ಬೆಂಗಳೂರು : ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಕರ್ನಾಟಕದ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಅನಿಲ್ ಕುಂಬ್ಳೆ ಮಾತುಕತೆ ನಡೆಸಿದರು.
ಸಚಿವ ಈಶ್ವರ್ ಖಂಡ್ರೆ ಭೇಟಿ ಬಳಿಕ ಮಾತನಾಡಿದ ಅನಿಲ್ ಕುಂಬ್ಳೆ, ‘ನನ್ನನ್ನು ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದಗಳು. ನಮ್ಮ ರಾಜ್ಯಕ್ಕೆ ನನ್ನ ಕೈಯಲ್ಲಿ ಎಷ್ಟು ಸೇವೆ ಮಾಡಲು ಸಾಧ್ಯವೋ ಅಷ್ಟು ಸೇವೆ ಮಾಡುತ್ತೇನೆ. ಇಲಾಖೆಯ ಜೊತೆಗೂಡಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವುದಾಗಿ’ ತಿಳಿಸಿದರು.
ಅನಿಲ್ ಕುಂಬ್ಳೆ ಅರಣ್ಯ ಇಲಾಖೆ ರಾಯಭಾರಿಯಾದ ಖುಷಿ ಹಂಚಿಕೊಂಡ ಸಚಿವ ಈಶ್ವರ್ ಖಂಡ್ರೆ, ‘ಕುಂಬ್ಳೆ ಅವರಿಗೆ ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಅನಿಲ್ ಕುಂಬ್ಳೆ ಅವರು ರಾಯಭಾರಿ ಆಗುತ್ತಿರುವುದು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂವರ್ಧನೆಗೆ ಬಲ ನೀಡಲಿದೆ. ವನ್ಯಜೀವಿಗಳು ಮತ್ತು ಅರಣ್ಯದ ಬಗ್ಗೆ ಕುಂಬ್ಳೆ ಅವರಿಗೆ ಅಪಾರ ಪ್ರೀತಿ ಕಾಳಜಿ ಇದೆ. ಆದ್ದರಿಂದ ಅವರು ಯಾವುದೇ ಸಂಭಾವನೆ ಪಡೆಯದೇ ರಾಯಭಾರಿ ಆಗಲು ಒಪ್ಪಿಕೊಂಡಿದ್ದಾರೆ’ ಎಂದರು.