ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭವಾನಿ ರೇವಣ್ಣಗೆ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ. ಸಂತ್ರಸ್ತ ಮಹಿಳೆ ಅಪಹರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭವಾನಿ ರೇವಣ್ಣ ಮೈಸೂರು ಮತ್ತು ಹಾಸನ ಪ್ರವೇಶಿಸದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈಗ ಈ ಷರತ್ತಿನಲ್ಲಿ ಹೈಕೋರ್ಟ್ ಸ್ವಲ್ಪ ಮಟ್ಟಿಗೆ ಸಡಿಲಿಕೆ ನೀಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆ.ಆರ್.ನಗರದ ಸಂತ್ರಸ್ತೆಯನ್ನು ಅಪರಹರಿಸಿರುವ ಆರೋಪ ಹೊತ್ತಿರುವ ಭವಾನಿ ರೇವಣ್ಣ ಅವರು ಹಾಸನ ಮತ್ತು ಮೈಸೂರಿಗೆ ತೆರಳಲು ಹೈಕೋರ್ಟ್ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಅನುಮತಿ ನೀಡಿದೆ.
ಆರೋಪಿ ಭವಾನಿ ರೇವಣ್ಣ ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಬಹುದು. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀಟರ್ ಸುತ್ತಳತೆ ಪ್ರವೇಶಿಸುವಂತಿಲ್ಲ, ಮತ್ತು ಸಂತ್ರಸ್ತೆ ಮತ್ತು ಅವರಿಗೆ ಸಂಬಂಧಿಸಿದವರನ್ನು ಭೇಟಿ ಮಾಡುವಂತಿಲ್ಲ ಎಂದು ಜಾಮೀನು ಸಡಿಲಿಕೆಯಲ್ಲಿ ತಿಳಿಸಿದೆ.