Home ರಾಜಕೀಯ ರಾಜ್ಯದಲ್ಲಿ ದಲಿತರು ಸಿಎಂ ಆಗೋದನ್ನ ತಪ್ಪಿಸಿದ್ದು ಸಿದ್ದರಾಮಯ್ಯ – ಹೆಚ್‌.ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ದಲಿತರು ಸಿಎಂ ಆಗೋದನ್ನ ತಪ್ಪಿಸಿದ್ದು ಸಿದ್ದರಾಮಯ್ಯ – ಹೆಚ್‌.ಡಿ ಕುಮಾರಸ್ವಾಮಿ

0

ರಾಯಚೂರು : ದಲಿತರು (Dalit) ಮುಖ್ಯಮಂತ್ರಿ (Chief Minister) ಆಗುವುದನ್ನು ತಪ್ಪಿಸಿದವರೇ ಸಿದ್ದರಾಮಯ್ಯ (Siddaramaiah) ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದರು.

ಪತ್ನಿ ಸಮೇತ ರಾಯರ ದರ್ಶನ ಪಡೆದು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಅವರು ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಅವರನ್ನು ಇಲ್ಲಿಂದ ಖಾಲಿ ಮಾಡಿಸಿದ್ದಾರೆ. ಪಾಪ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಓಡಿಸಿ, ಪರಮೇಶ್ವರ್ ಅಧ್ಯಕ್ಷರಿದ್ದರೂ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಸಿದ್ದರಾಮಯ್ಯ ಸಿಎಂ ಆದರು‌ ಎಂದರು.

ಇನ್ನು ದಲಿತರು ಮುಖ್ಯಮಂತ್ರಿ ಆಗುವುದಿದ್ದರೆ ಯಾವುತ್ತೋ ಆಗುತ್ತಿತ್ತು. 75 ವರ್ಷ ಆದರೂ ಏಕೆ ಆಗಲಿಲ್ಲ ಎಂದು ಪ್ರಶ್ನಿಸಿದ ಹೆಚ್‌ಡಿಕೆ, ನಾನು ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿರುವ ಕಾರಣ ಗೃಹ ಸಚಿವ ಪರಮೇಶ್ವರ್ ಅವರು ವೈಯಕ್ತಿಕ ಕೆಲಸಕ್ಕೆ ಭೇಟಿ ಮಾಡಿದ್ದಾರೆ. ಅದನ್ನು ಬಿಟ್ಟು ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಯಾವಾಗ ದೇವೇಗೌಡರ ಬೆನ್ನಿಗೆ ಚೂರಿ ಹಾಕೋಕೇ ಹೋದ್ರೋ, ಆಗ ಸಿದ್ದರಾಮಯ್ಯ ಮನೆಗೆ ಹೋದರು. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದ್ದಾರೆ ಎಂದು ಟೀಕಿಸಿದರು.

ಸಿಎಂ ಖುರ್ಚಿ ಉಳಿಸಿಕೊಳ್ಳೋದಕ್ಕೆ ಯಾವ್ಯಾವದೋ ಹೆಸರು ಹೇಳುತ್ತಿದ್ದಾರೆ. ನಾನು ಸಿಎಂ ಇದ್ದಾಗ ಖುರ್ಚಿ ಉಳಿಸಿಕೊಳ್ಳೋಕೆ ಒಕ್ಕಲಿಗರಿಗೆ ದಂಗೆ ಏಳಿ ಅಂದಿದ್ದಾ? ನಾನು ಸಮಾಜದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ರಕ್ಷಣೆ ಕೇಳಿಲ್ಲ ಎಂದರು.

You cannot copy content of this page

Exit mobile version