ಚುನಾವಣಾ ಆಯೋಗ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿದೆ. ಲೋಕಸಭಾ ಚುನಾವಣೆಯ ನಂತರ ತೆರವಾಗಿದ್ದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್.13ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ತೆರವಾದಂತ ಚನ್ನಪಟ್ಟಣ, ಸಂಸದರಾದ ಬಳಿಕ ಬೊಮ್ಮಾಯಿ ಅವರ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ತೆರವಾದ ಸ್ಥಾನಕ್ಕೆ ಹಾಗೂ ಈ.ತುಕಾರಾಂ ಅವರ ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ಚುನಾವಣಾ ಆಯೋಗ ಹೊರಡಿಸಿದ ಮಾಹಿತಿಯಂತೆ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಸಂಬಂಧ ದಿನಾಂಕ 18-10-2024ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ದಿನಾಂಕ 25-10-2024ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ದಿನಾಂಕ 28-10-2024ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 30-10-2024 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 13-11-2024ರಂದು ಮತದಾನ ನಡೆಯಲಿದೆ. ದಿನಾಂಕ 23-11-2024ರಂದು ಮತಏಣಿಕೆ ನಡೆದು, ಫಲಿತಾಂಶ ಘೋಷಣೆಯಾಗಲಿದೆ. ದಿನಾಂಕ 25-11-2024ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.