ಮೋದಿ ನಂತರ ಶಾ?

2024ರ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಎಬ್ಬಿಸಿವೆ. ಅಮಿತ್ ಶಾ ಕೇವಲ ಮೋದಿ ಅವರ ನಂತರದ ‘ನಂಬರ್ 2’ ನಾಯಕರಾಗಿ, ಅವರ ರಾಜಕೀಯವನ್ನು ಮತ್ತಷ್ಟು ಬಲಪಡಿಸಲು ಬಳಸಲ್ಪಡುತ್ತಿದ್ದಾರೆಯೇ? ಅಥವಾ 2029ನ್ನು ಗುರಿಯಾಗಿಸಿಕೊಂಡು ಬಿಜೆಪಿ ಭವಿಷ್ಯದ ನಾಯಕತ್ವದ ಉತ್ತರಾಧಿಕಾರದ ಯೋಜನೆಯನ್ನು ರೂಪಿಸುತ್ತಿದೆಯೇ? 2024ರ ಫಲಿತಾಂಶ ಮರುಕಳಿಸಬಾರದು — ಅಥವಾ ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಬರಬಾರದು — ಎಂಬ ಆತಂಕದಲ್ಲಿರುವ ಬಿಜೆಪಿ ಮುಂದಿನ ರಾಜಕೀಯ ಸಮೀಕರಣಗಳನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದೆ

ಏಪ್ರಿಲ್ 22, 2026 ರ ಬುಧವಾರ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಬದಲು ಕೇಂದ್ರ ಗೃಹ ಸಚಿವ ಅಮೀತ್‌ ಶಾ ಸೋನಾರ್ಪುರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಿದರು. ಈ ಕ್ಷೇತ್ರ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿದ್ದು, ಕೋಲ್ಕತ್ತಾ ಮಹಾನಗರ ಪ್ರದೇಶದ ಭಾಗವಾಗಿದೆ. ರೋಡ್‌ಶೋ ವೇಳೆ ರಸ್ತೆಯ ಎರಡೂ ಬದಿಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಮಿತ್ ಶಾ ಅವರು ತಮ್ಮ ಪ್ರಚಾರ ವಾಹನದ ಮೇಲಿನಿಂದ ಜನರ ಕಡೆಗೆ ಕೈಬೀಸಿದರು. ಅದೇ ದಿನದ ಆರಂಭದಲ್ಲಿ, ಅಮಿತ್ ಶಾ ಒಂದು ವಿಡಿಯೊ ಹಂಚಿಕೊಂಡಿದ್ದರು. ಅದರಲ್ಲಿ, ಬಿದಿರಿನ ಬೇಲಿಯಾಚೆ ನಿಂತು ಮೊಬೈಲ್‌ಗಳಲ್ಲಿ ತಮ್ಮ ಫೋಟೋ ತೆಗೆಯುತ್ತಿದ್ದವರ ಜೊತೆ ಅವರು ಮಾತನಾಡುತ್ತಿರುವ ವೀಡಿಯೋ. ಈ ವೇಳೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಮೀತ್‌ ಶಾ ಅವರು ಜನರನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.ಮೂರು ಬಾರಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು ವಿಫಲವಾದ ಬಳಿಕ, ಈ ಬಾರಿ ಬಿಜೆಪಿ ಸಂಪೂರ್ಣ ಶಕ್ತಿ ಬಳಸಿ ಚುನಾವಣಾ ಕಣಕ್ಕಿಳಿಯಿತು.

2019ರ ಆಗಸ್ಟ್ 5ರಂದು, ಕೇಂದ್ರ ಗೃಹ ಸಚಿವರಾದ ಕೆಲವೇ ತಿಂಗಳ ಬಳಿಕ ಅಮೀತ್ ಶಾ ಪ್ಲಾಸ್ಟಿಕ್ ಫೈಲ್ ಮತ್ತು ಕೆಲವು ದಾಖಲೆಗಳನ್ನು ಹಿಡಿದು ಸಂಸತ್ತಿಗೆ ಪ್ರವೇಶಿಸಿದ ದೃಶ್ಯವು ಭಾರತದ ಸಂಸತ್ತಿನ ಇತಿಹಾಸದಲ್ಲಿ ವಿಶೇಷವಾಗಿ ಉಳಿಯುತ್ತದೆ. ಅದಾದ ಬಳಿಕ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಅಚ್ಚರಿ ಕಾನೂನು ಪ್ರಸ್ತಾವನೆಗಳನ್ನು ಮಂಡಿಸಿದರು. ಜೊತೆಗೆ, ರಾಜ್ಯದ ವಿಶೇಷ ಹಕ್ಕುಗಳನ್ನು ತೆಗೆದುಹಾಕಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಆದರೆ, 2024ರ ಲೋಕಸಭೆ ಚುನಾವಣೆಯ ನಂತರ ಬಿಜೆಪಿಯ ಶಕ್ತಿ ಕುಗ್ಗಿ, ನರೇಂದ್ರ ಮೋದಿಯವರಿಗೆ ಪೂರ್ಣ ಬಹುಮತ ಸಿಗದ ಪರಿಸ್ಥಿತಿ ಉಂಟಾದ ಬಳಿಕ, ಸಾರ್ವಜನಿಕವಾಗಿ ಅಮೀತ್‌ ಶಾ ಅವರ ಪ್ರಭಾವ ಮತ್ತು ಮಹತ್ವ ಇನ್ನಷ್ಟು ಹೆಚ್ಚಿದಂತೆ ಕಾಣುತ್ತಿದೆ.

ಅಮೀತ್‌ ಶಾ ಅವರನ್ನು ಕೇವಲ ನರೇಂದ್ರ ಮೋದಿಯ ನಂತರದ ನಾಯಕ ಎಂದು ಮಾತ್ರವಲ್ಲ, ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕ, ಸರ್ಕಾರದ ನೀತಿಗಳನ್ನು ಜಾರಿ ಮಾಡುವ ಮತ್ತು ರಕ್ಷಿಸುವ ಪ್ರಮುಖ ವ್ಯಕ್ತಿ, ಹಾಗೂ ಹೊಸ ಮುಖಂಡರಿದ್ದರೂ ಪಕ್ಷದ ಸಂಘಟನೆಯನ್ನು ನಿಭಾಯಿಸುವ ನಾಯಕನಾಗಿಯೂ ನೋಡಲಾಗುತ್ತಿದೆ.

ಈ ಹಿನ್ನೆಲೆಗಳಲ್ಲಿ, ಮೋದಿ ಸರ್ಕಾರದಲ್ಲಿ ಅಮಿತ್ ಶಾ ಅವರ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಅವರು ಕೇವಲ ಮೋದಿ ಅವರ ಸೂಚನೆಯಂತೆ ಕೆಲಸ ಮಾಡುವ ಎರಡನೇ ನಾಯಕನೇ? ಅಥವಾ 2029ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, 2024ರಂತಹ ಫಲಿತಾಂಶ ಮರುಕಳಿಸದಂತೆ ನೋಡಿಕೊಳ್ಳಲು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಯೋಜನೆ ನಡೆಯುತ್ತಿದೆಯೇ ಎಂಬ ಚರ್ಚೆಯೂ ಇದೆ.

ಜೋಯಾ ಹಸನ್ ಅವರ ಪ್ರಕಾರ, ಸದಾ “ಚುನಾವಣೆ ಮೋಡ್”ನಲ್ಲೇ ಇರುವ ಬಿಜೆಪಿ ಈಗ 2029ರ ಚುನಾವಣೆಗೆ ತಂತ್ರ ಬದಲಾಯಿಸುತ್ತಿದೆ. ಅವರು ಹೇಳುವಂತೆ, ದೇಶೀಯ ಸಮಸ್ಯೆಗಳು ಹಾಗೂ ಅಂತರರಾಷ್ಟ್ರೀಯ ಒತ್ತಡಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸಿವೆ. ಇದರಲ್ಲಿ ಡೊನಾಲ್ಡ್‌ ಟ್ರಂಪ್‌ ಜೊತೆಗಿನ ವ್ಯಾಪಾರ ವಿವಾದಗಳು, ಆಪರೇಷನ್‌ ಸಿಂಧೂರ್ ಬಳಿಕ ಭಾರತದ ನಿಲುವನ್ನು ಜಗತ್ತಿನ ಮುಂದೆ ಪರಿಣಾಮಕಾರಿಯಾಗಿ ತೋರಿಸಲು ಎದುರಾದ ಕಷ್ಟಗಳು, ಪಕ್ಕದ ದೇಶಗಳೊಂದಿಗೆ ಉದ್ವಿಗ್ನತೆ, ಗಾಜಾ ಹತ್ಯಾಕಾಂಡ ಮತ್ತು ಇರಾನ್ ಯುದ್ಧದ ಬಗ್ಗೆ ಭಾರತದ ನಿಲುವಿನ ಮೇಲೆ ಬಂದ ಟೀಕೆಗಳು ಸೇರಿವೆ. ಇವುಗಳಿಂದ ಮೋದಿ ಅವರ “ವಿಶ್ವಗುರು” ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೋಯಾ ಹಸನ್ ಅವರ ಮಾತಿನಲ್ಲಿ: “ಯಾವಾಗಲೂ ಚುನಾವಣಾ ಸಿದ್ಧತೆಯಲ್ಲಿರುವ ಬಿಜೆಪಿ, ಈಗ 2029ರತ್ತ ಗಮನ ಹರಿಸಿ ತನ್ನ ತಂತ್ರಗಳನ್ನು ಮರುಹೊಂದಿಸುತ್ತಿದೆ. ಚುನಾವಣಾ ತಂತ್ರಜ್ಞನಾಗಿ ಅಮಿತ್ ಶಾ ಇದರ ಕೇಂದ್ರದಲ್ಲಿದ್ದಾರೆ. SIR, ಕ್ಷೇತ್ರ ಪುನರ್ವಿಂಗಡಣೆ (delimitation), ಹಾಗೂ ‘ಒಂದು ದೇಶ, ಒಂದು ಚುನಾವಣೆ’ ಎಂಬ ಆಲೋಚನೆಗಳಂತಹ ರಚನಾತ್ಮಕ ಬದಲಾವಣೆಗಳನ್ನು ಅವರು ಮುಂದಿಡುತ್ತಿದ್ದಾರೆ. ಜೊತೆಗೆ, ಬಹುಸಂಖ್ಯಾತ ರಾಜಕೀಯ ಮತ್ತು ಭದ್ರತೆ ವಿಚಾರಗಳಿಗೆ ಹೆಚ್ಚು ಒತ್ತು ನೀಡುವ ಬಲಪಂಥೀಯ ಜನಪ್ರಿಯ ರಾಜಕಾರಣವನ್ನೂ ಅವರು ರೂಪಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ‘ಅಕ್ರಮ ನುಸುಳುಕೋರರುʼ ವಿಚಾರಕ್ಕೆ ನೀಡಲಾಗುತ್ತಿರುವ ಮಹತ್ವ ಇದಕ್ಕೆ ಉದಾಹರಣೆ,” ಎಂದು ಹೇಳಿದ್ದಾರೆ.

“ಈಗ ಅಮೀತ್‌ ಶಾ ಅವರ ಪಾತ್ರ ಕೇವಲ ಎರಡನೇ ನಾಯಕತ್ವಕ್ಕಷ್ಟೇ ಸೀಮಿತವಾಗಿಲ್ಲ; ರಾಜಕೀಯ ತಂತ್ರಗಳು ಮತ್ತು ಸರ್ಕಾರದ ಪ್ರಮುಖ ಆದ್ಯತೆಗಳನ್ನು ಮುನ್ನಡೆಸುವ ಮುಖ್ಯ ವ್ಯಕ್ತಿಯಾಗಿ ಅವರು ಅನೇಕ ಸಂದರ್ಭಗಳಲ್ಲಿ ನೇತೃತ್ವ ವಹಿಸುತ್ತಿದ್ದಾರೆ.”

ಹೆಚ್ಚುತ್ತಿರುವ ಅಮೀತ್‌ ಶಾ ಪ್ರಭಾವ

ಬುಧವಾರ ನಡೆದ ಮಹತ್ವದ ರಾಜ್ಯ ಚುನಾವಣೆಯ ಮತದಾನದ ಮುನ್ನ ಅಮಿತ್ ಶಾ ದೊಡ್ಡ ರೋಡ್‌ಶೋ ನಡೆಸಿದ ಹಿನ್ನೆಲೆ 2024ರಿಂದಲೇ ಕಾಣಿಸತೊಡಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಪ್ರಚಾರಕರಾಗಿ ಅಮಿತ್ ಶಾ ದೇಶದಾದ್ಯಂತ 188 ಚುನಾವಣಾ ಸಭೆಗಳನ್ನು ನಡೆಸಿದ್ದರು. ಇದರಲ್ಲಿ ಅವರಿಗಿಂತ ಮುಂದೆ ಇದ್ದದ್ದು ಕೇವಲ ನರೇಂದ್ರ ಮೋದಿ ಮಾತ್ರ; ಮೋದಿ 206 ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಆ ಚುನಾವಣೆಯ ಬಳಿಕ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ವೇಳೆ ಅಮಿತ್ ಶಾ 36 ಚುನಾವಣಾ ಸಭೆಗಳನ್ನು ನಡೆಸಿದ್ದರೆ, ಮೋದಿ ಕೇವಲ 15 ಸಭೆಗಳಲ್ಲಿ ಭಾಗವಹಿಸಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್‌ ಕುಮಾರ್ ಅವರನ್ನು ಆ ಸ್ಥಾನದಿಂದ ತೆಗೆಯಲು ಬಿಜೆಪಿ ಯಶಸ್ವಿಯಾದಾಗ, ರಾಜ್ಯಸಭೆ ನಾಮಪತ್ರ ಸಲ್ಲಿಸುವ ವೇಳೆ ನಿತೀಶ್ ಕುಮಾರ್ ಪಕ್ಕದಲ್ಲೇ ಕುಳಿತಿದ್ದವರು ಅಮಿತ್ ಶಾ.

ಚುನಾವಣಾ ಪ್ರಚಾರದ ಸಮಯದಲ್ಲಿಯೂ, ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಮುಖಂಡ ಎಂದು ಸಾರ್ವಜನಿಕವಾಗಿ ಘೋಷಿಸಲು ನಿರಾಕರಿಸುವ ಮೂಲಕ ರಾಜಕೀಯ ಚರ್ಚೆಗೆ ಕಾರಣರಾದವರೂ ಅಮಿತ್ ಶಾ. ಸಂಸತ್ತಿನಲ್ಲಿಯೂ ಕಳೆದ ಎರಡು ವರ್ಷಗಳಲ್ಲಿ ಹಲವು ವಿವಾದಾತ್ಮಕ ಸರ್ಕಾರದ ನಿರ್ಣಯಗಳನ್ನು ಮುನ್ನಡೆಸಿದ ಪ್ರಮುಖ ವ್ಯಕ್ತಿಯಾಗಿ ಅಮಿತ್ ಶಾ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್‌ನಲ್ಲಿ, ಮತದಾರರ ಪಟ್ಟಿಯ Special Intensive Revision (SIR) ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ, “ಚುನಾವಣಾ ಸುಧಾರಣೆ” ಕುರಿತ ಚರ್ಚೆಗೆ ಉತ್ತರ ನೀಡಿದ್ದವರು ಅಮಿತ್ ಶಾ. ಆ ವೇಳೆ ಅವರು “ಅಕ್ರಮ ವಲಸಿಗರು” ವಿಷಯವನ್ನು ಪ್ರಸ್ತಾಪಿಸಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನೀತಿ “ಗುರುತಿಸಿ, ಪಟ್ಟಿಯಿಂದ ತೆಗೆದುಹಾಕಿ, ದೇಶದಿಂದ ಹೊರಹಾಕುವುದು” ಎಂದು ಹೇಳಿದರು. ಈ SIR ಪ್ರಕ್ರಿಯೆಯಿಂದ ಲಕ್ಷಾಂತರ ಜನರ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದು, ಅವರ ನಾಗರಿಕತ್ವವೇ ಪ್ರಶ್ನೆಗೆ ಒಳಪಟ್ಟಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಕಳೆದ ವಾರ, ಲೋಕಸಭೆಯಲ್ಲಿ ಮಾತನಾಡಿದ ಅಮೀತ್‌ ಶಾ, ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಲೋಕಸಭಾ ಕ್ಷೇತ್ರಗಳ ವಿಸ್ತರಣೆ ಮತ್ತು ಪುನರ್ವಿಂಗಡಣೆ (delimitation) ಕುರಿತಾಗಿ ತರಲಾಗಿದ್ದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯನ್ನು ತಾನೇ ಮುಂದಾಳತ್ವದಲ್ಲಿ ಮಂಡಿಸಿದ್ದಾಗಿ ಸ್ಪಷ್ಟವಾಗಿ ಹೇಳಿದರು.

ಕಳೆದ ತಿಂಗಳು, ವಿರೋಧ ಪಕ್ಷಗಳು ಪಕ್ಷಪಾತದ ಆರೋಪ ಮಾಡಿ ಅವಿಶ್ವಾಸ ನಿರ್ಣಯ ತಂದಿದ್ದ ಸ್ಪೀಕರ್ ಓಮ್‌ ಬಿರ್ಲಾ ಅವರನ್ನು ಸರ್ಕಾರದ ಪರವಾಗಿ ರಕ್ಷಿಸಿದ್ದವರೂ ಅಮಿತ್ ಶಾ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಟೀಕೆಗಳ ವಿರುದ್ಧ ಮೋದಿ ಸರ್ಕಾರ ಹೆಚ್ಚು ಕಠಿಣ ನಿಲುವು ತೆಗೆದುಕೊಳ್ಳುತ್ತಿರುವುದು ಕಂಡಿರುತ್ತೀರಿ. ಜಾಗತಿಕ ರಾಜಕೀಯ ಬೆಳವಣಿಗೆಗಳ ನಡುವೆಯೇ, ಆನ್‌ಲೈನ್ ಸುದ್ದಿ ತಾಣಗಳು, ವ್ಯಂಗ್ಯಚಿತ್ರಕಾರರು, ಹಾಸ್ಯ ಕಲಾವಿದರು ಮತ್ತು ಸಾಮಾನ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೂ ಕ್ರಮ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಡಿಜಿಟಲ್ ನಿಯಂತ್ರಣ ವ್ಯವಸ್ಥೆಯ ಮೂಲ 2024ರಲ್ಲಿ ಗೃಹ ಸಚಿವಾಲಯ ಆರಂಭಿಸಿದ “ಸಹಯೋಗ್ ಪೋರ್ಟಲ್”ಗೆ ಹೋಗುತ್ತದೆ ಎಂದು ಟೀಕಾಕಾರರು ಹೇಳುತ್ತಾರೆ. ಈ ಪೋರ್ಟಲ್ ಮೂಲಕ ರಾಜ್ಯ ಸರ್ಕಾರಗಳು ಮತ್ತು ಪೊಲೀಸರು ಮಧ್ಯವರ್ತಿ ಸಂಸ್ಥೆಗಳಿಗೆ ಸ್ವಯಂಚಾಲಿತ ನೋಟಿಸ್ ಕಳುಹಿಸಬಹುದು. ಆದರೆ ಯಾರ ವಿಷಯವನ್ನು ತೆಗೆದುಹಾಕಲಾಗುತ್ತದೆ, ಅವರಿಗೆ ಅದರ ಕಾರಣವನ್ನು ತಿಳಿಸುವ ಅವಶ್ಯಕತೆ ಇಲ್ಲ.

ವಿಶ್ಲೇಷಕರ ಪ್ರಕಾರ, ಅಮಿತ್ ಶಾ ಅವರ ಸಂಘಟನಾ ನಾಯಕತ್ವದಿಂದ ಸರ್ಕಾರದ ಕೇಂದ್ರ ನಾಯಕತ್ವದತ್ತ ನಡೆದ ಬದಲಾವಣೆ 2019ರಲ್ಲಿ ಗೃಹ ಸಚಿವರಾದ ಬಳಿಕ ಆರಂಭವಾಯಿತು. ಆ ಸಮಯದಿಂದ ಮೋದಿ ನೀಡಿದ ಪ್ರಮುಖ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

“2019ರಲ್ಲಿ ಯುಎಪಿಎ (UAPA) ಕಾಯ್ದೆಗೆ ಹೆಚ್ಚು ಚರ್ಚೆಯಾಗದ ತಿದ್ದುಪಡಿಯಿಂದ ಇದು ಆರಂಭವಾಗುತ್ತದೆ. ಅದರ ನಂತರ ವಿಧಿ 370ರ ವಿಶೇಷ ಸ್ಥಾನಮಾನವನ್ನು ಕಡಿತಗೊಳಿಸುವುದು, ಸಿಎಎ (CAA) ಸೇರಿದಂತೆ ಹಲವು ಕ್ರಮಗಳು ಬರುತ್ತವೆ. ಇದೇ ಸಮಯದಲ್ಲಿ ಅಮಿತ್ ಶಾ ಅವರ ಪ್ರಭಾವ ಹೆಚ್ಚಾಗಲು ಆರಂಭವಾಗುತ್ತದೆ. ಮೋದಿ ಅನುಸರಿಸುತ್ತಿರುವ ರಾಜಕೀಯವನ್ನು ವಿವರಿಸುವ ಮತ್ತು ಮುನ್ನಡೆಸುವ ವ್ಯಕ್ತಿಯಾಗಿ ಅವರು ಹೊರಹೊಮ್ಮುತ್ತಾರೆ,” ಎಂದು ಪತ್ರಕರ್ತ ಹಾಗೂ ನರೇಂದ್ರ ಮೋದಿ: ದಿ ಮ್ಯಾನ್, ದಿ ಟೈಮ್ಸ್ ಪುಸ್ತಕದ ಲೇಖಕ ನಿಲಾಂಜನ್‌ ಮುಖ್ಯೋಪಾದ್ಯಾಯ ಹೇಳುತ್ತಾರೆ.

“ಕಳೆದ ಕೆಲವು ವರ್ಷಗಳಲ್ಲಿ, ಗೃಹ ಸಚಿವರಾಗಿದ್ದರೂ ಅವರು ಪಕ್ಷದ ಪರವಾಗಿ ಹೆಚ್ಚು ಸ್ಪಷ್ಟವಾಗಿ ಮಾತನಾಡುವ ಪ್ರಚಾರಕರಾಗಿಯೂ ಬೆಳೆದಿದ್ದಾರೆ. ಅಂದರೆ, ಅವರು ದೇಶದ ಗೃಹ ಸಚಿವರಾಗಿರುವುದರ ಜೊತೆಗೆ, ವಾಸ್ತವದಲ್ಲಿ ಪಕ್ಷದ ಅಧ್ಯಕ್ಷರಂತೆ ಕೆಲಸ ಮಾಡುವ ಎರಡೂ ಪಾತ್ರಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಶಾ ಮತ್ತು ಮೋದಿ ಅವರ ರಾಜಕೀಯದಲ್ಲಿ ನನಗೆ ಯಾವುದೇ ಭೇದ ಕಾಣಿಸುವುದಿಲ್ಲ. ಶಾ ಅವರು ಮೋದಿ ಅವರ ನಿಜವಾದ ಶಿಷ್ಯ. 2002ರಿಂದಲೇ ಅವರು ಮೋದಿ ಅವರ ನಂತರದ ಪ್ರಮುಖ ನಾಯಕನಾಗಿ ಇದ್ದಾರೆ ಮತ್ತು ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಮೋದಿ ನೀಡುವ ನಿರ್ದಿಷ್ಟ ಹೊಣೆಗಾರಿಕೆಗಳನ್ನು ಅವರು ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.

ಮೋದಿ-ಶಾ ಅವರ ದೀರ್ಘ ರಾಜಕೀಯ ಪಯಣ

ಬಯೋ ಕೆಮಿಸ್ಟ್ರಿಯಲ್ಲಿ ಪದವಿ ಪಡೆದಿರುವ ಅಮೀತ್‌ ಶಾ ಮತ್ತು ನರೇಂದ್ರ ಮೋದಿಯವರ ಅವರ ಸಂಬಂಧ 1980ರ ದಶಕದಿಂದಲೇ ಆರಂಭವಾಗಿದೆ. ಆ ಸಮಯದಲ್ಲಿ ಮೋದಿ ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದು, ಶಾ ಸಾಮಾನ್ಯ ಸ್ವಯಂಸೇವಕರಾಗಿದ್ದರು ಎಂದು The Caravan ವರದಿ ಮಾಡಿತ್ತು. ಬಳಿಕ ಶಾ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಎಬಿವಿಪಿ ಸೇರಿದರು. 1986ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು — ಇದು ಮೋದಿ ಪಕ್ಷಕ್ಕೆ ಸೇರುವುದಕ್ಕಿಂತ ಒಂದು ವರ್ಷ ಮುಂಚಿನದ್ದು.

ಮೋದಿ 12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಶಾ ಒಂದೇ ಸಮಯದಲ್ಲಿ ಹತ್ತುಕ್ಕೂ ಹೆಚ್ಚು ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದರು. ಇದರಲ್ಲಿ ಗೃಹ ಖಾತೆಯ ಕಿರಿಯ ಸಚಿವ ಸ್ಥಾನವೂ ಸೇರಿತ್ತು.

2016ರಲ್ಲಿ ಶಾ ಅವರನ್ನು ಎರಡನೇ ಬಾರಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ, ಪತ್ರಕರ್ತ ಹಾಗೂ ಲೇಖಕ ನಿಲಾಂಜನ್‌ ಮುಖ್ಯೋಪಾದ್ಯಾಯ ಅವರು ದಿ ವೈರ್‌ನಲ್ಲಿ ಬರೆದ ಲೇಖನದಲ್ಲಿ, ಮೋದಿ ಅವರ ಏಳಿಗೆಯಲ್ಲಿ ಶಾ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳಲು 2010ರ ಜುಲೈ ಅವಧಿಯನ್ನು ಗಮನಿಸಬೇಕೆಂದು ಹೇಳಿದ್ದರು. ಆ ವೇಳೆ ಸಿಬಿಐ ಸೋಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು ಮತ್ತು ಬಳಿಕ ಅವರನ್ನು ಬಂಧಿಸಲಾಗಿತ್ತು.

ಬಂಧನಕ್ಕಿಂತ ಮೊದಲು, ಮೋದಿ ಅವರ ದೆಹಲಿ ಪ್ರವೇಶದ ರಾಜಕೀಯ ಯೋಜನೆಯನ್ನು ನಿರ್ವಹಿಸುವ ಪ್ರಮುಖ ವ್ಯಕ್ತಿಯಾಗಿ ಶಾ ಪರಿಗಣಿಸಲ್ಪಟ್ಟಿದ್ದರು. ಆದರೆ ಅವರ ಬಂಧನದಿಂದ ಆ ಚಟುವಟಿಕೆಯ ವೇಗ ಸ್ವಲ್ಪ ಕುಂಠಿತಗೊಂಡಿತ್ತು ಎಂದು ಮುಖೋಪಾಧ್ಯಾಯ ಬರೆದಿದ್ದರು.

ಶಾ ಅವರು ತಮ್ಮ ವಿರುದ್ಧದ ಪ್ರಕರಣಗಳನ್ನು “ಕಾಂಗ್ರೆಸ್ ಪಕ್ಷದ ರಾಜಕೀಯ ದ್ವೇಷದ ಬೇಟೆ” ಎಂದು The Caravan ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ನಂತರದ ವರ್ಷಗಳಲ್ಲಿ, 2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಮೋದಿ ವಿರುದ್ಧದ ಪ್ರಕರಣಗಳು ಕುಸಿದಂತೆಯೇ, ಶಾ ವಿರುದ್ಧದ ಹಲವು ಪ್ರಕರಣಗಳೂ ಮುಚ್ಚಲ್ಪಟ್ಟವು. ಇದರಲ್ಲಿ 2013ರ ‘ಸ್ನೂಪ್‌ಗೇಟ್’ ಪ್ರಕರಣವೂ ಸೇರಿತ್ತು. ಆ ಪ್ರಕರಣದಲ್ಲಿ ಒಬ್ಬ ಯುವತಿಯ ಫೋನ್ ಟ್ಯಾಪಿಂಗ್‌ಗೆ ಅವರು ಆದೇಶ ನೀಡಿದ್ದರೆಂಬ ಆರೋಪ ಕೇಳಿಬಂದಿತ್ತು.

ಸೋಹ್ರಾಬುದ್ದೀನ್ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, 2012ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಗುಜರಾತ್‌ಗೆ ಮರಳಲು ಅವರಿಗೆ ಅವಕಾಶ ನೀಡಿತು. ನಂತರ ಶಾ ಸಂಘಟನೆಯೊಳಗೆ ತನ್ನ ಪ್ರಭಾವವನ್ನು ಬಲಪಡಿಸಿಕೊಂಡು, ಮೋದಿ ಅವರ ಆಪ್ತ ಸಹಚರ ಹಾಗೂ ರಾಜಕೀಯ ಉಪನಾಯಕರಾಗಿ ಹೊರಹೊಮ್ಮಿದರು.

2014ರ ಲೋಕಸಭೆ ಚುನಾವಣೆಯ ಬಳಿಕ ಮೋದಿ ಅವರು ಶಾ ಅವರನ್ನು “ಮ್ಯಾನ್ ಆಫ್ ದ ಮ್ಯಾಚ್” ಎಂದು ಕರೆದಿದ್ದರು. ಬಳಿಕ ಮಹತ್ವದ ಹಲವು ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿದ ಚುನಾವಣಾ ಗೆಲುವುಗಳೊಂದಿಗೆ, ಶಾ ಒಬ್ಬ ಸಮರ್ಥ ಬಿಜೆಪಿ ಅಧ್ಯಕ್ಷರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. ಮಹಾರಾಷ್ಟ್ರ (2019) ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಪತನಗೊಳಿಸುವಲ್ಲಿ ಬಿಜೆಪಿ ಅನುಸರಿಸಿದ ರಾಜಕೀಯ ತಂತ್ರಗಳ ಮೇಲೂ ಶಾ ಅವರ ಪ್ರಭಾವವಿದೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತದೆ.

ಮೋದಿಯ ಆಪ್ತ, ಉತ್ತರಾಧಿಕಾರದ ಯೋಜನೆ ಮತ್ತು ಮುಂದೇನು?

2024ರ ನಂತರ ಅಮಿತ್ ಶಾ ಅವರ ಪ್ರಭಾವ ಸಾರ್ವಜನಿಕವಾಗಿ ಹೆಚ್ಚಿದಂತಿದ್ದರೂ, ಅವರು ಇನ್ನೂ ಮೋದಿ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯೇ ಎಂದು ವೀಕ್ಷಕರು ಹೇಳುತ್ತಾರೆ. ಇತ್ತೀಚಿನ ಎಲ್ಲಾ ರಾಜಕೀಯ ನಡೆಗಳು ಶಾ ಸ್ವತಂತ್ರವಾಗಿ ತೆಗೆದುಕೊಂಡ ನಿರ್ಧಾರಗಳಲ್ಲ; ಮೋದಿ ಮತ್ತು ಶಾ ಇಬ್ಬರೂ ಸೇರಿ ಹಿಂದುತ್ವದ ರಾಜಕೀಯ ಯೋಜನೆಯನ್ನು ಮುಂದೂಡುತ್ತಿರುವ ಪರಿಣಾಮವೆಂದು ಅವರು ಅಭಿಪ್ರಾಯಪಡುತ್ತಾರೆ.

“ಈ ಎಲ್ಲ ಕ್ರಮಗಳು ಇಬ್ಬರ ಸಂಯುಕ್ತ ಕಾರ್ಯವೇ. ಶಾ ಅತ್ಯಂತ ಚಾಣಾಕ್ಷ ಹಾಗೂ ದೊಡ್ಡ ಮಟ್ಟದ ಅಪಾಯ ತೆಗೆದುಕೊಳ್ಳುವ ಧೈರ್ಯವಿರುವ ನಾಯಕ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರು ಮೋದಿ ಅವರ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ; ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಷ್ಟು ಅಧಿಕಾರ ಇನ್ನೂ ಅವರಿಗೆ ಇಲ್ಲ,” ಎಂದು ಗುಜರಾತ್‌ನ ಹಿರಿಯ ಪತ್ರಕರ್ತರೊಬ್ಬರು ಹೇಳಿದರು.

“2024ರ ಲೋಕಸಭಾ ಫಲಿತಾಂಶಗಳು ಮೋದಿ ಅವರ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ. ಅದಾದ ನಂತರವೇ ಅಮಿತ್ ಶಾ ಅವರ ಪಾತ್ರ ಹೆಚ್ಚಾಗಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೆ ಇಂತಹ ಅಮಿತ್ ಶಾ ಅವರನ್ನು ನೀವು ನೋಡುತ್ತಿರಲಿಲ್ಲ. ಜಯದ ಕ್ರೆಡಿಟ್‌ ಸಂಪೂರ್ಣವಾಗಿ ಮೋದಿ ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ. ಆದರೆ ವಿಫಲತೆಯ ಹೊಣೆ ಹೊರುವುದನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ. ಸಾರ್ವಜನಿಕವಾಗಿ ಸ್ವಲ್ಪ ಹಿಂದೆ ಸರಿದಂತೆ ಕಾಣಿಸುವುದರಿಂದ, ಯಶಸ್ಸಿನ ಲಾಭವನ್ನು ಪಡೆಯಲು ಮತ್ತು ವಿಫಲವಾದರೆ ತಮ್ಮ ಹೆಸರನ್ನು ದೂರವಿಡಲು ಮೋದಿ ಅವರಿಗೆ ಸಾಧ್ಯವಾಗುತ್ತದೆ,” ಎಂದು ಅವರು ಹೇಳಿದರು.

ಮುಖೋಪಾಧ್ಯಾಯ ಅವರ ಪ್ರಕಾರ, ಮೋದಿ ಮತ್ತು ಶಾ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕ ಚಿತ್ರಣದಾಚೆಗೆ ಹೋಗಬೇಕು.

“ಇಬ್ಬರಿಗೂ ಪರಸ್ಪರರ ಹಿಂದಿನ ರಾಜಕೀಯ ಬದುಕಿನ ಬಗ್ಗೆ ಸಂಪೂರ್ಣ ಅರಿವು ಇದೆ. ಆದ್ದರಿಂದ ಒಬ್ಬರು ಮತ್ತೊಬ್ಬರಿಗೆ ದ್ರೋಹ ಮಾಡುವ ಸಾಧ್ಯತೆ ಕಡಿಮೆ. ಆದರೆ ಅಧಿಕಾರದ ವಿಷಯಕ್ಕೆ ಬಂದರೆ ಮೋದಿ ಬಹಳ ಶಕ್ತಿಶಾಲಿ ನಾಯಕ. ಅವರ ಕರಿಶ್ಮಾ, ಭಾಷಣ ಸಾಮರ್ಥ್ಯ ಮತ್ತು ಜನಪ್ರಿಯತೆ ಶಾ ಗಿಂತ ಬಹಳ ಹೆಚ್ಚಾಗಿದೆ,” ಎಂದು ಅವರು ಹೇಳುತ್ತಾರೆ

ಈಗ ಮೋದಿ ಅವರಿಗೆ 75 ವರ್ಷ ಮೀರಿರುವ ಹಿನ್ನೆಲೆಯಲ್ಲಿ, ಬಿಜೆಪಿ ಹಿಂದೆ ಅನುಸರಿಸಿದ್ದ ವಯೋಮಿತಿ ಪ್ರಶ್ನೆಯೂ ಮತ್ತೆ ಚರ್ಚೆಗೆ ಬಂದಿದೆ. ಇದೇ ನಿಯಮವನ್ನು ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಂತಹ ನಾಯಕರಿಗೆ ಅನ್ವಯಿಸಲಾಗಿತ್ತು. ಹೀಗಾಗಿ 2029ರತ್ತ ಸಾಗುವ ಸಂದರ್ಭದಲ್ಲಿ, ಮೋದಿ ನಂತರದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರಧಾನಿ ಸ್ಥಾನಕ್ಕೆ ಅಮಿತ್ ಶಾ ಅವರನ್ನು ಮುಂದಿರಿಸುವ ಯೋಜನೆಯನ್ನು ಮೋದಿ ರೂಪಿಸುತ್ತಿದ್ದಾರೆಯೇ ಎಂಬ ಚರ್ಚೆಯೂ ನಡೆಯುತ್ತಿದೆ.

ಆದರೆ ಮೋದಿ ನಂತರದ ಬಿಜೆಪಿಯಲ್ಲಿ ಅಮಿತ್ ಶಾ ಮಾತ್ರ ಏಕೈಕ ಅಭ್ಯರ್ಥಿಯಲ್ಲ. ಆರ್‌ಎಸ್‌ಎಸ್‌ಗೆ ಸಮೀಪದ ವಲಯಗಳ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅಮಿತ್ ಶಾ ಸೇರಿ ಕನಿಷ್ಠ ಮೂವರು ಪ್ರಮುಖ ನಾಯಕರು ಭವಿಷ್ಯದ ನಾಯಕತ್ವದ ಪೈಪೋಟಿಯಲ್ಲಿ ಇದ್ದಾರೆ.

“ಮೋದಿ ನಂತರ ಆರ್‌ಎಸ್‌ಎಸ್‌ಗೆ ಮತ್ತೆ ಎಲ್ಲವೂ ಮೊದಲಿನಿಂದ ಆರಂಭವಾಗಲಿದೆ. ಪರಿಸ್ಥಿತಿ ಸಂಪೂರ್ಣ ಬದಲಾಗಿರುತ್ತದೆ. ಹಲವರು ನಾಯಕತ್ವದ ಆಕಾಂಕ್ಷಿಗಳು. ಮೋದಿ ಯಾವಾಗ ಮತ್ತು ಯಾವ ಪರಿಸ್ಥಿತಿಯಲ್ಲಿ ಅಧಿಕಾರದಿಂದ ಹೊರಬರುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಚುನಾವಣಾ ಸೋಲಿನ ನಂತರ ಅವರು ಹೊರಬಂದರೆ, ಅಮಿತ್ ಶಾ ಅವರಿಗೆ ಅವಕಾಶವೇ ಇರದು. ಏಕೆಂದರೆ ಆಗ ಬಿಜೆಪಿಯಲ್ಲಿ ಸಂಪೂರ್ಣ ಮರುಸಂರಚನೆ ನಡೆಯಬೇಕಾಗುತ್ತದೆ. ಮೋದಿ ಅವರ ರಾಜಕೀಯ ಪಕ್ಷವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿಲ್ಲ ಎಂಬ ಅಭಿಪ್ರಾಯ ಬಲವಾಗಬಹುದು. 2004ರ ನಂತರ ವಾಜಪೇಯಿ ಅವರ ರಾಜಕೀಯ ಪ್ರಭಾವ ಹೇಗೆ ಕುಗ್ಗಿತೋ, ಅದೇ ರೀತಿಯ ಪರಿಸ್ಥಿತಿ ಉಂಟಾಗಬಹುದು. ಆದರೆ ರಾಜಕೀಯದ ‘ರಾಜ’ ಇನ್ನೂ ಅಧಿಕಾರದಲ್ಲಿರುವಾಗ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಕಷ್ಟ,” ಎಂದು ಮುಖೋಪಾಧ್ಯಾಯ ಹೇಳುತ್ತಾರೆ.

ಲೇಖನ: ಶ್ರಾವಸ್ತಿ ದಾಸ್‌ಗುಪ್ತಾ, ದಿ ವೈರ್

Related Articles

ಇತ್ತೀಚಿನ ಸುದ್ದಿಗಳು