ದೆಹಲಿ: ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ರಾಶಿ ಬೀಳುತ್ತಿವೆ.
ಸುಪ್ರೀಂ ಕೋರ್ಟ್‌ನಲ್ಲಿ 90,897 ಪ್ರಕರಣಗಳು ಬಾಕಿ ಇದ್ದು, ಹೈಕೋರ್ಟ್‌ಗಳಲ್ಲಿ 63,63,406 ಪ್ರಕರಣಗಳು ಮತ್ತು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4,84,57,343 ಪ್ರಕರಣಗಳು ಬಾಕಿ ಇವೆ ಎಂದು ಕೇಂದ್ರ ಕಾನೂನು ಸಚಿವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಬಗೆಹರಿಯದ ದಾವೆಗಳು, ದಾವೆದಾರರ ನಿರಾಸಕ್ತಿ, ಆರೋಪಿಗಳು ಪರಾರಿಯಾಗುವುದು, ವಿವಿಧ ನ್ಯಾಯಾಲಯಗಳಿಂದ ತಡೆಯಾಜ್ಞೆ ಮಂಜೂರಾಗುವುದು, ದಾಖಲೆಗಳಿಗಾಗಿ ಕಾಯುವಿಕೆ, ಸಾಕ್ಷಿಗಳ ಗೈರುಹಾಜರಿ ಮುಂತಾದ ಹಲವು ಕಾರಣಗಳಿಂದಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಚಿವರು ವಿವರಿಸಿದರು.
ಬಾಕಿ ಇರುವ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೂ. 7,210 ಕೋಟಿಗಳ ಅಂದಾಜು ವೆಚ್ಚದಲ್ಲಿ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದ ಇ-ಕೋರ್ಟ್ಸ್ ಯೋಜನೆ (e-Courts Project) ಯ ಮೂರನೇ ಹಂತವನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಈ ಯೋಜನೆಗಾಗಿ 2023-24 ರಲ್ಲಿ ರೂ. 768.25 ಕೋಟಿ, 2024-25 ರಲ್ಲಿ ರೂ. 1,029.11 ಕೋಟಿ ಮತ್ತು ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ. 907.97 ಕೋಟಿ ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
