ದೆಹಲಿ: ಜೆನ್-ಝೀ (Gen-Z) ಹೊಡೆತಕ್ಕೆ ಮತ್ತೊಂದು ಸರ್ಕಾರ ಕುಸಿದಿದೆ. ಭ್ರಷ್ಟಾಚಾರದ ವಿರುದ್ಧ ಯುವಜನತೆ ನಡೆಸಿದ ಆಂದೋಲನಗಳ ಕಾರಣದಿಂದಾಗಿ ತಮ್ಮ ಸರ್ಕಾರವು ರಾಜೀನಾಮೆ ನೀಡುತ್ತಿದೆ ಎಂದು ಬಲ್ಗೇರಿಯಾದ ಪ್ರಧಾನಿ ರಾಸೆನ್ ಜೆಲಿಯಾಜ್ಕೋವ್ ಅವರು ಗುರುವಾರ ಘೋಷಿಸಿದರು.
ಸರ್ಕಾರ ರಚನೆಯಾಗಿ ಒಂದು ವರ್ಷವೂ ತುಂಬುವ ಮುನ್ನವೇ, ಸರ್ಕಾರಕ್ಕೆ ವಿರುದ್ಧವಾಗಿ ವಿರೋಧ ಪಕ್ಷ ಮಂಡಿಸಿದ ಅವಿಶ್ವಾಸ ನಿರ್ಣಯವು ಸಂಸತ್ತಿನಲ್ಲಿ ಮತಕ್ಕೆ ಬರುವ ಮೊದಲೇ ಬಲ್ಗೇರಿಯಾ ಪ್ರಧಾನಿ ರಾಜೀನಾಮೆ ಘೋಷಿಸಿದರು. ರಾಸೆನ್ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಸಾವಿರಾರು ಯುವಕರು ಬುಧವಾರ ಬಲ್ಗೇರಿಯಾದಾದ್ಯಂತ ಆಂದೋಲನಗಳನ್ನು ನಡೆಸಿದರು.
ಸರ್ಕಾರ ಸಿದ್ಧಪಡಿಸಿದ 2026 ರ ಕರಡು ಬಜೆಟ್‌ನಿಂದ ಕೆರಳಿದ ಯುವಜನರು, ಇದು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸಿದ್ಧಪಡಿಸಿದ ಬಜೆಟ್ ಎಂದು ಆರೋಪಿಸಿ ಬೀದಿಗಿಳಿದಿದ್ದರು. ಸರ್ಕಾರ ಕಳೆದ ವಾರ ಕರಡು ಬಜೆಟ್ ಹಿಂಪಡೆದಿದ್ದರೂ, ಸರ್ಕಾರ ವಿರೋಧಿ ಆಂದೋಲನಗಳು ತಣ್ಣಗಾಗಲಿಲ್ಲ. ಆಡಳಿತ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ನಂತರ ಪ್ರಧಾನಿ ಜೆಲಿಯಾಜ್ಕೋವ್, ಸರ್ಕಾರವು ಇಂದು ರಾಜೀನಾಮೆ ನೀಡುತ್ತಿದೆ ಎಂದು ಘೋಷಿಸಿದರು.
