ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ನಲ್ಲಿನ ಇತ್ತೀಚಿನ ಪೋಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ತಾವೇ “ವೆನಿಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಉಲ್ಲೇಖಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ವೆನಿಜುವೆಲಾ ಸಂಬಂಧಿತ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಹಾಗೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇರುವ ವೆನಿಜುವೆಲಾದ ತೈಲ ಆದಾಯವನ್ನು ರಕ್ಷಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ ಕೇವಲ ಎರಡು ದಿನಗಳ ಬಳಿಕ ಈ ಪೋಸ್ಟ್ ಪ್ರಕಟವಾಗಿದ್ದು, ಭವಿಷ್ಯದ ವೆನಿಜುವೆಲಾದ ತೈಲ ಮಾರಾಟದ ಮೇಲೆ ಅಮೆರಿಕದ ನಿಯಂತ್ರಣ ಇನ್ನಷ್ಟು ಬಿಗಿಯಾಗುವ ಸೂಚನೆ ನೀಡಿದೆ.
ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ ಶೀಟ್ ಪ್ರಕಾರ, ಈ ಆದೇಶದಡಿ ವೆನಿಜುವೆಲಾದ ತೈಲ ಆದಾಯಕ್ಕೆ ಸಾಲಗಾರರು ಪ್ರವೇಶಿಸುವುದನ್ನು ತಡೆಯಲಾಗುತ್ತದೆ. ಜೊತೆಗೆ, ಸಾಲಗಳು ಅಥವಾ ಕಾನೂನು ಹಕ್ಕುಗಳನ್ನು ಇತ್ಯರ್ಥಪಡಿಸುವ ಹೆಸರಿನಲ್ಲಿ ಈ ನಿಧಿಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಅಮೆರಿಕದ ವಿದೇಶಾಂಗ ನೀತಿಯ ಆದ್ಯತೆಗಳಿಗೆ ಅನುಗುಣವಾಗಿ ಈ ಹಣವನ್ನು ‘ರಕ್ಷಿತವಾಗಿ’ ಉಳಿಸುವುದೇ ಈ ಕ್ರಮದ ಉದ್ದೇಶ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ, ವೆನಿಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ದೇಶದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಅವರ ನಿಜವಾದ ಉದ್ದೇಶಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ವೆನಿಜುವೆಲಾದ ಅಪಾರ ತೈಲ ನಿಕ್ಷೇಪಗಳ ಹಿನ್ನೆಲೆಯಲ್ಲಿ ಟ್ರಂಪ್ ಅವರು ನಿರಂತರವಾಗಿ ಅಮೆರಿಕದ ಹಾಗೂ ಜಾಗತಿಕ ತೈಲ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವುದು ಗಮನಾರ್ಹವಾಗಿದೆ. ಇದೇ ವೇಳೆ ಇರಾನ್ ಹಾಗೂ ಗ್ರೀನ್‌ಲ್ಯಾಂಡ್ ಕುರಿತು ಅವರು ನೀಡುತ್ತಿರುವ ಬೆದರಿಕೆ ಹೇಳಿಕೆಗಳೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ನಂತರ, ಸುರಕ್ಷಿತ, ನ್ಯಾಯಯುತ ಹಾಗೂ ವಿವೇಚನಾಯುಕ್ತ ಅಧಿಕಾರ ವರ್ಗಾವಣೆಯಾಗುವವರೆಗೂ ಅಮೆರಿಕವೇ ವೆನಿಜುವೆಲಾದ ಆಡಳಿತವನ್ನು ನಿರ್ವಹಿಸುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಭಾನುವಾರ ಮಾತನಾಡಿದ ಅವರು, ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಡೆದ ಮಾತುಕತೆಗಳು ಸಕಾರಾತ್ಮಕವಾಗಿವೆ ಎಂದು ತಿಳಿಸಿದರು. ವೆನಿಜುವೆಲಾದಲ್ಲಿನ ಬೆಳವಣಿಗೆಗಳು ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿವೆ ಹಾಗೂ ವಾಷಿಂಗ್ಟನ್ ಅಲ್ಲಿನ ನಾಯಕತ್ವದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಅವರು ವಿಶ್ವದ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ವೆನಿಜುವೆಲಾದಲ್ಲಿನ ಭವಿಷ್ಯದ ಹೂಡಿಕೆಗಳು ಇನ್ನು ಮುಂದೆ ವೆನಿಜುವೆಲಾ ಸರ್ಕಾರದೊಂದಿಗೆ ಅಲ್ಲ, ನೇರವಾಗಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ತೈಲ ಉದ್ಯಮಕ್ಕೆ ಭದ್ರತಾ ಖಾತರಿಗಳನ್ನು ನೀಡಿದ ಅವರು, ಮಹತ್ವದ ಹೂಡಿಕೆಗಳಿಗೆ ಮುಕ್ತ ಆಹ್ವಾನ ನೀಡಿದರು.
ಅಮೆರಿಕ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ, ಚೀನಾ ಅಥವಾ ರಷ್ಯಾ ವೆನಿಜುವೆಲಾದಲ್ಲಿ ಬಲವಾದ ಹಿಡಿತ ಸಾಧಿಸಬಹುದಾಗಿತ್ತು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದು, ವೆನಿಜುವೆಲಾ ತೈಲದ ಸುತ್ತಲಿನ ಜಾಗತಿಕ ರಾಜಕೀಯ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
