ಉತ್ತರ ಪ್ರದೇಶದ ಮುಜಫರ್‌ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕೇವಲ 4 ತಿಂಗಳ ಅವಧಿಯಲ್ಲಿ 22 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ಭಾರಿ ಸಂಚಲನ ಮೂಡಿಸಿದೆ.
ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ನಡುವಿನ ಅವಧಿಯಲ್ಲಿ 10 ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ 22 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಇತ್ತೀಚೆಗಷ್ಟೇ 12 ವರ್ಷದ ಬಾಲಕನ ಹತ್ಯೆ ಪ್ರಕರಣದಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ್ದರು. ವ್ಯಾಪಾರಿಯ ಅಪಹರಣ ಮತ್ತು ಕೊಲೆ, ರೈತನ ಹತ್ಯೆ, ಹೋಂಗಾರ್ಡ್ ಹತ್ಯೆ ಹಾಗೂ ಪಂಚಾಯಿತಿ ಚುನಾವಣೆಯ ಎದುರಾಳಿಯ ಕೊಲೆಯಂತಹ ಅತ್ಯಂತ ಭೀಕರ ಹಾಗೂ ಕ್ರೂರ ಅಪರಾಧಗಳಲ್ಲಿ ಭಾಗಿಯಾದವರಿಗೆ ಅವರು ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಿದ್ದಾರೆ.
ಇದರೊಂದಿಗೆ ರವಿಕುಮಾರ್ ದಿವಾಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಇದುವರೆಗೆ ಒಟ್ಟು 35 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದಂತಾಗಿದೆ. ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು 2022ರಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋಗ್ರಾಫಿಕ್ ಸರ್ವೆ ನಡೆಸುವಂತೆ ಆದೇಶ ನೀಡುವ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಯಾಗಿದ್ದರು.
