ಕೊಯಮತ್ತೂರು : ತಮಿಳುನಾಡು(tamil nadu) ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್(Udhayanidhi Stalin) ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟದ ಮೇಲೆ ಭಾನುವಾರ ತೀವ್ರ ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ(pm modi) ಅಲ್ಲ ಅವರ ಅಪ್ಪ ಬಂದ್ರೂ ಹೆದರುವುದಿಲ್ಲ ಎಂದಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ಆಕ್ರೋಶ ಹೊರಹಾಕಿದೆ.
ಕೊಯಮತ್ತೂರಿನಲ್ಲಿ ಡಿಎಂಕೆ ಯುವ ಘಟಕದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಮುಂಬರುವ ಚುನಾವಣೆಯನ್ನು ತಮಿಳುನಾಡು ಮತ್ತು ದೆಹಲಿಯಲ್ಲಿ ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಯುದ್ಧವೆಂದು ಹೇಳಿದರು.
ಮುಂದುವರೆದು ಪ್ರಧಾನಿ ಮೋದಿ ವಿರುದ್ಧ ಗುಡುಗಿರುವ ಉದಯನಿಧಿ, ಡಿಎಂಕೆ ಸರ್ಕಾರ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತದೆ. ನರೇಂದ್ರ ಮೋದಿಯವರಿಗೆ ಡಿಎಂಕೆ ಬೆದರುವುದಿಲ್ಲ. ತಮಿಳುನಾಡಿನ ಕಲ್ಯಾಣಕ್ಕಾಗಿ ನಮ್ಮ ಹಕ್ಕುಗಳನ್ನು ಎಂದಿಗೂ ಬಿಟ್ಟುಕೊಡಲ್ಲ. ಇಡಿ, ಸಿಬಿಐ ಅಲ್ಲ, ಮೋದಿಯವರ ಅಪ್ಪ ಬಂದ್ರೂ ನಾವು ಹೆದರಲ್ಲ ಎಂದು ಟೀಕಿಸಿದ್ದಾರೆ.
ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗಲೆಲ್ಲಾ ಜನರು ಆತಂಕದಲ್ಲಿರುತ್ತಾರೆ ಎಂದು ಹೇಳಿದರು. ಮೋದಿ ದೂರದರ್ಶನದಲ್ಲಿ ಕಾಣಿಸಿಕೊಂಡಾಗಲೆಲ್ಲಾ, ಅವರು ಏನು ಘೋಷಿಸಲಿದ್ದಾರೆಂದು ಜನರು ಭಯಭೀತರಾಗುತ್ತಾರೆ. ನೋಟು ರದ್ದತಿ ಮತ್ತು ಕೊರೊನಾ ಲಾಕ್‌ಡೌನ್ ಘೋಷಣೆಗಳು ಜನರನ್ನು ಭಯಭೀತರನ್ನಾಗಿ ಮಾಡಿತು. ಆದರೆ ಸ್ಟಾಲಿನ್ ಟಿವಿಯಲ್ಲಿ ಕಾಣಿಸಿಕೊಂಡರೆ, ಜನರು ಹೊಸ ಘೋಷಣೆ ಯೋಜನೆಗಳ ಬಗ್ಗೆ ಸಂತೋಷಪಡುತ್ತಾರೆ” ಎಂದು ಹೇಳಿದರು.
ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧವೂ ಕಿಡಿಕಾರಿರುವ ಉದಯನಿಧಿ, ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ಯಾವುದೇ ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿಲ್ಲ. ತಕ್ಷಣವೇ, ಇಪಿಎಸ್ ಬಜೆಟ್ ಅನ್ನು ಹೊಗಳಿದರು. ಅವರು ಬಿಜೆಪಿಯ ಗುಲಾಮರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
