತ್ತು ಅದು ಮುಂದಿನ ದಿನಗಳಲ್ಲಿ ಮಾಡಬಹುದಾದ ಅಪಾಗಳ ಕುರಿತು ಎಚ್ಚರಿಸಬೇಕಿದೆ. ಅಂತರಾಷ್ಟ್ರೀಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ಜಾಗತಿಕ ಬಂಡವಾಶಾಹಿ ವ್ಯವಸ್ಥೆ ಬಿಕ್ಕಟ್ಟಿನಲ್ಲಿರುವುದನ್ನು ಸೂಚಿಸುತ್ತದೆ. ಈ ಬಿಕ್ಕಟ್ಟಿನಿಂದ ಹೊರಬರಲು ಅದು ಇತರೆ ದೇಶಗಳ ಮೇಲೆ ಸುಂಕದ ಹೊರೆ ಹಾಕುವುದು ಮತ್ತು ಯುದ್ಧಗಳನ್ನು ಸಂಘಟಿಸುತ್ತದೆ. ದುಡಿಯುವ ಜನತೆಯ ಶತ್ರುವಾಗಿರುವ ಬಂಡವಾಳಶಾಹಿ ಮತ್ತು ಯು.ಎಸ್.ಸಾಮ್ರಾಜ್ಯಶಾಹಿಗೆ ಪರ್ಯಾಯವಾದ ವ್ಯವಸ್ಥೆ ದುಡಿಯುವ ಜನತೆಯ ನೇತೃತ್ವದ ಸಮಾಜವಾದಿ ವ್ಯವಸ್ಥೆ ಮಾತ್ರ ಎಂಬುದನ್ನು ಕಮ್ಯೂನಿಸ್ಟ್ ಪ್ರಣಾಳಿಕೆ ಸ್ಪಷ್ಟವಾಗಿ ಹೇಳಿದೆ. ಇದು ಕೇವಲ ಕೃತಿಯಲ್ಲಿರುವ ಸಿದ್ಧಾಂತವಾಗಿ ಮಾತ್ರ ಉಳಿಯದೆ, ಅದನ್ನು ಜಗತ್ತಿನ ಹಲವು ದೇಶಗಳಲ್ಲಿ ಪ್ರಯೋಗಿಕವಾಗಿ ಅನುಸರಿಸಿ, ಕಮ್ಯೂನಿಸ್ಟ್ ಸಿದ್ದಾಂತದ ಆಧಾರದಲ್ಲಿ ಜನಪರ ಬದಲಾವಣೆಗಳನ್ನು ತಂದಿವೆ. ಇದಕ್ಕೆ ಹಿಂದಿನ ಯುಎಸ್‌ಎಸ್‌ಆರ್, ಈಗಿನ ಚೈನಾ, ಕ್ಯೂಬಾ, ವಿಯೆಟ್‌ನಾಮ್, ಕೊರಿಯಾ ಇವುಗಳೇ ಸಾಕ್ಷಿ ಮತ್ತು ಈ ದೇಶಗಳು ಅನುಸರಿಸುತ್ತಿರುವ ಜನರ ಪರವಾದ ಆರ್ಥಕ ಮತ್ತಿತರೆ ನೀತಿಗಳಿಂದ ಜನತೆಗೆ ಆಗುತ್ತಿರುವ ಲಾಭ ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಸಮಾಜವಾದಿ ದೇಶಗಳ ಬೆಳವಣಿಗೆಯನ್ನು ಯಾವ ಬಂಡವಾಳಶಾಹಿ ದೇಶಗಳು ಸರಿಗಟ್ಟಲು ಸಾಧ್ಯವಾಗುವುದಿಲ್ಲ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಜಿ.ಪೃಥ್ವಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯರ್ಶಿ ಎಂ.ಬಿ.ಪುಷ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರ್.ಪಿ.ವೆಂಕಟೇಶಮೂರ್ತಿ, ಪರಮಶಿವಯ್ಯ, ಹುಲಿಕಲ್ ರಾಜಶೇಕರ್, ರೋಹಿತ್ ಹಗಸರಹಳ್ಳಿ, ಮಲನಾಡ್ ಮೆಹಬೂಬ್, ಮಂಜು, ಅರವಿಂದ, ಪ್ರಕಾಶ್, ರಮೇಶ್ ಮುಂತಾದವರು ಭಾಗವಹಿಸಿದ್ದರು.

You cannot copy content of this page

Exit mobile version