ಅಮ್ಮ ಒಂದು ಅಚ್ಚರಿ…ಅದ್ಭುತದ ಸಂಗಮ! ಅಮ್ಮನ ಬಗ್ಗೆ ಬರೆಯ ಹೊರಟರೆ ಭಾಷೆ ಸೋತು ಬಿಡುತ್ತದೆ ಎನ್ನುತ್ತಾ ʼದಿ ಬೆಸ್ಟ್ ಅಮ್ಮʼನ ಬಗ್ಗೆ ತಮ್ಮ ಮನದ ಭಾವಲಹರಿಯನ್ನು ಹರಿಯ ಬಿಟ್ಟಿದ್ದಾರೆ ಉಡುಪಿಯ ಎಂ ಜಿ ಎಮ್ ಕಾಲೇಜಿನ ಪತ್ರಿಕೋದ್ಯಮ ಪದವಿಯ ಹಳೆಯ ವಿದ್ಯಾರ್ಥಿನಿ, ಕುಂದಾಪುರದ ಕೊರ್ಗಿಯ ನವ್ಯಶ್ರೀ ಶೆಟ್ಟಿ
ಹರೆಯದ ಹುಮ್ಮಸ್ಸಿನಲ್ಲಿದ್ದಾಗ ಹಲವು ಬಾರಿ ನಾವು ಅಮ್ಮನನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಅವಳಿಗೆ ಗದರುತ್ತೇವೆ, ಕಿತ್ತಾಡುತ್ತೇವೆ, ಅಪ್ಡೇಟ್ ಆಗು ಅನ್ನೋ ದಡ್ಡತನದ ಮಾತುಗಳನ್ನು ದಡ್ಡರ ಹಾಗೆ ಆಡುತ್ತೇವೆ. ಹಲವು ಬಾರಿ ಅವಳನ್ನು ಸಂಬಂಧಿಕರು, ಸ್ನೇಹಿತರ ಬಳಿಯೇ ದೂರುತ್ತೇವೆ. ಆದರೆ ಅಮ್ಮ ಅದ್ಯಾವುದನ್ನು ಮನಸ್ಸಿಗೆ ಹಚ್ಚಿಕೊಂಡು ಕೂತು ಬಿಡುವುದಿಲ್ಲ. ನನ್ನ ಕೂಸು ಏನೋ ಕೋಪದಲ್ಲಿ ಮಾತನಾಡಿದೆ ಎಂದುಕೊಂಡು ಕ್ಷಮಿಸಿ ಬಿಡುತ್ತಾಳೆ. ಮತ್ತದೇ ಹುಮ್ಮಸ್ಸು, ಬೆಟ್ಟದಷ್ಟು ಕಾಳಜಿ, ಮೊಗೆದಷ್ಟೂ ಪ್ರೀತಿ ಹೊತ್ತು ನಮ್ಮ ಬಳಿ ಬರುವ ಜೀವ ಆಕೆ.
ಹರೆಯಕ್ಕೆ ಕಾಲಿಟ್ಟಾಗ ನಮ್ಮ ಜೀವನ ಹಲವು ಬಾರಿ ಹದ ತಪ್ಪಿ ಬಿಡುತ್ತದೆ. ಹರೆಯ ಹುಚ್ಚು ಕೋಡಿ ಮನಸ್ಸು, ಚಂಚಲತೆ ಕೂಡ. ಆದರೆ ಇದನ್ನೆಲ್ಲ ಸೂಕ್ಷ್ಮವಾಗಿ ಬಲ್ಲವಳು ಆಕೆ. ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ನಯವಾಗಿ ನಮ್ಮ ಗೊಂದಲಗಳನ್ನು ನಿಭಾಯಿಸುತ್ತಾಳೆ. ಹರೆಯದಲ್ಲಿ ನಮ್ಮನ್ನು ಪಡೆಯುವಿಕೆ, ಕಳೆದುಕೊಳ್ಳುವಿಕೆ ಅತಿಯಾಗಿ ಕಾಡುತ್ತದೆ, ನೋಯಿಸುತ್ತದೆ. ಅದು ತೀರಾ ಕಗ್ಗಂಟಾಗಿ ಪರಿಣಮಿಸಿದಾಗ ಆ ಗೊಂಚಲನ್ನು ಹಲವು ಬಾರಿ ಬಿಡಿಸುವ ಜೀವ ಆಕೆ. ಅದರಲ್ಲೂ ಹೆಣ್ಣು ಮಕ್ಕಳ ಜೀವನದಲ್ಲಿ ಅಮ್ಮ ಪುಟ್ಟ ಪ್ರಪಂಚ. ಹರೆಯದ ಹೆಣ್ಣು ಜೀವಗಳ ತವಕ , ತಲ್ಲಣಗಳನ್ನು ಅವಳೂ ಬಲ್ಲವಳು. ಇದೇ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಅಮ್ಮ ಶಕ್ತಿಯ ಜೊತೆಗೆ ಯುಕ್ತಿ ಕೂಡ .
ಇಡೀ ಜಗತ್ತು ನಮ್ಮನ್ನು ವಿರೋಧಿಸಿದರೂ ಸದಾ ನಮ್ಮ ಜೊತೆಗಿರುವ ಜೀವ ಅಮ್ಮ. ನಮ್ಮ ಸೋಲನ್ನು ಅವಳ ಸೋಲು ಎಂದು ಭಾವಿಸುವ ಜೀವ, ನಮ್ಮ ಗೆಲುವಲ್ಲಿ ಜಗ ಗೆದ್ದಂತೆ ಸಂಭ್ರಮಿಸುವ ಜೀವವಿದ್ದರೆ ಅದು ತಾಯಿ ಮಾತ್ರ.
ಬಾಲ್ಯದಲ್ಲಿರುವಾಗ ಸಾಧಕರು ಅವರ ಹೆತ್ತವರ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡಾಗ ಹಲವು ಬಾರಿ ನನಗೆ ಅವರೆಲ್ಲ ಎಷ್ಟು ಗ್ರೇಟ್ ಅನಿಸ್ತಾ ಇತ್ತು. ಆದರೆ ನನ್ನ ಅಮ್ಮ ಯಾವತ್ತೂ ಗ್ರೇಟ್ ಅನಿಸ್ತಾ ಇರಲಿಲ್ಲ. ಎಲ್ಲರಂತೆ ಅವಳು ನನ್ನ ಕಣ್ಣಿಗೆ ಸಾಮಾನ್ಯರಂತೆ ಕಂಡವಳು. ಆದರೆ ದೊಡ್ಡವಳಾಗುತ್ತಾ ಹೋದಂತೆ ಅವಳೊಂದು ಅಚ್ಚರಿ ಅನಿಸತೊಡಗಿದಳು. ಅವಳ ಜಗ ಕುತೂಹಲದ ಗೂಡು ನನಗೆ.
ಅಮ್ಮ ಶಾಲೆಯ ಮೆಟ್ಟಿಲು ಹತ್ತಿಲ್ಲ. ಅ ಆ ಕಲಿತವಳಲ್ಲ. ಲೆಕ್ಕ ಶಾಸ್ತ್ರ ಅವಳಿಗೆ ಗೊತ್ತೇ ಇಲ್ಲ. ಆದರೆ ಅವಳಿಗೆ ಸಂಬಂಧದ ನಿರ್ವಹಣಾ ಶಾಸ್ತ್ರ ಗೊತ್ತು. ನಮ್ಮ ಗೃಹ ಸಚಿವೆ, ಆರ್ಥಿಕ ತಜ್ಞೆ ಕೂಡ ಆಕೆ. ಓದದೇ ತಾನು ಅನುಭವಿಸಿದ ಕಷ್ಟ ನನ್ನ ಮಕ್ಕಳು ಅನುಭವಿಸ ಬಾರದು ಎನ್ನುವ ಕನಸು ಕಂಡಾಕೆ. ಮೂರು ಹೆಣ್ಣು ಮಕ್ಕಳನ್ನು ಕಷ್ಟದಲ್ಲಿ ಪದವಿ ಓದಿಸಿದ ಗಟ್ಟಿಗಿತ್ತಿ.
ನಾ ಕಂಡ ಜಗತ್ತಿನ ಅತ್ಯಂತ ಶಕ್ತಿಶಾಲಿ ಮಹಿಳೆ ನನ್ನಮ್ಮ. ಅವಳು ತುಂಬು ಕುಟುಂಬದ ಹೆಣ್ಣು ಮಗಳು, ಶ್ರೀಮಂತ ಕುಟುಂಬದ ಸೊಸೆ. ಆದರೆ ಹಲವು ಬಾರಿ ನಾವು ಮೂವರು ಮಾತ್ರ ಅವಳ ಪ್ರಪಂಚ. ಅಮ್ಮ ನಮಗೋಸ್ಕರ ಹಲವು ನೋವು ನಲಿವು ಉಂಡವಳು, ಲೋಕದ ನಿಂದನೆ ಸಹಿಸಿದವಳು.
ಹೆಸರಿಗೆ ತಕ್ಕಂತೆ ಸಾಧು ಸ್ವಭಾವ. ಕೋಪ ಬರುವುದು ಕಮ್ಮಿ. ಬಂದರೂ ಮೌನವೇ ಅವಳ ಕೋಪದ ಪ್ರತಿಕ್ರಿಯೆ. ಅವಳು ಕಂಡ ಜಗ ಮನೆ, ಮಕ್ಕಳು, ಬದುಕಿಗೆ ಆಧಾರವಾಗಿರುವ ಹಸುಗಳು.
ಅಮ್ಮ ನಮ್ಮ ಮನೆಯ ಅಲಾರಂ ಇದ್ದಂತೆ. ಸೂರ್ಯ ಹುಟ್ಟುವುದು, ಮುಳುಗುವುದು ಸಮಯಕ್ಕೆ ಸರಿಯಾಗಿ ಅವಳ ಅರಿವಿಗೆ ಹೇಗೆ ಬರುತ್ತದೆಯೋ ನಾನರಿಯೆ. ಸೂರ್ಯ ಹುಟ್ಟುತ್ತಾ ಅವಳ ಕೆಲಸದ ಉದಯ. ಸೂರ್ಯ ಜಾರಿ, ಚಂದ್ರ ಬಂದರೂ ಹಲವು ಬಾರಿ ಅವಳ ಕೆಲಸಕ್ಕಿಲ್ಲ ಪೂರ್ಣ ವಿರಾಮ.
ಅಮ್ಮನಿಗೆ ಅಕ್ಕಂದಿರು ಮತ್ತು ನಾನು ಯಾವ ಸಬ್ಜೆಕ್ಟ್ ಓದಿದ್ದೇವೆ ಗೊತ್ತಿಲ್ಲ. ಆದರೆ ಬಾಲ್ಯದಿಂದ ಕೂಡಾ ಯಾರಾದರೂ ಓದಿನ ಕುರಿತು ನಮ್ಮನ್ನು ಹೊಗಳಿದರೆ ಅವಳಿಗೆ ನಿಧಿ ಸಿಕ್ಕ ಖುಷಿ. ಅಮ್ಮ ಒಂದು ದಿನ ಕೂಡ ನನ್ನ ಲೇಖನ ಓದಿಲ್ಲ. ಓದಲು ಬರುವುದೂ ಇಲ್ಲ! ಏನು ಬರೆದಿದ್ದೀನಿ ತಿಳಿದೂ ಇಲ್ಲ. ಆದರೆ ಊರಿನವರು, ಸಂಬಂಧಿಕರು ನನ್ನ ಬರವಣಿಗೆ ಕಾರಣದಿಂದ ನನ್ನನ್ನು ಗುರುತು ಹಿಡಿಯುತ್ತಾರೆ ಅನ್ನುವುದೇ ಖುಷಿ ಅವಳಿಗೆ.
ಜವಾಬ್ದಾರಿ ನಿರ್ವಹಿಸಬೇಕಾದವರೇ ಕೆಲವೊಂದು ಸಮಯದಲ್ಲಿ ಹಿಂದೇಟು ಹಾಕಿದಾಗ ಸ್ವಲ್ಪ ಕೂಡ ಬೇಸರವಿಲ್ಲದೆ ಜವಾಬ್ದಾರಿ ನಿರ್ವಹಿಸಿದವಳು. ಲಾಕ್ ಡೌನ್, ಅಪ್ಪನ ಅನಾರೋಗ್ಯ ಸಮಯದಲ್ಲಿ ಕೂಡ ಗಟ್ಟಿಗಿತ್ತಿಯಂತೆ ತಾನು ಮಕ್ಕಳಂತೆ ಪ್ರೀತಿಸುವ ದನಗಳ ಹಾಲಿನಿಂದ ವರ್ಷಗಳ ಕಾಲ ಕುಟುಂಬ ನಿಭಾಯಿಸಿದಾಕೆ.
ನಾವು ದೊಡ್ಡವರಾಗುತ್ತಾ ಅರಿವಿಲ್ಲದಂತೆ ಅಮ್ಮ ಸ್ನೇಹಿತೆಯಾಗಿ ಬಿಟ್ಟಳು. ಅವಳನ್ನು ನೋಡಿದರೆ ಯಾಕೋ ಗೌರವ, ಹೆಮ್ಮೆ ಅಭಿಮಾನ ಜಾಸ್ತಿ. ದಿನ ಕಳೆದಂತೆ ಅಮ್ಮ ಕುತೂಹಲದ ಕೇಂದ್ರವಾಗಿದ್ದಾಳೆ. ಸಮಯ ಉರುಳುತ್ತಾ ಹೋದಂತೆ ಅಮ್ಮನ ಮೇಲೆ ಭರವಸೆ ಹೆಚ್ಚುತ್ತಲೇ ಇದೆ. ಅದನ್ನು ನಾವು ಈಡೇರಿಸುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಅವಳನ್ನು ಖುಷಿಯಾಗಿಸುವ ಹಂಬಲ.
ತಾನು ಓದಿಲ್ಲ ಅಂದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕನಸಿಗಾಗಿ ಕೆಲವೊಮ್ಮೆ ತಾಳಿ ಕೂಡ ಅಡವಿಟ್ಟು ಓದಿಸಿದಾಕೆ. ಆದರೆ ಶಿಕ್ಷಣದಿಂದ ಭವಿಷ್ಯ ಬದಲಾಗುತ್ತೆ, ಬಡತನ ಹೋಗುತ್ತೆ ಅನ್ನುವುದನ್ನ ಬಲವಾಗಿ ನಂಬಿದಾಕೆ. ಮೂವರು ಮಕ್ಕಳನ್ನು ಪದವಿ ಓದಿಸಿದ ಅವಳದು ಸಂತೃಪ್ತ ಜೀವ.
ಅವಳಿಗೆ ಮನೆ, ದನಗಳೇ ಪ್ರಪಂಚ. ಎಲ್ಲಾದರೂ ಹೊರಗೆ ಹೋದಾಗ ಅವಳಿಗೆ ಆ ಜಗತ್ತು ಅಚ್ಚರಿ. ಹೋಟೆಲಿನ ತರಾವರಿ ಖಾದ್ಯ, ನಾವು ಹಾಕೋ ಬಟ್ಟೆ, ಪೇಟೆಯ ಸೊಬಗು ಎಲ್ಲವೂ ಅವಳಿಗೆ ಹೊಸ ಪ್ರಪಂಚ. ಆದರೆ ಅದನ್ನು ಅವಳು ಮಗುವಿನ ಹಾಗೆ ಮುಗ್ಧ ಕಣ್ಣಿಂದ ನೋಡುತ್ತಾಳೆ.
ಅವಳೆಂದೂ ನಮ್ಮ ಇಷ್ಟವನ್ನು ನಿರ್ಬಂಧಿಸಿಲ್ಲ . ಆದರೆ ನಮ್ಮ ಇಷ್ಟ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತೆ ಅಂತ ತಿಳಿದರೆ, ಸೌಮ್ಯವಾಗಿ ತಿಳಿ ಹೇಳುತ್ತಾಳೆ. ಅವಳ ಜೊತೆ ಚೆಂದದ ಮಾತಿನ ಜೊತೆಗೆ ಜಗಳ ಕೂಡ ನನಗೆ ಸಮ ಪಾಲು. ಆದರೆ ಆ ಹುಸಿ ಮನಿಸು, ಕೋಪ ಇಬ್ಬರಿಗೂ ಕ್ಷಣಿಕ. ಬಾಲ್ಯದಿಂದಲೂ ಅಮ್ಮನ ಮಗಳು ನಾನು. ಅವಳನ್ನು ಬಿಟ್ಟು ಮುಂಚೆ ಒಂದು ದಿನವೂ ಇರುತ್ತಿರಲಿಲ್ಲ. ಇಂದಿಗೂ ಅಮ್ಮನ ಸೀರೆಯ ಸೆರಗಿನ ಕೂಸು ನಾನು. ಚಿಕ್ಕವರಿರುವಾಗ ಎಲ್ಲರೂ ನನ್ನನ್ನು ಅಮ್ಮನ ಬಾಲ ಎಂದು ತಮಾಷೆ ಮಾಡುತ್ತಿದ್ದದ್ದು ಇಂದಿಗೂ ನೆನಪು.
ಅಮ್ಮನಿಗೆ ನಾವು ಮೂವರು ಹೆಣ್ಣು ಮಕ್ಕಳು ಜವಾಬ್ದಾರಿಯಲ್ಲ. ಅವಳ ಕನಸು, ಪ್ರೀತಿ, ಕಾಳಜಿಯ ರೂಪ. ಅಮ್ಮ ನಮಗೊಂದು ಅಚ್ಚರಿ. ನಾವು ಮೂವರು ಅವಳಿಗೆ ಒಳ್ಳೆ ಮಕ್ಕಳೋ ಇಲ್ವೋ ಗೊತ್ತಿಲ್ಲ. ಆದರೆ ಅವಳು ನಮಗೆ ದಿ ಬೆಸ್ಟ್ ಅಮ್ಮ. ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಅವರವರ ಅಮ್ಮಂದಿರು ಒಂದು ಅಚ್ಚರಿ. ಅದ್ಭುತದ ಸಂಗಮ!
ಉಡುಪಿಯ ಎಂ ಜಿ ಎಮ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪೂರೈಸಿ ಇದೀಗ ಬರವಣಿಗೆಯತ್ತ ಹೆಜ್ಜೆ ಇಟ್ಟಿದ್ದಾರೆ.