ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಾಮಾನ್ಯ ಜನರಿಗಾಗಿ ಹೊಸ ರಾಜಕೀಯ ಆಂದೋಲನವೊಂದನ್ನು ಪ್ರಾರಂಭಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಉನ್ನತ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿರುವ ಅಣ್ಣಾಮಲೈ, ಆರು ವರ್ಷಗಳ ಹಿಂದೆ ನಾನು ರಾಜಕೀಯಕ್ಕೆ ತೀರಾ ಹೊಸಬನಾಗಿದ್ದಾಗ ನನ್ನ ಮೇಲೆ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿ ನೀಡಿದ್ದನ್ನು ಸ್ಮರಿಸಿದ್ದಾರೆ. ತಮಿಳುನಾಡಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ಮತ್ತು ರಾಜಕಾರಣ ಕೇವಲ ಗಣ್ಯರಿಗೆ ಮಾತ್ರ ಸೀಮಿತವಲ್ಲ, ಸಾಮಾನ್ಯ ಜನರಿಗೂ ಇದರಲ್ಲಿ ಮುಕ್ತ ಅವಕಾಶವಿದೆ ಎಂಬುದನ್ನು ಸಾಬೀತುಪಡಿಸುವುದು ನನ್ನ ಗುರಿಯಾಗಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಭಾಷೆ ಮಾತನಾಡುತ್ತಿಲ್ಲ: ತಮ್ಮ ಬೆಂಬಲಿಗರಿಂದ ‘ಸಿಂಗಂ’ ಎಂದೇ ಕರೆಯಲ್ಪಡುವ ಅಣ್ಣಾಮಲೈ, ತಮಿಳುನಾಡಿನ ಜನರು ದಶಕಗಳ ಹಳೆಯ ರಾಜಕೀಯ ಶೈಲಿಯಿಂದ ಆಯಾಸಗೊಂಡಿದ್ದಾರೆ ಮತ್ತು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಒಂದು ದಶಕದಲ್ಲಿ ಹಲವು ಬಾರಿ ಬದಲಾವಣೆಯ ಗಾಳಿ ಬೀಸಿದರೂ ಅವು ದೀರ್ಘಕಾಲ ಉಳಿಯಲಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದಿಗೂ ತಮಿಳುನಾಡಿನ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಲಿಲ್ಲ ಎಂದು ಅವರು ಪರೋಕ್ಷವಾಗಿ ಬಿಜೆಪಿಯ ಕಾರ್ಯಶೈಲಿಯನ್ನು ಟೀಕಿಸಿದ್ದಾರೆ. ಪಕ್ಷದ ಒಳಗಿನಿಂದ ಮತ್ತು ಹೊರಗಿನಿಂದ ಹಲವಾರು ಅಡೆತಡೆಗಳು ಎದುರಾಗಿದ್ದರೂ ಸಹ, ನಾನು ಈ ಚಿಂತನೆಯನ್ನು ಬದಲಾಯಿಸಲು ಪ್ರಯತ್ನಿಸಿ ಯಶಸ್ಸು ಕಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಳೆದ 18 ತಿಂಗಳುಗಳಿಂದ ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯ: ಪಕ್ಷದ ಹಿರಿಯ ನಾಯಕತ್ವದೊಂದಿಗೆ ಕಳೆದ 18 ತಿಂಗಳುಗಳಿಂದ ತಮಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂಬುದನ್ನು ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ. “ತಮಿಳುನಾಡಿನ ಪ್ರಾದೇಶಿಕ ಆಕಾಂಕ್ಷೆಗಳು, ತಮಿಳು ಭಾಷೆಯ ಶ್ರೀಮಂತಿಕೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ನನ್ನ ಆಲೋಚನೆಗಳು ಬಿಜೆಪಿಯ ಉನ್ನತ ನಾಯಕರ ದೃಷ್ಟಿಕೋನದೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ. ತಮಿಳುನಾಡಿನ ರಾಜಕೀಯ ಭವಿಷ್ಯದ ಕುರಿತಾದ ನನ್ನ ವೈಯಕ್ತಿಕ ವಿಚಾರಗಳಿಂದಾಗಿ ಪಕ್ಷದ ಕೇಂದ್ರ ನಾಯಕತ್ವಕ್ಕೆ ನಾನು ಇನ್ನು ಮುಂದೆ ಹೊರೆಯಾಗಲು ಬಯಸುವುದಿಲ್ಲ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
“ಸುದೀರ್ಘ ಆಲೋಚನೆಯ ನಂತರ, ನಾನು ಪಕ್ಷದಿಂದ ಹೊರಬರಲು ಇದು ಸೂಕ್ತ ಸಮಯ ಎಂದು ನಿರ್ಧರಿಸಿದ್ದೇನೆ. ನಾನು ರಾಜಕೀಯಕ್ಕೆ ಪ್ರವೇಶಿಸಿದ ನಿಜವಾದ ಉದ್ದೇಶವನ್ನು ಮರುಪರಿಶೀಲಿಸಲು ಮತ್ತು ಭವಿಷ್ಯದ ಗಾಳಿ ಎತ್ತ ಬೀಸುತ್ತದೋ ಅತ್ತ ಸಾಗಲು ತೀರ್ಮಾನಿಸಿದ್ದೇನೆ. ಆದ್ದರಿಂದ ತಕ್ಷಣವೇ ಜಾರಿಗೆ ಬರುವಂತೆ ನನ್ನನ್ನು ಎಲ್ಲಾ ಸಾಂಸ್ಥಿಕ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ರಾಜೀನಾಮೆಯನ್ನು ಅಂಗೀಕರಿಸಬೇಕು” ಎಂದು ಕೋರುವ ಮೂಲಕ ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.
