ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಮೃತರಾಗಿದ್ದವರ ಪೈಕಿ ಇನ್ನೂ ಇಬ್ಬರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.
ಇದರೊಂದಿಗೆ ರಕ್ಷಣಾ ತಂಡ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿಯ ಶವಗಳನ್ನು ಹೊರತೆಗೆದಿದ್ದಾರೆ.
ಗುರುವಾರ, ಎನ್‌ಡಿಆರ್‌ಎಫ್ ಸದಸ್ಯರು ದುರಂತ ಸ್ಥಳದಿಂದ ಸುಮಾರು ಎಂಟು ಕಿಮೀ ದೂರದಲ್ಲಿರುವ ಗೋಕರ್ಣದ ಬಳಿ ಆರು ವರ್ಷದ ಬಾಲಕಿ ಆವಂತಿಕಾಳ ಮೃತದೇಹವನ್ನು ವಶಪಡಿಸಿಕೊಂಡರು.
ಮಂಗಳವಾರವೂ ಆಕೆಯ ಶವವನ್ನು ಅಧಿಕಾರಿಗಳು ನೋಡಿದ್ದರು ಆದರೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದ ಕಾರಣ ಎತ್ತಲು ಸಾಧ್ಯವಾಗಿರಲಿಲ್ಲ. ಮಂಗಳವಾರ ರಕ್ಷಣಾ ಪಡೆಯವರು ಆಕೆಯ ತಂದೆ, ತಾಯಿ ಮತ್ತು ಸಹೋದರನ ಶವಗಳನ್ನು ಹೊರತೆಗೆದಿದ್ದರು.
ಭೂಕುಸಿತದ ನಂತರ ನದಿಯಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ಮೃತದೇಹವನ್ನೂ ತುರ್ತು ಸೇವಾ ಸಿಬ್ಬಂದಿ ಹೊರತೆಗೆದಿದ್ದಾರೆ. ನದಿಗೆ ಕೊಚ್ಚಿಹೋದ ಟನ್‌ಗಟ್ಟಲೆ ಮಣ್ಣಿನಿಂದ ಸೃಷ್ಟಿಯಾದ ಹಲವಾರು ದ್ವೀಪಗಳಲ್ಲಿ ಒಂದರಿಂದ ಈ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ.
ಗ್ರಾಮದಿಂದ ಇನ್ನೂ ಕನಿಷ್ಠ ಮೂವರು ನಾಪತ್ತೆಯಾಗಿದ್ದು, ಅವಶೇಷಗಳಡಿಯಲ್ಲಿ ಹೂತು ಹೋಗಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.