Home ದೇಶ 2029ರಲ್ಲಿ ಸತತ 4ನೇ ಸೋಲಿಗೆ ಸಿದ್ಧವಾಗಿರಿ: ರಾಹುಲ್ ಗಾಂಧಿಗೆ ಅಮಿತ್ ಶಾ ನೇರ ಎಚ್ಚರಿಕೆ!

2029ರಲ್ಲಿ ಸತತ 4ನೇ ಸೋಲಿಗೆ ಸಿದ್ಧವಾಗಿರಿ: ರಾಹುಲ್ ಗಾಂಧಿಗೆ ಅಮಿತ್ ಶಾ ನೇರ ಎಚ್ಚರಿಕೆ!

0

ಗುಜರಾತ್ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾಧಿಸಿದ ಭರ್ಜರಿ ಗೆಲುವನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವ “ಮತಗಳ ಕಳ್ಳತನ” ಮತ್ತು ಚುನಾವಣಾ ಅಕ್ರಮಗಳ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ದೇಶದ ರಾಜಧಾನಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಎಸ್‌ಐಆರ್ (SIR) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಜನರು ಬ್ಯಾಲೆಟ್ ಪೇಪರ್‌ಗಳ ಮೂಲಕ ಬಿಜೆಪಿಗೆ ಮತ ಚಲಾಯಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಗಾಂಧಿನಗರ ಮಹಾನಗರ ಪಾಲಿಕೆಯ 44 ಸ್ಥಾನಗಳಲ್ಲಿ ಬಿಜೆಪಿ 38 ಸ್ಥಾನಗಳನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಇವಿಎಂಗಳ ಮೇಲೆಯೇ ಸದಾ ದೂಷಣೆ ಹೊರಿಸುವವರಿಗೆ ತಿರುಗೇಟು ನೀಡಿದ ಅವರು, “ಈ ಚುನಾವಣೆಗಳು ಬ್ಯಾಲೆಟ್ ಪೇಪರ್ ಬಳಸಿ ನಡೆದಿದ್ದವು ಎಂಬುದನ್ನು ಆರೋಪ ಮಾಡುವವರು ನೆನಪಿನಲ್ಲಿಟ್ಟುಕೊಳ್ಳಬೇಕು,” ಎಂದು ವ್ಯಂಗ್ಯವಾಡಿದರು.

ರಾಜಸ್ಥಾನ ಹಾಗೂ ತ್ರಿಪುರ ಸ್ಥಳೀಯ ಸಂಸ್ಥೆಗಳ ಫಲಿತಾಂಶಗಳನ್ನೂ ಉಲ್ಲೇಖಿಸಿದ ಅವರು, ಸೋತಾಗಲೆಲ್ಲ ಇವಿಎಂ ಅಥವಾ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್ಸಿನ ಚಾಳಿಯಾಗಿದೆ ಎಂದರು.

“ತ್ರಿಪುರದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರಕ್ಕೆ ಬಾರದೆ 33 ವರ್ಷಗಳೇ ಕಳೆದಿವೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಗೆದ್ದು ಬರೋಬ್ಬರಿ 54 ವರ್ಷಗಳಾಗಿವೆ. ನಾನು ನೇರವಾಗಿ ರಾಹುಲ್ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆ: ಈ ಸೋಲುಗಳೆಲ್ಲವೂ ಎಸ್‌ಐಆರ್ ಪರಿಣಾಮವೇ? ಎಸ್‌ಐಆರ್ ಜಾರಿಗೆ ಬಂದಿದ್ದೇ 2024ರ ನಂತರ,” ಎಂದು ಅಮಿತ್ ಶಾ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಮುಖ್ಯಾಂಶಗಳು:

  • ರಾಜಸ್ಥಾನ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಶೇ. 90ರಷ್ಟು ಮುನ್ಸಿಪಲ್ ಕಾರ್ಪೊರೇಷನ್‌ಗಳು, ಶೇ. 66ರಷ್ಟು ಮುನ್ಸಿಪಲ್ ಕೌನ್ಸಿಲ್‌ಗಳು ಹಾಗೂ ಶೇ. 65ರಷ್ಟು ಪುರಸಭೆಗಳಲ್ಲಿ ಗೆಲುವು ಸಾಧಿಸಿದೆ. ಆಮ್ ಆದ್ಮಿ ಪಾರ್ಟಿ (AAP) ಶೇ. 85ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಠೇವಣಿ ಕಳೆದುಕೊಂಡಿದೆ.
  • ತ್ರಿಪುರ: ಗ್ರಾಮ ಸಮಿತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಶೇ. 77.5ರಷ್ಟು ಮತಗಳೊಂದಿಗೆ ಒಟ್ಟು 4,600 ಸ್ಥಾನಗಳ ಪೈಕಿ ಬರೋಬ್ಬರಿ 4,000 ಸ್ಥಾನಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಕೇವಲ 14 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು.

ದೆಹಲಿಯಲ್ಲಿ ವಿಪಕ್ಷಗಳು ನಡೆಸುತ್ತಿರುವ ಧರಣಿಯನ್ನು ಲೇವಡಿ ಮಾಡಿದ ಶಾ, “ಸುಳ್ಳಿನ ಸದ್ದು (ಝೂಟ್ ಕಿ ಗೂಂಜ್) ಮತ್ತು ನಕಲಿ ಮಾಧ್ಯಮ ಈವೆಂಟ್‌ಗಳ ಮೂಲಕ ನೀವು ಜನರ ವಿಶ್ವಾಸವನ್ನು ಗೆಲ್ಲಲು ಸಾಧ್ಯವಿಲ್ಲ,” ಎಂದು ಹರಿಹಾಯ್ದರು. 14 ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಕಲೆಹಾಕಿ ಒಂದೂವರೆ ಕಿಲೋಮೀಟರ್ ರಸ್ತೆಯಲ್ಲಿ 8,000 ಜನರ ಗುಂಪು ಕಟ್ಟಿದ ತಕ್ಷಣ ರಾಹುಲ್ ಗಾಂಧಿ ದೇಶದ ಧ್ವನಿಯಾಗಲು ಸಾಧ್ಯವಿಲ್ಲ.

ಹಳ್ಳಿ, ಅರಣ್ಯ, ಕೃಷಿ ಹಾಗೂ ಬೆಟ್ಟಗುಡ್ಡ ಪ್ರದೇಶಗಳ ಸಾಮಾನ್ಯ ಜನರೊಂದಿಗೆ ಸಂಪರ್ಕ ಕಳೆದುಕೊಂಡಿರುವ ಕಾಂಗ್ರೆಸ್, ಎಸ್‌ಐಆರ್ ವಿರೋಧದ ಸೋಗಿನಲ್ಲಿ ನುಸುಳುಕೋರರನ್ನು ರಕ್ಷಿಸಲು ಹೊರಟಿದೆ ಎಂದು ಆರೋಪಿಸಿದರು. ಮುಂಬರುವ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಬೃಹತ್ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಸತತ ನಾಲ್ಕನೇ ಸೋಲನ್ನು ಅನುಭವಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

You cannot copy content of this page

Exit mobile version