Wednesday, May 8, 2024

ಸತ್ಯ | ನ್ಯಾಯ |ಧರ್ಮ

ಅಮುಲ್-‌ ನಂದಿನಿ-ಅಂಬಾನಿ

ಮೊದಲು ದೇಶದ ಐದು ಬೃಹತ್ ಹಾಲು ಉತ್ಪಾದಕ ಸಹಕಾರಿ ಸಂಸ್ಥೆಗಳನ್ನು ನಯವಾಗಿ ಅಮೂಲ್ ಅಡಿ ತರುವುದು!  ಕೊನೆಗೆ ಈ ಬೃಹತ್ ಅಮುಲ್ ಸಹಕಾರಿ ಸಂಸ್ಥೆಯನ್ನು ಇಡಿಯಾಗಿ ಅಂಬಾನಿಯ ರಿಲೈನ್ಸ್ ರಿಟೇಲ್ ಕಂಪನಿಗೆ ಧಾರೆ ಎರೆಯುವುದು!  ಅದಕ್ಕಾಗಿಯೇ ಕೆಲವು ತಿಂಗಳ ಹಿಂದೆ ಅಮೂಲ್ ಸಂಸ್ಥೆಯ ಎಂ.ಡಿ ಆಗಿದ್ದ ಆರ್ ಎಸ್ ಸೋಧಿ ಎಂಬವರನ್ನು ರಿಲಾಯನ್ಸ್ ರಿಟೇಲ್ ಕಂಪನಿಯ ಡೇರಿ ವಿಭಾಗದ ಮುಖ್ಯಸ್ಥನಾಗಿ ಮುಖೇಶ್ ಅಂಬಾನಿ ನೇಮಿಸಿ ಕೊಂಡಿದ್ದು – ಪ್ರವೀಣ್ ಎಸ್ ಶೆಟ್ಟಿ

ಆಹಾರ, ನಿದ್ರಾ, ಭಯ, ಮೈಥುನ, ಇವೆಲ್ಲಾ ಪ್ರವೃತ್ತಿಗಳು ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಸರಿ ಸಮಾನವಾಗಿವೆ. ಕೇವಲ ಧರ್ಮ ಮಾತ್ರ ಮನುಷ್ಯರಲ್ಲಿ ಇರುವ ಪ್ರತ್ಯೇಕ ಪ್ರವೃತ್ತಿ ಎಂದು ದಾರ್ಶನಿಕರು ಹೇಳಿದ್ದಾರೆ. ಇದರ ಅರ್ಥ ಎಲ್ಲಾ ಜೀವಿಗಳಿಗೂ ಆಹಾರ ಸಂಪಾದನೆಯೇ ಪ್ರಥಮ ಪ್ರಾಶಸ್ತ್ಯ. ಆದಿಮಾನವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ನೀರು ಮತ್ತು ಆಹಾರಕ್ಕಾಗಿಯೇ ಪರಿಶ್ರಮ ಪಡುತ್ತಿದ್ದದ್ದು,  ಮತ್ತು ಈ ಆಧುನಿಕ ಯುಗದಲ್ಲಿಯೂ ಮನುಷ್ಯನಿಗೆ ಆಹಾರ ಸಂಪಾದನೆಯೇ ನಿತ್ಯ ಬದುಕಿನ ಬಹುಮುಖ್ಯ ಗುರಿ.  ಬಟ್ಟೆ ಇಲ್ಲದಿದ್ದರೂ ನಡೆದೀತು ಆದರೆ ಶ್ರೀಮಂತ ಮತ್ತು ಬಡವರೆಲ್ಲರಿಗೂ ಆಹಾರ ಮತ್ತು ನೀರು ಬೇಕೇ ಬೇಕು. ಹೀಗಾಗಿ ಆಹಾರೋದ್ಯಮ ಕ್ಷೇತ್ರದ ಪರಿಧಿ ಇತರ ಎಲ್ಲಾ ಕ್ಷೇತ್ರಗಳಿಗಿಂತಲೂ ಹತ್ತಾರು ಪಟ್ಟು ಹೆಚ್ಚು.  ಭಾರತದಲ್ಲಿ ಈಗ 80 ಕೋಟಿ ಜನರು ಬಿ‌ಪಿ‌ಎಲ್ ಕಾರ್ಡ್ ಧಾರಕರಿದ್ದಾರೆ. ಒಂದು ವೇಳೆ ಇವರ ಆದಾಯ ಏರಿ ಇವರು ತಮ್ಮ ಆಹಾರ ಸೇವನೆ ಸಾಮರ್ಥ್ಯ ಏ‌ಪಿ‌ಎಲ್ ಮಟ್ಟಕ್ಕೆ ಏರಿಸಿದರೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಉಂಟಾಗುವ ಬೇಡಿಕೆಯ ಮಹಾಪೂರವನ್ನು ಲೆಕ್ಕ ಹಾಕಿದರೆ ಆಹಾರ ವಲಯದ ಸಂಭಾವ್ಯ ಸಾಮರ್ಥ್ಯದ ಅಂದಾಜು ಆಗಬಹುದು.

ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಅಹಾರೋದ್ಯಮದ ಮೇಲೆ

ಭಾರತ ಈಗ 140 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶ, ಹಾಗೂ ಪ್ರತಿ ವರ್ಷ ನಮ್ಮ ಜನಸಂಖ್ಯೆ ಕನಿಷ್ಠ ಎರಡು ಕೋಟಿ ಏರುತ್ತಿದೆ. ಹಾಗಾಗಿ ಇಲ್ಲಿಯ ಜನರ ಆಹಾರದ ಅಗತ್ಯ ಎಷ್ಟೆಂದು ಊಹಿಸಬಹುದು. ಆಹಾರವಂತೂ ದಿನ ನಿತ್ಯ ಬೇಕೇ ಬೇಕು ತಾನೇ! ಹಾಗಾಗಿ ಜಗತ್ತಿನ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ನಮ್ಮ ಭಾರತದ ಅಹಾರೋದ್ಯಮ ವಲಯದ ಮೇಲೆ ನೆಟ್ಟಿದೆ. ಹಾಲು ಉತ್ಪಾದನೆ ಆಹಾರೋದ್ಯಮದ ಒಂದು ಪ್ರಮುಖ ಭಾಗ. ಪ್ರತಿಯೊಬ್ಬರಿಗೂ ಕಡೆ ಪಕ್ಷ ಚಹಾ ಕಾಫಿ ರೂಪದಲ್ಲಿಯಾದರೂ ಹಾಲು ಬೇಕೇ ಬೇಕು ಅಲ್ಲವೇ? ಈಗ ಭಾರತದ ಜನರಲ್ಲಿ ಹಾಲು ಸೇವನೆ ತುಂಬಾ ಕಡಿಮೆ. ಆದರೆ ಮುಂದುವರಿದ ದೇಶದಲ್ಲಿ ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಹಾಲು ಸೇವನೆಯಿದೆ.  ಒಂದು ವೇಳೆ ಭಾರತ ವಿಶ್ವ ಮಟ್ಟದ ಗುರಿ ಹೊಂದಿದರೆ ಆಗ 140 ಕೋಟಿ ಜನರಿಗೆ ಬೇಕಾಗುವ ಹಾಲಿನ ಬೇಡಿಕೆಯ ಬೃಹತ್ ಗಾತ್ರ ಎಷ್ಟೆಂದು ಊಹಿಸಿ!  ಅದಕ್ಕಾಗಿಯೇ ಮುಖೇಶ್ ಅಂಬಾನಿಯ ರಿಲಯನ್ಸ್ ರಿಟೈಲ್ ಈಗಾಗಲೇ ಡೇರಿ ವಿಭಾಗ ಶುರು ಮಾಡಿ ಅದಕ್ಕೆ ಅಮೂಲ್ ಸಂಸ್ಥೆಯ ಹಿಂದಿನ ಅಧ್ಯಕ್ಷ  ಆರ್ ಎಸ್ ಸೋಧಿ ಎಂಬವರನ್ನೇ ಮುಖ್ಯಸ್ಥನಾಗಿ ನೇಮಿಸಿಕೊಂಡಿರುವುದು!

ಅದಾನಿ, ಅಂಬಾನಿಯಂತಹಾ ಗುಜರಾತಿ ಉದ್ಯಮಿಗಳ ದೂರದೃಷ್ಟಿ

ಆಹಾರೋದ್ಯಮದಲ್ಲಿ ಇರುವಷ್ಟು ಪೊಟೆನ್ಷಿಯಲ್ ಬೇರೆ ಯಾವ ಕ್ಷೇತ್ರದಲ್ಲಿಯೂ ಇಲ್ಲ. ಅದಕ್ಕಾಗಿ ಅದಾನಿ, ಅಂಬಾನಿಯಂತಹಾ ದೂರದೃಷ್ಟಿಯ (ಸಮಯಸಾಧಕ) ಗುಜರಾತಿ ಉದ್ಯಮಿಗಳು ಆಹಾರ ವಲಯದ ಮೇಲೆ ಕಣ್ಣು ನೆಟ್ಟಿರುವುದು. ಮೊದಲು ಅದಾನಿ ಪಂಜಾಬ್ ಮತ್ತು ಹರಿಯಾಣದಲ್ಲಿ ಲಕ್ಷಾಂತರ ಟನ್ ಸಾಮರ್ಥ್ಯದ ಗೋಧಿ-ಅಕ್ಕಿ ಧಾನ್ಯಗಳ ಸೈಲೋಗಳನ್ನು ಕಟ್ಟಿಸಿದರು ಮತ್ತು ಅವಕ್ಕೆ ರೇಲ್ವೆ ಲೈನಿನ ಸೈಡಿಂಗ್ ಸಹಾ ನಿರ್ಮಿಸಿಕೊಂಡರು. ಎಲ್ಲಾ ರೆಡಿಯಾದ ನಂತರ ಮೋದಿ ಸರಕಾರ ಮೂರು ಕೃಷಿ ಕಾನೂನು ತಂದು ಹಠಮಾರಿತನ ತೋರಿ 13 ತಿಂಗಳು ರೈತರನ್ನು ದಿಲ್ಲಿ ಗಡಿಯಲ್ಲಿ ಮಳೆಚಳಿ-ಬಿಸಿಲಲ್ಲಿ ಕುಳ್ಳಿರಿಸಿ 750 ರೈತರು ಸಾಯುವಂತೆ ಮಾಡಿತು, ಕೊನೆಗೆ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬಂದಾಗ ಆ ಮೂರು ಕೃಷಿ ಕಾನೂನನ್ನು ಗತ್ಯಂತರವಿಲ್ಲದೆ ಹಿಂತೆಗೆದು ಕೊಳ್ಳಬೇಕಾಯಿತು ಅಷ್ಟೇ.

ಅದಾನಿಯ ಫಾರ್ಚುನ್ ಬ್ರಾಂಡಿನ ಅದೃಷ್ಟ!.

ಭಾರತದ ಒಟ್ಟು ಅಡುಗೆ ಎಣ್ಣೆ ಬೇಡಿಕೆಯಲ್ಲಿ ಸ್ಥಳೀಯ ರೈತರು ಕೇವಲ 40% ಮಾತ್ರ ಉತ್ಪಾದಿಸುವುದು. ಬಾಕಿ 60% ಖಾದ್ಯ ತೈಲಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಲೇ ಬೇಕು. ತಾಳೆ ಎಣ್ಣೆ ಅರ್ಥಾತ್ ಪಾಮ್ ತೈಲ ನಮಗೆ ಅತಿ ಹೆಚ್ಚು ಪೂರೈಕೆ ಆಗುವುದು ಮಲೇಶಿಯಾ ಮತ್ತು ಇಂಡೋನೇಷಿಯದಿಂದ.  2014 ರಲ್ಲಿ ಪಾಮ್ ಎಣ್ಣೆ ಕ್ರಯ ನಮ್ಮಲ್ಲಿ ಲೀಟರಿಗೆ ಕೇವಲ 50/- ಅಗಿತ್ತು. ಆದರೆ ಮಲೇಶಿಯಾದ ಪ್ರಧಾನಿಗಳು ಮೋದಿ ಸರಕಾರದ ಎನ್‌ಆರ್‌ಸಿಯನ್ನು ಆಕ್ಷೇಪಿಸಿದರು ಎಂಬ ಕುಂಟ ನೆಪ ಒಡ್ಡಿ ಭಾರತ ಸರಕಾರ ಮಲೇಶಿಯಾದಿಂದ ಆಮದಾಗುತ್ತಿದ್ದ ತಾಳೆ ಎಣ್ಣೆಯನ್ನು ನಿಷೇಧಿಸಿತು. ಆಮೇಲೆ ಅದಾನಿ ಈ ಕ್ಷೇತ್ರವನ್ನು ಹಿಂಬಾಗಿಲಿನಿಂದ ಹೊಕ್ಕು ಭಾರತಕ್ಕೆ ತಾಳೆ ಎಣ್ಣೆ ಆಮದು ಮಾಡುವ ಪೂರ್ಣ ಗುತ್ತಿಗೆ ಪಡೆದು ಕೊಂಡರು. ಅದಾಗಿ ಕೆಲವೇ ತಿಂಗಳಲ್ಲಿ ತಾಳೆ ಎಣ್ಣೆ ಬೆಲೆ ಮೂರು ಪಟ್ಟು ಏರಿ ರೂ.160 ಕ್ಕೆ ತಲುಪಿತು ಮತ್ತು ಉಳಿದ ಅಡುಗೆ ಎಣ್ಣೆಗಳೂ ಒಮ್ಮೆಲೇ ರೂ.80 ರಿಂದ ರೂ 200 ಕ್ಕೆ ಏರಿದವು, ಹಾಗೂ ಅದಾನಿಯ ಫಾರ್ಚೂನ್ ಬ್ರಾಂಡ್ ಮತ್ತು ರಾಮದೇವನ ಪತಂಜಲಿಯ ರುಚಿ-ಸೋಯಾ ಎಣ್ಣೆ ಬ್ರಾಂಡ್ ಗಳು ಮುಂಚೂಣಿಗೆ ಬಂದವು. ಹೀಗಿದೆ ಅದಾನಿಯ ಫಾರ್ಚುನ್ ಬ್ರಾಂಡಿನ ಅದೃಷ್ಟ!.

ತೊಗರಿ ಮೇಲೆ ಅದಾನಿ ಏಕಸ್ವಾಮ್ಯ

ತೊಗರಿ ಬೇಳೆ ಉತ್ಪಾದನೆಯಲ್ಲೂ ನಮ್ಮ ದೇಶ ಬಹಳ ಹಿಂದಿದೆ. ನಮ್ಮ ದೇಶದ ಒಟ್ಟು ಬೇಡಿಕೆಯ ಅರ್ಧ ಅಂದರೆ 50% ಮಾತ್ರ ಸ್ಥಳೀಯ ರೈತರು ಉತ್ಪಾದಿಸುವುದು. ಉಳಿದ 50% ಬೇಡಿಕೆಯನ್ನು ನಾವು ಆಫ್ರಿಕಾದಿಂದ ಆಮದು ಮಾಡಿಕೊಂಡ ತೊಗರಿ ಬೇಳೆಯಿಂದ ಪೂರೈಸುವುದು. ತೊಗರಿ ಬೇಳೆಯನ್ನು ತಮ್ಮ ನಿತ್ಯದ ಆಹಾರದಲ್ಲಿ ಶ್ರೀಮಂತರು-ಬಡವರು, ಉತ್ತರದವರು ದಕ್ಷಿಣದವರು, ಹಿಂದೂ-ಮುಸ್ಲಿಂ ಎಲ್ಲರೂ ಬಳಸುತ್ತಾರೆ. ಹಾಗಾಗಿ 2014 ಕ್ಕೆ ಮೊದಲು ಆಫ್ರಿಕಾದ ತೊಗರಿ ಬೇಳೆ ನಮ್ಮ ಮಾರುಕಟ್ಟೆಯಲ್ಲಿ ಕೆಜಿಗೆ 65 ರಿಂದ 70 ರೂಪಾಯಿ ಆಗಿತ್ತು. 2016 ರ ನಂತರ ಅದಾನಿ ಆಫ್ರಿಕಾದಿಂದ ಈ ತೊಗರಿ ಬೇಳೆ ಆಮದಿಗೆ ಇಳಿದು ಏಕಸ್ವಾಮ್ಯ ಸಾಧಿಸಿದ ಮೇಲೆ ಇದರ ಕ್ರಯ ಕೆ‌ಜಿ ಗೆ ರೂ 240 ರ ವರೆಗೆ ಏರಿ ದಾಖಲೆ ಸ್ಥಾಪಿಸಿತ್ತು. ಈಗಲೂ ತೊಗರಿ ಕೆ‌ಜಿ ಗೆ 130 ರ ಮೇಲಿದೆ. (ನಮ್ಮ ಕಲಬುರ್ಗಿ ಜಿಲ್ಲೆ ತೊಗರಿ ಬೇಳೆ ಕಣಜ ಅನಿಸಿಕೊಂಡಿದ್ದರೂ ಅಲ್ಲಿಯ ತೊಗರಿ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲವಂತೆ!).


ಹಿಮಾಚಲ ಸೇಬು ಮಾರುಕಟ್ಟೆಯಲ್ಲಿ ಅದಾನಿಯ ತಂತ್ರ

ಹಿಮಾಚಲ ಪ್ರದೇಶದ ಸೇಬು ದೇಶದೆಲ್ಲೆಡೆ ಮೊದಲು ಕೆ‌ಜಿಗೆ 80 ರೂಪಾಯಿಯಲ್ಲಿ ಸಿಗುತ್ತಿತ್ತು. ಆದರೆ ಅದಾನಿ ವಿಲ್ಮರ್ ಕಂಪನಿಯವರು ಹಿಮಾಚಲ ಪ್ರದೇಶದ ಸೇಬು ಮಾರುಕಟ್ಟೆಯನ್ನು ಕೈವಶ ಮಾಡಿಕೊಂಡ ಮೇಲೆ ರೈತರಿಗೆ ಅದೇ ಹಳೆಯ ಕ್ರಯ ಕೊಟ್ಟರೂ ಗ್ರಾಹಕರಿಗೆ ಮಾತ್ರ ಅದು ಕೆ.‌ಜಿಗೆ 180 ರೂಪಾಯಿ ಆಯಿತು. ಅದೇ ಸಮಯದಲ್ಲಿ ಕಾಶ್ಮೀರದಲ್ಲಿ ವಿಧಿ 370 ರದ್ದತಿಯ ನೆಪದಲ್ಲಿ ಕಾಶ್ಮೀರ ಕಣಿವೆಯ ಸೇಬು ಬೆಳೆಗಾರರ ಕುತ್ತಿಗೆ ಹಿಸುಕಿ ಕಾಶ್ಮೀರದ ಸೇಬು ಭಾರತದ ಇತರ ಭಾಗಗಳಿಗೆ ಸಾಗಾಟ ಆಗದಂತೆ ತಡೆದು ಅಲ್ಲಿಯ ಬೆಳೆಗಾರರ ಆರ್ಥಿಕತೆಯ ಬೆನ್ನಮೂಳೆ ಮುರಿದು ಅದಾನಿಯ ಹಿಮಾಚಲ ಸೇಬಿಗೆ ಹೆಚ್ಚು ಬೇಡಿಕೆ ಬರುವಂತೆ ತಂತ್ರ ರಚಿಸಲಾಯಿತು. (ಹಿಮಾಚಲದಲ್ಲಿ ಇತ್ತೀಚೆಗೆ ಕಾಂಗ್ರೆಸ್ಸ್ ಸರಕಾರ ಬಂದ ಮೇಲೆ ಅಲ್ಲಿಯ ಸೇಬು ಬೆಳೆಗಾರರಿಗೆ ಒಳ್ಳೆಯ ಬೆಲೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ).

ಅಂತಿಮವಾಗಿ ಎಲ್ಲಾ ಆಹಾರೋದ್ಯಮಗಳನ್ನು ಅಂಬಾನಿ-ಅದಾನಿಗಳ ಏಕಸ್ವಾಮ್ಯಕ್ಕೆ ಒಳಪಡಿಸುವುದು!

ಅದಾನಿಯ ಬಳಿಕ ಈಗ ಅಂಬಾನಿಯ ಆಹಾರೋದ್ಯಮವನ್ನು ಬೆಳೆಸುವ ಜವಾಬ್ದಾರಿ ಗುಜರಾತಿ ರಾಜಕೀಯ ಮುಖಂಡರ ಮೇಲೆ ಬಿದ್ದಿದೆ. ಅದಕ್ಕಾಗಿ ಮೊದಲು ಕೇವಲ ರಾಜ್ಯ ಸರಕಾರಗಳ ಅಧಿಕಾರದ ಅಡಿ ಮಾತ್ರವಿದ್ದ ಸಹಕಾರಿ ವಲಯವನ್ನು ಕೇಂದ್ರದ ಅಧಿಕಾರದಡಿಯೂ ಬರುವಂತೆ ಸಹಕಾರಿ ಕಾನೂನನ್ನೇ ಬದಲಿಸಲಾಯಿತು. ದೇಶದಲ್ಲಿ ಹೈನುಗಾರಿಕೆ ಡೇರಿಗಳನ್ನೆಲ್ಲಾ ಒಂದೇ ಛತ್ರಿಯಡಿ ತಂದು ಅದನ್ನು ಉದ್ಧಾರ ಮಾಡುವುದಾಗಿ ಘೋಷಿಸಿ ಹಿಂದಿನ ಏಳು ತಿಂಗಳಲ್ಲಿ  ಸಹಕಾರಿ ಕ್ಷೇತ್ರದ ಕಾನೂನುಗಳಲ್ಲಿ ಅನೇಕ ಬದಲಾವಣೆ ಮಾಡಿ ಕೊನೆಗೆ ನಂದಿನಿ ಮತ್ತು ಅಮೂಲ್ ಸಂಸ್ಥೆಗಳನ್ನು ವಿಲೀನ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಮುಂದೆ ತಂದಿತು. ಮೂರು ಕೃಷಿ ಕಾನೂನನ್ನು ಹೇಗೆ ನಯವಾಗಿ ತರಲಾಯಿತೋ ಅದೇ ರೀತಿ ಈ ಸಹಕಾರಿ ಕ್ಷೇತ್ರದ ಕಾನೂನುಗಳನ್ನೂ ನಯವಾಗಿ ಮಾರ್ಪಾಡು ಮಾಡಿ ಕೇಂದ್ರ ಸರಕಾರ ಎಲ್ಲವನ್ನೂ ತನ್ನ ಹತೋಟಿಗೆ ಪಡೆದುಕೊಂಡಿದೆ.
ಇದರ ಹಿಂದಿರುವ ಮೂಲ ಉದ್ದೇಶ ಅಮೂಲ್ ಸಹಕಾರಿ ಸಂಸ್ಥೆಯನ್ನು ಉದ್ಧಾರ ಮಾಡುವುದು ಅಲ್ಲವೇ ಅಲ್ಲ!  ಮೊದಲು ದೇಶದ ಐದು ಬೃಹತ್ ಹಾಲು ಉತ್ಪಾದಕ ಸಹಕಾರಿ ಸಂಸ್ಥೆಗಳನ್ನು ನಯವಾಗಿ ಅಮೂಲ್ ಅಡಿ ತರುವುದು!  ಕೊನೆಗೆ ಈ ಬೃಹತ್ ಅಮುಲ್ ಸಹಕಾರಿ ಸಂಸ್ಥೆಯನ್ನು ಇಡಿಯಾಗಿ ಅಂಬಾನಿಯ ರಿಲಯನ್ಸ್ ರಿಟೇಲ್ ಕಂಪನಿಗೆ ಧಾರೆ ಎರೆಯುವುದು!  ಅದಕ್ಕಾಗಿಯೇ ಕೆಲವು ತಿಂಗಳ ಹಿಂದೆ ಅಮೂಲ್ ಸಂಸ್ಥೆಯ ಎಂ.ಡಿ ಆಗಿದ್ದ ಆರ್ ಎಸ್ ಸೋಧಿ ಎಂಬವರನ್ನು ಸೆಳೆದುಕೊಂಡು ರಿಲಯನ್ಸ್ ರಿಟೇಲ್ ಕಂಪನಿಯ ಡೇರಿ ವಿಭಾಗದ ಮುಖ್ಯಸ್ಥನಾಗಿ ಭಾರಿ ಸಂಬಳ ಕೊಟ್ಟು ಮುಖೇಶ್ ಅಂಬಾನಿ ನೇಮಿಸಿ ಕೊಂಡಿದ್ದು.  ಒಟ್ಟಾರೆ 2024ರ ಚುನಾವಣೆಗೆ ಮೊದಲು ಭಾರಿ ಭವಿಷ್ಯವಿರುವ ದೇಶದ ಎಲ್ಲಾ ಆಹಾರೋದ್ಯಮ ವಲಯಗಳನ್ನು ಸಂಪೂರ್ಣವಾಗಿ ಅಂಬಾನಿ-ಅದಾನಿಗಳ ಏಕಸ್ವಾಮ್ಯಕ್ಕೆ ಒಳಪಡಿಸಿ, 2024 ರ ಚುನಾವಣೆ ಸೋತರೆ ಜೋಲಾ ಎತ್ತಿಕೊಂಡು ಮಾರಿಷಸ್ ಗೆ ಹೋಗಿ ಸೆಟಲ್ ಆಗುವುದು ಈ ಗುಜರಾತಿ ರಾಜಕೀಯ ನೇತಾರರ ಉನ್ನತ ಉದ್ದೇಶವಿರಬಹುದೇನೋ?!

        
ಪ್ರವೀಣ್ ಎಸ್ ಶೆಟ್ಟಿ

ಹಿರಿಯ ಲೇಖಕರು

ಇದನ್ನು ಓದಿದ್ದೀರಾ?

https://peepalmedia.com/not-only-nandini-but-everything-is-going-to-be-taken-away-beware/ನಂದಿನಿ ಮಾತ್ರವಲ್ಲ, ಎಲ್ಲವನ್ನು ಕಿತ್ತುಕೊಳ್ಳಲಿದ್ದಾರೆ. ಎಚ್ಚರ!

Related Articles

ಇತ್ತೀಚಿನ ಸುದ್ದಿಗಳು