ಗುಜಾರಾತ್: ಬಿಜೆಪಿಯ ಚುನಾವಣಾ ಆಟಕ್ಕೆ ದೇಶದ ದೊಡ್ಡ ಹಾಲು ಸಹಕಾರ ಮಂಡಳಿಯಾದ ಅಮೂಲ್ ಕೂಡ ದಾಳವಾಗಿದೆಯೇ ಎನ್ನುವ ಪ್ರಶ್ನೆ ಜನರಲ್ಲಿ ಮೂಡತೊಡಗಿದೆ. ಈ ವರ್ಷದಲ್ಲಿ ಮೂರನೇ ಸಲ ಹಾಲಿನ ಬೆಲೆ ಏರಿಸಿರುವ ಅಮೂಲ್ ಎಂದಿನಂತೆ ಎಲ್ಲೆಡೆ ಬೆಲೆಯೇರಿಸಿದೆ ತನ್ನ ಬೆಲೆಯೇರಿಕೆಯ ಪಟ್ಟಿಯಿಂದ ಇನ್ನು ಎರಡು-ಮೂರು ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ್ ರಾಜ್ಯವನ್ನು ಹೊರಗಿಟ್ಟಿರುವುದು ಅನುಮಾನಸ್ಪದವಾಗಿದ್ದು. ಸರಕಾರಿ ಸಂಸ್ಥೆಗಳನ್ನು ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದ ಬಿಜೆಪಿ ಈಗ ಸಹಕಾರಿ ಸಂಸ್ಥೆಗಳನ್ನೂ ಬಳಸಿಕೊಳ್ಳತೊಡಗಿದೆಯೇ ಎನ್ನುವ ಅನುಮಾನ ದಟ್ಟವಾಗಿ ಕಾಡತೊಡಗಿದೆ.
ಬರಲಿರುವ ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು Gujarat Cooperative Milk Marketing Federation (GCMMF) ತನ್ನ ಹಾಲಿನ ಬೆಲೆಯನ್ನು ಗುಜರಾತ್ ಹೊರತುಪಡಿಸಿ ಎಲ್ಲೆಡೆ ಏರಿಸುವ ತೀರ್ಮಾನ ತೆಗೆದುಕೊಂಡಿತ್ತು. ಅದಾಗ್ಯೂ ಈ ಬೆಲೆಯೇರಿಕೆಯು ಅಮೂಲ್ ಗೋಲ್ಡ್ , ಮತ್ತು ಎಮ್ಮೆಯ ಹಾಲನ್ನು ಮಾತ್ರ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ.
ಈ ಬೆಲೆಯೇರಿಕೆಯಿಂದ ಚುನಾವಣೆ ಎದುರಿಸಲಿರುವ ಗುಜರಾತ್ ಏಕೆ ಹೊರತಾಗಿದೆ ಎಂದು GCMMF ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಯನ್ ಮೆಹ್ತಾ “ಇದು ಆಡಳಿತದ ನಿರ್ಧಾರ ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.” ಎಂದು ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. GCMMF ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಅವರು ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದೂ ಅದೇ ವರದಿ ಹೇಳಿದೆ.
ಕೇಂದ್ರ ಮತ್ತು ರಾಜ್ಯದ ಒಂದೊಂದೇ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕದ ವಿಷಯ ಎಂದು ಹಲವು ತಜ್ಞರು ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದು, ಈಗ ಆ ಪಟ್ಟಿಗೆ ಇನ್ನೊಂದು ಸಂಸ್ಥೆ ಸೇರಿಕೊಂಡಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆಲೆಯೇರಿಕೆ ಮತ್ತು ನಿರುದ್ಯೋಗ ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಇಂದು ಬೆಲೆಯೇರಿಕೆಯನ್ನು ಬಿಜೆಪಿ ಪರ ವಾದ ಮಂಡಿಸುವಂತಹ, ಆ ಪಕ್ಷದ ಕುರಿತು ಮೃದು ಧೋರಣೆಯನ್ನು ಹೊಂದಿರುವಂತಹ ಮಾಧ್ಯಮಗಳೂ ಚರ್ಚಿಸುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಗುಜಾರಾತಿನ ಅಮೂಲ್ ಸಂಸ್ಥೆ ತನ್ನ ಬೆಲೆಯೇರಿಕೆಯ ಪಟ್ಟಿಯಿಂದ ಗುಜರಾತನ್ನು ಹೊರಗಿಟ್ಟಿದ್ದನ್ನು ನೋಡಿ ಹಲವು ಜನರ ಹುಬ್ಬೇರಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.