Home ಮೀಡಿಯಾ ಮಾಜಿ ಸಂಸದ ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

ಮಾಜಿ ಸಂಸದ ಬಿ ಜನಾರ್ಧನ ಪೂಜಾರಿಯವರ ನಡೆಗೊಂದು ಬಹಿರಂಗ ಪತ್ರ

0

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ಬಿ ಜನಾರ್ದನ ಪೂಜಾರಿಯವರು ಧರ್ಮಸ್ಥಳದ ಸರಣಿ ಶವಸಂಸ್ಕಾರದ ವಿಚಾರದ ಕುರಿತು ಭಾವುಕರಾಗಿ ಮಾತನಾಡಿದ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಪರ ವಿರೋಧದ ಚರ್ಚೆ ನಡೆದಿದೆ. ಪ್ರಸ್ತುತ ಜನಾರ್ದನ ಪೂಜಾರಿಯವರ ಮನಸ್ಥಿತಿ ಮತ್ತು ಹಿಂದೆ ನಡೆದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚಿಂತಕರಾದ ಮನೋಜ್ ವಾಮಂಜೂರು ಅವರು ಬರೆದಿದ್ದಾರೆ. ಪತ್ರದ ಅಷ್ಟೂ ಸಾರಾಂಶ ಹೀಗಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳು ತುಳು ನೆಲದಲ್ಲಿ ಸ್ಥಾಪಿಸಿದ ಏಕೖಕ  ದೇವಸ್ಥಾನ ಈ ಕುದ್ರೋಳಿ. ಮತನಿರಪೇಕ್ಷತೆಗೆ ಹೆಸರಾಗಿ ನ್ಯಾಯದತ್ತ ಕ್ರಾಂತಿಕಾರಿ ಹೆಜ್ಜೆ ಇಡುವ ಪ್ರತಿ ಮನಸ್ಸುಗಳಿಗೂ ಬೆನ್ನೆಲುಬಾಗಬೇಕಿದ್ದ ಕುದ್ರೋಳಿಯ ಹೆಸರನ್ನು ಹಿರಿಯರಾದ ಬಿ ಜನಾರ್ಧನ ಪೂಜಾರಿಯವರನ್ನು ಮುಂದಿಟ್ಟು ಕುಖ್ಯಾತಿಗೆ ತಳ್ಳುತ್ತಿರುವ ಮನಸುಗಳಿಗೆ ದಿಕ್ಕಾರ. ಬಿ ಜನಾರ್ದನ ಪೂಜಾರಿಯವರು “ನಾನು ಮಂಜುನಾಥನ ಭಕ್ತ” ಎಂದು ಭಾವುಕತೆಗೆ ಒಳಗಾಗಿ ಮಾತನಾಡುತ್ತಾರೆ. ಭಕ್ತಿ ಅವರವರ ಸ್ವತ್ತು ಇದನ್ನು ಯಾರು ಅಲ್ಲಗಳೆಯಲಿಕ್ಕಿಲ್ಲ. ಆದರೆ ಗಾಡ ಅಂದಕಾರದ ಭಕ್ತಿ ಗುರು ಚಳುವಳಿಯ ಲಕ್ಷಣವಂತೂ ಅಲ್ಲವೇ ಅಲ್ಲ. ಒಂದು ವೇಳೆ ಮಂಜುನಾಥನ ಕುರಿತು ಇಂತಹ ಭಕ್ತಿಯನ್ನು ಹಿರಿಯರು ತೋರುತ್ತಿದ್ದರೆ ಕುದ್ರೋಳಿಯಂತಹ ದೇವಸ್ಥಾನವೇ ಆಗುತ್ತಿರಲಿಲ್ಲ.

1908 ರಲ್ಲಿ ಹೊಯ್ಗೆ ಬಜಾರ್ ಕೊರಗಪ್ಪ, ಶೆಡ್ಯೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ್ಣ ಮೇಸ್ತ್ರಿ, ಕಾಂಟ್ರಾಕ್ಟರ್ ಧೂಮಪ್ಪ ಮೊದಲಾದವರು ತುಳುನಾಡಿನಲ್ಲಿ ಒಂದು ದೇವಸ್ಥಾನಕ್ಕಾಗಿ ನಾರಾಯಣ ಗುರುಗಳನ್ನು ಬೇಟಿಯಾಗಲು ಅನೇಕ ಕಾರಣಗಳಿತ್ತು. ಅಂತಹದ್ದೇ ಒಂದು ಘಟನೆ ಕುದ್ರೋಳಿ ದೇವಸ್ಥಾನದ ನಿರ್ಮಾಣ ಕಾಲದಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ದೇವಸ್ಥಾನದ ಒಳಗಡೆ ಬಿಲ್ಲವರಿಗೆ ಪ್ರವೇಶವೇ ಇರದ ಕಾಲವದು. ತಳ ಸಮುದಾಯದ ನಡುವೆ ಈ ಅಸಮಾನತೆಯ ಕಾವು ಹಾಗೆಯೇ ಇತ್ತು.

ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟು 1914ರಲ್ಲಿ ನಾಥಪಂಥದ ಗುರು ಶ್ರೀ ಟೆಹಲನಾಥ್ ಸ್ವಾಮೀಜಿ ನ್ಯಾಯಾಲಯದಲ್ಲಿ ವೖಜ್ಯ ಹೂಡುತ್ತಾರೆ. ಆ ಸಮಯದಲ್ಲಿ ಸಿವಿಲ್ ಜರ್ಜ್ ಆಗಿದ್ದ ಬಿಲ್ಲವರಾದ ಮುಂಡಪ್ಪ ಬಂಗೇರರು ನ್ಯಾಯ ದಾನ ಮಾಡುವ ಮೊದಲು ದೇವಸ್ಥಾನವನ್ನು ವೀಕ್ಷಿಸಲು ಅಪೇಕ್ಷೆ ಪಟ್ಟರು. ಬ್ರಾಹ್ಮಣ ವರ್ಗವು  ಅನಿವಾರ್ಯವಾಗಿ ಒಪ್ಪಿಕೊಂಡಾಗ ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡಿ ಸುಚೀರ್ಭೂತರಾಗಿ ಗರ್ಭಗೃಹವನ್ನು ಹೊಕ್ಕು ವೀಕ್ಷಿಸಿ ಜೋಗಿಗಳ ಪರವಾಗಿ ತೀರ್ಪನಿತ್ತರು. ಬಿಲ್ಲವ ಜನಾಂಗದ ನ್ಯಾಯಾದೀಶನೊಬ್ಬ ದೇವಸ್ಥಾನದ ಒಳಗೆ ಹೊಕ್ಕರು ಎಂಬ ಕಾರಣಕ್ಕಾಗಿ ವರ್ಷ ತುಂಬುವುದರೊಳಗೆ ಕದ್ರಿ ದೇವಸ್ಥಾನಕ್ಕೆ ಬ್ರಹ್ಮಕಲಶವನ್ನು ಮಾಡಲಾಯಿತು. ಇಷ್ಟೊಂದು ಅವಮಾನಗಳ ನಡುವೆ ಕುದ್ರೋಳಿ ದೇವಸ್ಥಾನವು ತಳ ಸಮುದಾಯದವರ ಏಳಿಗೆಗಾಗಿ ಮೂಡಿ ಬಂತು. ಜನರ ನೋವುಗಳಿಗೆ ಒದಗದ ದೇವರನ್ನು ಧಿಕ್ಕರಿಸಿ ದೇವರುಗಳನ್ನು ಜನಾನುರಾಗಿಯಾಗಿಸಿದ ಚಳುವಳಿ ನಾರಾಯಣ ಗುರುಗಳದ್ದು ಚರಿತ್ರೆಯನ್ನು ಕೆದಕದೆ ಮುಚ್ಚಿಟ್ಟ ನೋವುಗಳನ್ನು ಬಗೆಯದೆ ಗುರು ಚಳುವಳಿ ಬೆಳೆದದ್ದಿಲ್ಲ.

ಈ ಸಂದರ್ಭದಲ್ಲಿ ನೆನಪಿಗೆ ಬರುವ ಮತ್ತೊಂದು ಚಳುವಳಿಯೇ  ವೈಕಂ ಚಳುವಳಿ. ಈ ಚಳುವಳಿಗೂ ಗೌಪ್ಯವಾಗಿ ಬಚ್ಚಿಟ್ಟ ನೋವು ತುಂಬಿದ ಎಳುಬಿನ ಮೂಳೆಗಳಿಗೂ ಬಹಳ ಹತ್ತಿರದ ಸಂಬಂಧವಿದೆ. 1924-25 ರ ಹೊತ್ತಿಗೆ ವೈಕಂ ಚಳುವಳಿಯು ನಡೆದಿತ್ತು.ಬ್ರಹ್ಮಶ್ರೀ ನಾರಾಯಣ  ವೈಕಂ ಎದುರುಗಡೆ ಇರುವ ದೇವಾಲಯದ ದಾರಿಯಲ್ಲಿ ತಳಸಮೂದಾಯದ ಜನರಿಗೆ ನಡೆದಾಡಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇಟ್ಟ ಚಳುವಳಿ ಇದು. ಈ ಚಳುವಳಿ ನಡೆಯುವುದಕ್ಕಿಂತ ಸುಮಾರು 200 ವರ್ಷಕ್ಕೂ ಮೊದಲು ಇದೇ ವೈಕಂ ಶಿವಾಲಯಕ್ಕೆ ಪ್ರವೇಶಿಸಲು ಅಲ್ಲಿಯ ಈಳವರು ಅಂದರೆ ಬಿಲ್ಲವರು ತಯಾರಿ ನಡೆಸಿದ್ದರು. ಆಗ ಬಲರಾಮವರ್ಮರು ತಿರುವಾಂಕೂರಿನ ರಾಜರಾಗಿದ್ದರು. ರಾಜ ಮತ್ತು ದಿವಾನರಿಂದ ಆಜ್ಞಾಪ್ತನದ ಕುದುರೆ ಸವಾರ ಕಟುಕನೊಬ್ಬನು ಮೆರವಣಿಗೆ ಹೊರಟ ಇಳವರ ನಡುವೆ ಸಾಗಿ ಖಡ್ಗವನ್ನು ಜಲಪಿಸುತ್ತಾ ದಯೆ ದಾಕ್ಷಿಣಗಳಿಲ್ಲದೆ ಅನೇಕರ ಶಿರಗಳನ್ನು ಕಡಿದುರುಳಿಸಿದನು. ಅನಂತರ ದೇವಸ್ಥಾನದ ಬದಿಯ ಉತ್ತರ ಪೂರ್ವದಲ್ಲಿದ್ದ ಹೊಂಡ ಒಂದರಲ್ಲಿ ಸಾಮೂಹಿಕ ಸಮಾಧಿ ಮಾಡಿದರು. ದಿವಾನ ಕುಂಚುಕುಟ್ಟಿಯು ಈ ಅಮಾನುಷ ಹತ್ಯೆಗೆ ಆಜ್ಞೆ ಮಾಡಿದ್ದರಿಂದ ಹೆಣಗಳನ್ನು ಹುಗಿದ ಹೊಂಡಕ್ಕೆ “ದಿವಾನ್ ಕುಳಿ” ಎಂದೇ ಹೆಸರಾಯಿತು. ಇಂತಹ ನೂರಾರು ಹೂತುಹಾಕಿದ ದೇಹಗಳು ಬಯಸುತ್ತಿದ್ದ ನ್ಯಾಯಕ್ಕಾಗಿ ವೈಕಂ ಸತ್ಯಾಗ್ರಹವೇ ನಡೆದಿತ್ತು. ಇಂತಹ ವೈಕಂ ಚಳುವಳಿಯಲ್ಲಿ ಖುದ್ದು ನಾರಾಯಣ ಗುರುಗಳೇ ಭಾಗವಹಿಸಿದ್ದರು.

ಹಾಗಾಗಿ ಈ ಚಳುವಳಿಯ ಅಂಗವೇ ಆಗಿರುವ ಕುದ್ರೋಳಿ ಧರ್ಮಸ್ಥಳದ ಕ್ರೌರ್ಯತೆಗೆ ತನ್ನವರನ್ನು  ಕಳೆದುಕೊಂಡಿರುವ ಜೀವಗಳ ಜೊತೆ ನಿಲ್ಲಬೇಕು. ಅದು ಬಿಟ್ಟು ದೇವರನ್ನು ಮುಂದಿಟ್ಟುಕೊಂಡು ಜನತೆಯನ್ನು ಪೀಡಿಸುವ ಒಬ್ಬ ಭೂ ಮಾಲಕನಿಗೆ ಶರಣಾದರೆ ಅದು ನಾರಾಯಣ ಗುರುಗಳಿಗೆ ಮಾಡುವ ಬಹುದೊಡ್ಡ ಅವಮಾನ. ಜನಾರ್ದನ ಪೂಜಾರಿಯವರು ತಮ್ಮ ಜೀವನದ ಇಳಿಸಂಜೆಯಲ್ಲಿರುವಾಗ ಅವರನ್ನು ಪ್ರೇರೇಪಿಸಿ ಈ ರೀತಿಯ ಘಟನೆಗಳಿಗೆ ಬಳಸಿಕೊಂಡು ಅವರ ವರ್ಚಸನ್ನು ಮತ್ತೆ ಮತ್ತೆ ಕೊಲೆಗಯುತ್ತಿರುವ ಎಲ್ಲರನ್ನು  ನಾರಾಯಣ ಗುರುಗಳ ಆದರ್ಶ ವನ್ನು ನಂಬಿರುವ ಜನತೆ ದಿಕ್ಕರಿಸುತ್ತಾರೆ.

ಧರ್ಮಸ್ಥಳ ದ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣ ಗುರುಗಳ ಆದರ್ಶವನ್ನು ಪಾಲಿಸುವ ಪ್ರತಿಯೊಬ್ಬರೂ ನ್ಯಾಯದ ಪರ ನಿಲ್ಲುತ್ತಾರೆ. ಬಿ ಜನಾರ್ಧನ ಪೂಜಾರಿಯವರಿಗೆ ಗುರುಚಳುವಳಿಗಳು ಮರೆತಿದ್ದರೆ ಈ ಚಳುವಳಿಯ ಕುರಿತು ನಿಷ್ಠೆ ಇರುವ ಬಳಗವನ್ನು ಈ ಮುಪ್ಪಿನ ದಿನಗಳಲ್ಲಾದರೂ ಕಟ್ಟಿಕೊಳ್ಳಬೇಕು.  ಬಿಲ್ಲವ ಸಮುದಾಯವನ್ನು ನಿತ್ಯ ಅಧರ್ಮ ರಾಜಕಾರಣಕ್ಕೆ ಅರಾಜಕತೆಗೆ ಬಳಸಿಕೊಳ್ಳುವ ಅವಿವೇಕಿಗಳನ್ನು ತಮ್ಮ ಬಳಗದಿಂದ ದೂರ ಇಡಬೇಕು. ಗುರುಗಳು ತಾನು ಕಟ್ಟಿಕೊಂಡ ಬಳಗವೇ ಬಹಳ ಮುಖ್ಯವಾಗಿ ಗುರುಚಳುವಳಿಯ ಯಶಸ್ವಿಗೆ ಕಾರಣವಾಯಿತು. ವಿವೇಕಯುತರಾಗಿದ್ದ ಪಲ್ಪು, ಆಶಾನ್, ಅಯ್ಯಪ್ಪನ್ ಗುರುಗಳ ಶಿಶ್ಯರಾಗಿದ್ದರು ಎಂಬುವುದನ್ನು ನೆನಪಿಸುತ್ತಾ ಇನ್ನಾದರೂ ಆ ನಿಮ್ಮ ಹಿಂದಿರುವ ಲಂಪಟರನ್ನು ದೂರ ಮಾಡಿ ಎಂದು ವಿನಂತಿ

ವಂದನೆಗಳೊಂದಿಗೆ
ಮನೋಜ್ ವಾಮಂಜೂರ್

You cannot copy content of this page

Exit mobile version