ಬೆಂಗಳೂರು: ರಾಮನಗರದಲ್ಲಿ ನಡೆದ ದನದ ವ್ಯಾಪಾರಿ ಇದ್ರೀಸ್ ಪಾಶಾ ಅವರ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಅವರು ದೂರು ದಾಖಲಿಸಿದ್ದು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ (ಎಸ್‌ಸಿ, ಎಸ್‌ಟಿ) ವಿರುದ್ಧದ ದೌರ್ಜನ್ಯ ತಿದ್ದುಪಡಿ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳಡಿಯ ಹಲವು ಸೆಕ್ಷನ್ನುಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು FIR ದಾಖಲಿಸಲಾಗಿದೆ.
ಈ ಕುರಿತು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಭ್ಯ FIR ಮಾಹಿತಿಯ ಪ್ರಕಾರ ಆರೋಪಿಯು ಹರೀಶ್ ಕುಮಾರ್ ಅವರಿಗೆ ಮತ್ತು ಅವರ ಪತ್ನಿಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾನೆ. ಮತ್ತು ಅವರಿಗೆ ಅವಾಚ್ಯ ಶಬ್ಧಗಳನ್ನು ಬಳಸಿ ಬೆದರಿಸಿದ್ದಾನೆ.
ತನ್ನನ್ನು ತಾನು ಹಿಂದುತ್ವ ಹೋರಾಟಗಾರ ಎಂದು ಕರೆದುಕೊಳ್ಳುವ ಪುನೀತ್ ಕೆಲವು ದಿನಗಳ ಹಿಂದಷ್ಟೇ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ. ನಂತರ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದು ತನ್ನ ವಿರುದ್ಧ ಪ್ರಕರಣ ರೌಡಿ ಲಿಸ್ಟ್ ತಯಾರಿಸಿದ್ದಕ್ಕೆ ಕ್ಷಮೆ ಕೇಳಬೇಕು ಎಂದಿದ್ದ. ಆದರೆ ಸರ್ಕಾರ ಪ್ರತಿಕ್ರಿಯಿಸದಿದ್ದಾಗ ಸರ್ಕಾರಿ ಬಸ್ಸುಗಳಿಗೆ ಬೆಂಕಿ ಹಚ್ಚುವುದಾಗಿಯೂ ಹೇಳಿದ್ದ. ಆದರೆ ಸರ್ಕಾರ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಕೊನೆಗೆ ತನ್ನ ಪ್ರತಿಭಟನೆಗೆ ಯಾರೂ ಸೊಪ್ಪು ಹಾಕದ ಕಾರಣ ಉಪವಾಸವನ್ನು ಕೊನೆಗೊಳಿಸಿ ಮತ್ತೆ ತನ್ನ ಫೇಸ್ಬುಕ್ ಖಾತೆಯಲ್ಲಿ ತನ್ನನ್ನು ವಿಮರ್ಶಿಸಿದವರನ್ನು ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸುವುದನ್ನು ಮುಂದುವರೆಸಿದ್ದಾನೆ. ಈಗ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದೆಯೆನ್ನುವುದನ್ನು ಕಾದು ನೋಡಬೇಕಿದೆ.