Home ದೇಶ ಪ್ರಧಾನಿ ಮೋದಿಯವರ ಮನೆಯ ಹೊರಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ: ರಾಜೀನಾಮೆಗೆ ಆಗ್ರಹ

ಪ್ರಧಾನಿ ಮೋದಿಯವರ ಮನೆಯ ಹೊರಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ: ರಾಜೀನಾಮೆಗೆ ಆಗ್ರಹ

0

ದೆಹಲಿ: ಹಿಂದಿನ ದಿನ ವಿದ್ಯಾರ್ಥಿಗಳ ಮೇಲೆ ನಡೆದ ಪೋಲಿಸ್ ದಬ್ಬಾಳಿಕೆಯನ್ನು ಖಂಡಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಮಂಗಳವಾರ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರಧಾನಿಯವರ ಅಧಿಕೃತ ನಿವಾಸದ ಬಳಿ ನಡೆದ ಈ ಧರಣಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ. ಸಿ. ವೇಣುಗೋಪಾಲ್ ಹಾಗೂ ಪಕ್ಷದ ಹಲವು ಎಂಪಿಗಳು ಭಾಗವಹಿಸಿದ್ದರು.

ಯುವ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲಾಗಿರುವ ಕುರಿತು ಹೊಣೆಗಾರಿಕೆ ಹೊರಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಮತ್ತು ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವುದರಿಂದ ತಲೆತಪ್ಪಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ತೀವ್ರವಾಗಿ ಆರೋಪಿಸಿದರು.

“ನಿನ್ನೆ ಯುವ ವಿದ್ಯಾರ್ಥಿಗಳ ಮೇಲೆ ನಡೆದ ಕ್ರೂರ ಹಲ್ಲೆಗಳಿಗೆ ಉತ್ತರ ನೀಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಲು ನಾವು ಅವರ ನಿವಾಸದತ್ತ ಪಾದಯಾತ್ರೆ ನಡೆಸಿದ್ದೇವೆ” ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಪೋಸ್ಟ್ ಮಾಡಿದ್ದಾರೆ.

“ಸರ್ಕಾರಕ್ಕೆ ಯಾವುದೇ ಜವಾಬ್ದಾರಿಯನ್ನು ಹೊರಲು ಇಷ್ಟವಿಲ್ಲ, ಅಥವಾ ಈ ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದಕ್ಕೆ ಒಲವಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ದೇಶದ ಯುವಜನತೆಯ ಭವಿಷ್ಯವನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಿದ ಗಾಂಧಿ, ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

“ಭಾರತದ ಯುವಕರ ಭವಿಷ್ಯವನ್ನು ಹಾಳುಮಾಡಿದ್ದಕ್ಕಾಗಿ ಪ್ರಧಾನಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಲೇಬೇಕು” ಎಂದು ಅವರು ಒತ್ತಾಯಿಸಿದರು.

ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳ ಸಮಯದಲ್ಲಿ ಬಂಧನಕ್ಕೊಳಗಾದ, ವಶಕ್ಕೆ ಪಡೆಯಲಾದ ಅಥವಾ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಯುವಕರಿಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ನೆರವು ನೀಡುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (AICC) ತನ್ನ ಕಾನೂನು ತಂಡಕ್ಕೆ ನಿರ್ದೇಶನ ನೀಡಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಕ್ರಮಕ್ಕೆ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

You cannot copy content of this page

Exit mobile version