ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಹುದ್ದೆಯಿಂದ ಕೆಳಗಿಳಿದ ತಕ್ಷಣ ತಮಿಳುನಾಡಿನಲ್ಲಿ ಬಿಜೆಪಿಗೆ ಸೇರಿ ಅಲ್ಲಿ ರಾಜ್ಯಾಧ್ಯಕ್ಷ ಆಗುವ ವರೆಗೂ ಬೆಳೆದ ಅಣ್ಣಾಮಲೈ ಈಗ ಬಿಜೆಪಿ ರಾಜಕೀಯದ ಆಟಕ್ಕೆ ಬಲಿಯಾದಂತಾಗಿದೆ.
ಈ ಮೂಲಕ ತಮಿಳುನಾಡು ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಮೈತ್ರಿ ಮಾತುಕತೆಗಳೇ ಅಣ್ಣಾಮಲೈ ನಿರ್ಗಮನಕ್ಕೆ ಕಾರಣವಾಗಿದೆ ಎಂದು ನಿಖರವಾಗಿ ಹೇಳಬಹುದು.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಏಪ್ರಿಲ್ 7 ರಂದು ನಡೆಯಲಿದ್ದು, ಏಪ್ರಿಲ್ 9 ರಂದು ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಅವರು ಏಪ್ರಿಲ್ 7 ರಂದು ತಮಿಳುನಾಡಿಗೆ ಭೇಟಿ ನೀಡಲಿದ್ದು, ಹೊಸ ರಾಜ್ಯ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚಿಸಲಿದ್ದಾರೆ.
ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಆಡಳಿತ ಪಕ್ಷ ಡಿಎಂಕೆ ಮಾತ್ರವಲ್ಲದೆ ವಿರೋಧ ಪಕ್ಷ ಎಐಎಡಿಎಂಕೆ ಪಕ್ಷವನ್ನೂ ಸಹ ಸಮಾನವಾಗಿ ವಿರೋಧಿಸಿಕೊಂಡು ಬಂದಿದ್ದರು. ಈ ನಡುವೆ ಎಐಎಡಿಎಂಕೆ ನಾಯಕರು ಅಮಿತ್ ಷಾ ಭೇಟಿ ಸಂದರ್ಭದಲ್ಲಿ ಅಣ್ಣಾಮಲೈ ವಿರುದ್ಧ ದೂರಿರುವುದೂ ಅಲ್ಲದೇ ನೇರವಾಗಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲು ಪಟ್ಟು ಹಿಡಿದಿದ್ದರು.
2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ಪಕ್ಷದ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ಜೊತೆಗೆ ಅಣ್ಣಾಮಲೈ ಕಡಿಮೆ ಅವಧಿಯಲ್ಲಿ ತಮಿಳುನಾಡು ಬಿಜೆಪಿಯನ್ನು ಈ ಹಿಂದಿಗಿಂತ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಗೆ ಮುಳುವಾದ ಅಣ್ಣಾಮಲೈ ರಾಜೀನಾಮೆ ಮೈತ್ರಿಗೆ ತೀರಾ ಅಗತ್ಯ ಇದ್ದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರಿಗೆ ಒತ್ತಾಯಪೂರ್ವಕವಾಗಿಯೇ ರಾಜೀನಾಮೆ ಕೊಡಿಸಲಾಗಿದೆ ಎನ್ನುವ ಮಾತು ತಮಿಳುನಾಡು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬಂದಿವೆ