ಹೊಸದೆಹಲಿ: ತಮಿಳುನಾಡಿನ ಕೆಲ ರಾಜಕೀಯ ನಾಯಕರು ಇಂದಿಗೂ ಹಳೆಯ ಪದ್ಧತಿಗಳನ್ನೇ ಅನುಸರಿಸುತ್ತಿದ್ದಾರೆ; ಮತದಾರರು ಕಲಿಸಿರುವ ಪಾಠ ಹಾಗೂ ಬಯಸುತ್ತಿರುವ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಫಲರಾಗಿದ್ದಾರೆ ಎಂದು ರಾಜ್ಯದ ನಾಯಕ ಕೆ. ಅಣ್ಣಾಮಲೈ ಟೀಕಿಸಿದ್ದಾರೆ.
ಇಂಡಿಯಾ ಟುಡೇ ಗ್ರೂಪ್ ಆಯೋಜಿಸಿದ್ದ ತಮಿಳುನಾಡು ರೌಂಡ್‌ಟೇಬಲ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಇದೇ ವೇಳೆ ವಿಜಯ್ ಅವರ ಸರ್ಕಾರದ ನೂರು ದಿನಗಳ ಆಡಳಿತವನ್ನು ಸ್ವಾಗತಿಸಿದ ಅವರು, “ಬೇರೆಯವರ ಮೇಲೆ ಗೂಬೆ ಕೂರಿಸುವುದು, ಒಬ್ಬ ಮಹಿಳೆಯನ್ನು ಅಥವಾ ತಾಯಿಯನ್ನು ರಾಜಕೀಯ ಜಟಾಪಟಿಗೆ ಎಳೆದು ತರುವುದು ಹಳೆಯ ಚಾಳಿ. ಕೆಲವರು ರಾಜ್ಯ ರಾಜಕೀಯದಲ್ಲಿ ಇಂದಿಗೂ ಇಂತಹ ಕೀಳು ಪದ್ಧತಿಯನ್ನು ಮುಂದುವರಿಸುತ್ತಿದ್ದಾರೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಉದಯನಿಧಿ ಸ್ಟಾಲಿನ್ ಮಾಡಿದ ಹೇಳಿಕೆಗಳು ಹಾಗೂ ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಶಾ ನಡುವಿನ ಸ್ನೇಹಕ್ಕೆ ಸಂಬಂಧಿಸಿದಂತೆ ಎದ್ದಿರುವ ಚರ್ಚೆಗಳನ್ನು ಗುರಿಯಾಗಿಸಿಕೊಂಡು ಅಣ್ಣಾಮಲೈ ಈ ಪರೋಕ್ಷ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮನ್ನು ‘ಬಿಜೆಪಿಯ ಬಿ-ಟೀಮ್’ ಎಂದು ಕರೆಯುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ರಾಜ್ಯದಲ್ಲಿ ಯಾರೇ ಹೊಸ ರಾಜಕೀಯ ಪ್ರಯಾಣ ಆರಂಭಿಸಿದರೂ ಅವರ ಮೇಲೆ ಇಂತಹ ಹಣೆಪಟ್ಟಿ ಕಟ್ಟುವುದು ಮತ್ತು ಅಪಪ್ರಚಾರ ಮಾಡುವುದು ಅತ್ಯಂತ ದುರದೃಷ್ಟಕರ,” ಎಂದು ಹೇಳಿದರು.
