ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಡೆ ಕೇಳಿಸುತ್ತಿರುವ ಏಕೈಕ ಹೆಸರು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’. ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಮೈಲಿಗಲ್ಲಿನ ಈ ಗ್ಯಾಂಗ್ಸ್ಟರ್ ಚಿತ್ರವು ಬಿಡುಗಡೆಗೂ ಮುನ್ನವೇ ಅಭೂತಪೂರ್ವ ಸಂಚಲನ ಸೃಷ್ಟಿಸಿದೆ. ‘ಕೆಜಿಎಫ್’ ನಂತರ ಯಶ್ ಯಾವ ನಿರ್ದೇಶಕರ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಹೈಪ್ ಅನ್ನು ಸಮರ್ಥವಾಗಿ ನಿಭಾಯಿಸಿ, ಪ್ಯಾನ್ ಇಂಡಿಯಾವನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದ ಸಾರಥ್ಯ ವಹಿಸಿದವರು ಪ್ರತಿಭಾವಂತೆ ನಿರ್ದೇಶಕಿ ‘ಗೀತು ಮೋಹನದಾಸ್’.
ದೃಶ್ಯಕಾವ್ಯದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಕಲೆಗಾರಿಕೆ ಗೀತು ಅವರದ್ದು. ಬಾಲನಟಿಯಿಂದ ನಿರ್ದೇಶನದ ಗದ್ದುಗೆಯವರೆಗೆ ಕೇರಳ ಮೂಲದ ಗೀತು ಮೋಹನದಾಸ್ ಅವರ ಸಿನಿ ಪಯಣ ಬಹಳ ಆಸಕ್ತಿದಾಯಕವಾದದ್ದು. ಇವರು ಸಿನಿಮಾ ಜಗತ್ತಿಗೆ ಹೊಸಬರೇನಲ್ಲ; ಬಾಲ್ಯದಲ್ಲಿಯೇ ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.
1986ರಲ್ಲಿ ಬಿಡುಗಡೆಯಾದ ಮಲಯಾಳಂನ ‘ಒನ್ನು ಮುದಲ್ ಪೂಜ್ಯಂ ವರೆ’ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ‘ಅತ್ಯುತ್ತಮ ಬಾಲನಟಿ’ ಕೇರಳ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ತದನಂತರ ಅವರು 1988ರಲ್ಲಿ ‘ಎನ್ ಬೊಮ್ಮಕುಟ್ಟಿ ಅಮ್ಮಾವುಕ್ಕು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಬಾಲನಟಿಯಾಗಿ ಕಾಲಿಟ್ಟಿದ್ದರು.
ಗೀತು ಮೋಹನ್ ದಾಸ್ ಅವರ ಮೂಲ ಹೆಸರು ಗಾಯತ್ರಿ. ತನ್ನ ಮೊದಲ ಚಿತ್ರ ‘ಒನ್ನು ಮುದಲ್ ಪೂಜ್ಯಂವರೆ’ ಎಂಬ ಸಿನಿಮಾದಲ್ಲಿ ಇವರಿಗೆ ಸಿಕ್ಕ ಪಾತ್ರದ ಹೆಸರು ‘ಗೀತು’ ಎಂದಾಗಿತ್ತು. ಬಾಲ ನಟಿಯಾಗಿ ಮುದ್ದಾಗಿ ನಟಿಸಿದ ಇವರನ್ನು ಜನ ಗೀತು ಎಂದು ಕರೆಯಲು ಪ್ರಾರಂಭಿಸಿದರು. ಮುಂದಕ್ಕೆ ಇದೇ ಹೆಸರನ್ನು ಸ್ಕ್ರೀನ್ ಹೆಸರಾಗಿ ಮುಂದುವರೆಸಿದರು. ಮೋಹನ್ ದಾಸ್ ಎಂಬುವುದು ಗೀತು ಅವರ ತಂದೆಯ ಹೆಸರು. ಹಾಗಾಗಿ ಕೇರಳದ ಸಂಸ್ಕ್ರತಿ ಯಂತೆ ತನ್ನ ಹೆಸರಿನ ಮುಂದೆ ತನ್ನ ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾರೆ.
ನಟನೆಯಲ್ಲಿ ಯಶಸ್ಸು ಸಿಕ್ಕರೂ ಅವರ ಮನಸ್ಸು ಸದಾ ಸಿನಿಮಾ ನಿರ್ದೇಶನ ಮತ್ತು ಕಥೆ ಹೇಳುವ ಕಲೆಯ ಕಡೆಗಿತ್ತು. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೆ, ಕೇವಲ ತನ್ನ ಸ್ವಂತ ಪ್ರತಿಭೆ ಮತ್ತು ದೃಢ ನಿರ್ಧಾರದಿಂದ ಅವರು ನಿರ್ದೇಶನದ ಹಾದಿಯನ್ನು ಆರಿಸಿಕೊಂಡರು. ಇದಕ್ಕಾಗಿ ಇವರು ಬ್ರಿಟನ್ನ ಪ್ರತಿಷ್ಠಿತ ಲಂಡನ್ ಇನ್ಸ್ಟಿಟ್ಯೂಟ್ ನಲ್ಲಿ ಸಿನಿಮಾ ಹಾಗು ಕಲಾ ಶಿಕ್ಷಣವನ್ನು ಪಡೆದು ಸಿನಿಮಾ ನಿರ್ಮಾಣದ ತಾಂತ್ರಿಕತೆ ಮತ್ತು ದೃಶ್ಯ ಸಂಯೋಜನೆಯ ಸೂಕ್ಷ್ಮತೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ.
ಗೀತು ಮೋಹನದಾಸ್ ಅವರ ಸಿನಿಮಾಗಳು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರೂ, ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಅವು ದೊಡ್ಡ ಮಟ್ಟದ ಹಣಗಳಿಕೆ ಮಾಡುವಲ್ಲಿ ಆರಂಭದಲ್ಲಿ ಸೆಣಸಾಡಬೇಕಾಯಿತು. ಇವರ ನಿರ್ದೇಶನದ ‘ಲಯರ್ಸ್ ಡೈಸ್’ ಮತ್ತು ‘ಮೂತುನ್’ ಚಿತ್ರಗಳು ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡವು. ಆದರೆ ಬಾಕ್ಸಾಫಿಸಿನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆರ್ಟ್ ಫಿಲ್ಮ್ಗಳ ಜಗತ್ತಿನಲ್ಲಿ ಅಪಾರ ಮನ್ನಣೆ ಸಿಕ್ಕರೂ, ಮೇಲ್ವರ್ಗದ ಹಾಗೂ ಕಮರ್ಷಿಯಲ್ ಪ್ರೇಕ್ಷಕರನ್ನು ತಲುಪುವಲ್ಲಿ ಈ ಸಿನಿಮಾಗಳು ವಾಣಿಜ್ಯಿಕವಾಗಿ ಸವಾಲುಗಳನ್ನು ಎದುರಿಸಿದವು.
ಇಂಡಸ್ಟ್ರಿಯಲ್ಲಿ ಮಹಿಳಾ ನಿರ್ದೇಶಕರಿಗೆ ಬಜೆಟ್ ಬೃಹತ್ ಮಟ್ಟದಲ್ಲಿ ಸಿಗುವುದು ಮತ್ತು ಪುರುಷ ಪ್ರಾಧಾನ್ಯತೆಯ ಕಮರ್ಷಿಯಲ್ ಸ್ಪೇಸ್ನಲ್ಲಿ ಗೂಡುಕಟ್ಟಿಕೊಳ್ಳುವುದು ಅವರಿಗೆ ಅಗ್ನಿಪರೀಕ್ಷೆಯಂತೆಯೇ ಇತ್ತು. ಹಲವರು ಅವರ ಶೈಲಿಯನ್ನು ಪ್ರಶ್ನಿಸಿದರು, ಕೆಲವರು ಸಂದೇಹ ವ್ಯಕ್ತಪಡಿಸಿದರು.
ಸಿನಿಮಾರಂಗದಲ್ಲಿ ಎಲ್ಲರೂ ಅವರ ಸ್ಟೈಲ್ ಬಗ್ಗೆ ಮಾತನಾಡುತ್ತಿದ್ದಾಗ, ರಾಕಿಂಗ್ ಸ್ಟಾರ್ ಯಶ್ ಅವರ ಪ್ರತಿಭೆಯನ್ನು ಗುರುತಿಸಿ ಬೃಹತ್ ಬಜೆಟ್ನ ‘ಟಾಕ್ಸಿಕ್’ ಚಿತ್ರದ ಜವಾಬ್ದಾರಿಯನ್ನು ಒಪ್ಪಿಸಿದರು.
ಟಾಕ್ಸಿಕ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಗೀತು, “ಎಲ್ಲರೂ ನನ್ನ ಸಾಮರ್ಥ್ಯದ ಬಗ್ಗೆ ಅನುಮಾನ ಪಟ್ಟಾಗ ಯಶ್ ನನಗೆ ಈ ಅವಕಾಶ ನೀಡಿದರು” ಎಂದು ಸ್ಮರಿಸಿಕೊಂಡಿದ್ದಾರೆ. ಸುಮಾರು ನಾಲ್ಕೈದು ವರ್ಷಗಳ ಸತತ ಶ್ರಮ, ಕಥೆಯ ಮೇಲಿನ ಒಲವು ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೂಡಿ ಮಾಡಿದ ರಿಸರ್ಚ್ ‘ಟಾಕ್ಸಿಕ್’ ಚಿತ್ರವನ್ನು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ಕೇವಲ ಭಾರತೀಯ ಚಿತ್ರರಂಗವಷ್ಟೇ ಅಲ್ಲದೆ ಹಾಲಿವುಡ್ ಮಟ್ಟದ ತಂತ್ರಜ್ಞರನ್ನು ಒಗ್ಗೂಡಿಸಿ, ಪೋಸ್ಟ್-ಇಂಡಿಪೆಂಡೆನ್ಸ್ ಗೋವಾ ಹಿನ್ನೆಲೆಯ ಗ್ಯಾಂಗ್ಸ್ಟರ್ ಕಥೆಯನ್ನು ತೆರೆಮೇಲೆ ತರಲು ಅವರು ಪಟ್ಟ ಶ್ರಮ ಸಿನಿಮಾದ ಟ್ರೈಲರ್ ನಲ್ಲಿ ಮೇಲ್ನೋಟಕ್ಕೆ ಕಂಡ ಸತ್ಯ.
ಗೀತು ಮೋಹನದಾಸ್ ಅವರ ಜೀವನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ರೋಚಕ ಹಾಗೂ ಆಸಕ್ತಿದಾಯಕ ಸಂಗತಿಗಳೆಂದರೆ ಇವರ ನಿರ್ದೇಶನದ ಮೊದಲ ಫೀಚರ್ ಸಿನಿಮಾ ‘ಲಯರ್ಸ್ ಡೈಸ್’ ಚಿತ್ರವು ಆಸ್ಕರ್ ನ ಭಾರತದ ಅಧಿಕೃತ ಪ್ರವೇಶವಾಗಿ ಪ್ರತಿಷ್ಠಿತ ಆಸ್ಕರ್ ನ ಅಕಾಡೆಮಿ ಅವಾರ್ಡ್ಸ್ ಅಂದರೆ ವಿದೇಶಿ ಭಾಷೆಯ ಚಲನಚಿತ್ರ ವಿಭಾಗಕ್ಕೆ ಆಯ್ಕೆಯಾಗಿತ್ತು.
ಗೀತು ನಿರ್ದೇಶಿಸಿದ ‘ಕೇಳುಕ್ಕುನ್ನುಂಡೋ’ ಎಂಬ ಕಿರುಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸುವುದರ ಜೊತೆಗೆ, ಕೇರಳದ 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವಾಗಿ ಸೇರ್ಪಡೆಗೊಂಡಿದೆ.
ನಿರ್ದೇಶನದ ಕಡೆಗೆ ಸಂಪೂರ್ಣವಾಗಿ ತೊಡಗಿಕೊಳ್ಳುವ ಮೊದಲು, ಅವರು 2004ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಅಗಲೆ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿ ಒಲಿದುಬಂದಿತ್ತು.
ಗೀತು ಅವರು ಹೆಸರಾಂತ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಛಾಯಾಗ್ರಾಹಕ ಹಾಗೂ ನಿರ್ದೇಶಕ ರಾಜೀವ್ ರವಿ ಅವರನ್ನು ವಿವಾಹವಾಗಿದ್ದಾರೆ. ವಿಶೇಷವೆಂದರೆ, ಗೀತು ನಿರ್ದೇಶನದ ‘ಲಯರ್ಸ್ ಡೈಸ್’ ಹಾಗೂ ‘ಮೂತುನ್’ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದವರೇ ಅವರ ಪತಿ ರಾಜೀವ್ ರವಿ.
ಇನ್ನು ಗೀತು ಅವರು ತಮ್ಮ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಕಥೆಗಳನ್ನು ಅಥವಾ ತೀವ್ರ ಭಾವನಾತ್ಮಕ ಸತ್ಯಗಳನ್ನು ತೋರಿಸಿದರೂ, ತಮ್ಮನ್ನು ತಾವು ಕೇವಲ ‘ಮಹಿಳಾ ನಿರ್ದೇಶಕಿ’ ಎಂದು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. “ನಾನು ನಿರ್ದೇಶಕಿ ಅಷ್ಟೇ, ಕಥೆಗೆ ಲಿಂಗಭೇದವಿಲ್ಲ” ಎಂದು ಹಲವು ಸಂದರ್ಶನಗಳಲ್ಲಿ ದೃಢವಾಗಿ ಹೇಳಿದ್ದಾರೆ. ಹಾಗಂತ ಇವರು ಪಿತೃ ಪ್ರಧಾನ್ಯತೆಯನ್ನು ಒಪ್ಪುವವರಲ್ಲ. ಕೇರಳ ಚಲನಚಿತ್ರರಂಗದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು, ಸುರಕ್ಷತೆ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳ ತಡೆಯಲು ರೂಪಿಸಲಾದ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (WCC) ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಗೀತು ಮೋಹನದಾಸ್ ಕೂಡ ಒಬ್ಬರು. ಪೇಟ್ರಿಯಾರ್ಕಿ ಇಂಡಸ್ಟ್ರಿಯಲ್ಲಿ ದೊಡ್ಡ ಬದಲಾವಣೆ ತರಲು ಅವರು ಈ ಸಂಘಟನೆಯ ಮೂಲಕ ಸಕ್ರಿಯವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಗೀತು ಅವರ ಸಿನಿಮಾಗಳು ಪಿತೃಪ್ರಭುತ್ವದ ಮೌಲ್ಯಗಳನ್ನು ಪ್ರಶ್ನಿಸುತ್ತವೆ. ‘ಮೂತನ್’ ಚಿತ್ರದಲ್ಲಿನ ಲಿಂಗ ತಳಮಳಗಳು, ಸಮಾಜದ ಕಟ್ಟುಪಾಡುಗಳು ಮತ್ತು ಸ್ತ್ರೀ ಸ್ವಾತಂತ್ರ್ಯದ ಆಯಾಮಗಳನ್ನು ಅವರು ಯಾವುದೇ ರಾಜಿ ಇಲ್ಲದೆ ತೆರೆಮೇಲೆ ತಂದಿದ್ದಾರೆ.
ತನ್ನನ್ನು ತಾನು ‘ಫೆಮಿನಿಸ್ಟ್ ನಿರ್ದೇಶಕಿ’ ಎಂದು ಸೀಮಿತಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲವಾದರೂ, ಅವರ ಪ್ರತಿಯೊಂದು ಹೆಜ್ಜೆಯೂ ಚಿತ್ರರಂಗದಲ್ಲಿ ಪಿತೃಪ್ರಭುತ್ವದ ಗೋಡೆಗಳನ್ನು ಕೆಡವಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಗೌರವ ತಂದುಕೊಡುವ ದಿಟ್ಟ ಹೋರಾಟದ ಭಾಗವಾಗಿದ್ದಾರೆ.
ಭಾರತೀಯ ಕಮರ್ಷಿಯಲ್ ಸಿನಿಮಾಗಳ ಟ್ರೆಂಡ್ಗಿಂತ ಭಿನ್ನವಾಗಿ, ಕಲಾತ್ಮಕ ಹಾಗು ವಾಸ್ತವಿಕ ಅಂಶಗಳನ್ನೊಳಗೊಂಡ ಸ್ವತಂತ್ರ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಶ್ರಮಿಸುವವರಲ್ಲಿ ಗೀತು ಕೂಡ ಒಬ್ಬರು. ಕಮರ್ಷಿಯಲ್ ಪ್ರೆಶರ್ ಗೆ ಮಣಿಯದೆ ತಮ್ಮದೇ ಆದ ವಿಭಿನ್ನ ಕಂಟೆಂಟ್ ಮೂಲಕ ಸಿನಿಮಾಗಳನ್ನು ತಯಾರಿಸೋದು ಇವರ ವಿಶೇಷತೆ.
ಇಂದು ಗೀತು ಮೋಹನದಾಸ್ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಿರ್ದೇಶಕಿಯರಲ್ಲಿ ಒಬ್ಬರು ಎಂಬುವುದು ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಸೋಲುಗಳಿಗೆ ತಲೆಬಾಗದೆ, ತನ್ನ ವಿಭಿನ್ನ ನಿರೂಪಣಾ ಶೈಲಿಯನ್ನು ಬಿಡದೆ ಅವರು ಸಾಧಿಸಿ ತೋರಿಸಿದ ರೀತಿ ಇಂದಿನ ಯುವ ಪೀಳಿಗೆಯ ನಿರ್ದೇಶಕರಿಗೆ, ತಂತ್ರಜ್ಞರಿಗೆ ದೊಡ್ಡ ಸ್ಪೂರ್ತಿ. ಕಷ್ಟದ ಹಾದಿಯನ್ನು ಸವೆದು ಜಾಗತಿಕ ಸಿನಿಮಾದ ಕಿರೀಟ ತೊಡಲು ಹೊರಟಿರುವ ಗೀತು ಅವರ ನಿರ್ದೇಶನ ಟಾಕ್ಸಿಕ್ ಸಿನಿಮಾ ಯಾವ ಮಟ್ಟದಲ್ಲಿ ಹೊರಹೊಮ್ಮಲಿದೆ ಹಾಗು ಈ ಸಿನಿಮಾದಲ್ಲಿ ಪೇಟ್ರಿಯಾರ್ಕಿಯನ್ನು ಮುರಿದು ಫೆಮಿನಿಸಂಗೆ ಎಷ್ಟು ಮಹತ್ವ ನೀಡಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.
-ಆಝಾದ್ ಕಂಡಿಗ
ಪತ್ರಕರ್ತ
