ಚಂಡೀಗಢ: ಕೇಂದ್ರ ಸರ್ಕಾರ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆಗೆ (Electricity Amendment Bill) ವಿರೋಧ ವ್ಯಕ್ತಪಡಿಸಿ ಪಂಜಾಬ್‌ನ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಏಕ್ತಾ ಆಜಾದ್ ಬುಧವಾರ ಸಂಗ್ರೂರ್ ಜಿಲ್ಲೆಯಲ್ಲಿ ಸ್ಮಾರ್ಟ್ ಪವರ್ ಮೀಟರ್‌ಗಳನ್ನು ಕಿತ್ತುಹಾಕುವ ಮೂಲಕ ಪ್ರತಿಭಟನೆ ನಡೆಸಿತು. ಮತ್ತೊಂದೆಡೆ, ಲುಧಿಯಾನಾದ ಹಲವು ಗ್ರಾಮಗಳ ರೈತರು ಭಾರತೀಯ ಕಿಸಾನ್ ಮಜ್ದೂರ್ ಯೂನಿಯನ್ (ಪಂಜಾಬ್) ನೇತೃತ್ವದಲ್ಲಿ ಬುಧವಾರ ಚಿಪ್-ಆಧಾರಿತ ಸ್ಮಾರ್ಟ್ ಮೀಟರ್‌ಗಳನ್ನು ತೆಗೆದುಹಾಕಿದರು.
ಸಸ್ರಾಲಿ, ಬೂತ್‌ಗಢ, ಪ್ರೇಮ್ ಕಾಲೋನಿ, ಗೌತಮ್ ಕಾಲೋನಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಮೀಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಯೂನಿಯನ್ ನಾಯಕರು ತಿಳಿಸಿದರು.
ನಂತರ ಅವುಗಳನ್ನು ಗಾವನ್‌ಗಢ ಮತ್ತು ಕಾಕೋವಲ್ ವಿದ್ಯುತ್ ಕೇಂದ್ರಗಳ ಬಳಿ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು. ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಮೊದಲ ಹೆಜ್ಜೆ ಎಂದು ರೈತ ನಾಯಕರು ಬಣ್ಣಿಸಿದ್ದಾರೆ.
ವಿದ್ಯುತ್ ಮಂಡಳಿಯನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಕೇಂದ್ರ ಸಿದ್ಧತೆ ನಡೆಸುತ್ತಿದ್ದರೆ, ಮಂಡಳಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಇದು ನಡೆದರೆ, ವಿದ್ಯುತ್ ಸಬ್ಸಿಡಿಗಳು ನಿಂತುಹೋಗಿ ರೈತರು ಮತ್ತು ಸಾಮಾನ್ಯ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ ಎಂದು ಅವರು ಹೇಳಿದರು.
ಸರ್ಕಾರದ ಸಂಪನ್ಮೂಲಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಅವರು ತಿಳಿಸಿದರು.
