Friday, April 26, 2024

ಸತ್ಯ | ನ್ಯಾಯ |ಧರ್ಮ

ಶೆಟ್ಟರ್ ನಂತರ ಬಿಜೆಪಿ ಕಡೆ ಮುಖ ಮಾಡಿದ ಮತ್ತೊಬ್ಬ ನಾಯಕ!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಕ್ಷಾಂತರ ಪರ್ವ ಇರುವುದು ಸರ್ವೇ ಸಾಮಾನ್ಯ. ಸಧ್ಯ ಈಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಕಡೆ ಮುಖ ಮಾಡಿರುವ ಹಿಂದೆಯೇ ರಾಜ್ಯದ ಮತ್ತೋರ್ವ ನಾಯಕ ಈಗ ಮೋದಿ ಜಪ ಮಾಡುತ್ತಿರುವುದು, ಮತ್ತೊಂದು ವಿಕೆಟ್ ಬಿಜೆಪಿ ಕಡೆ ಮುಖ ಮಾಡಿದಂತಾಗಿದೆ.

ಆಶ್ಚರ್ಯ ಎಂಬಂತೆ ಇದೇ ರಾಜಕಾರಣಿ ಈಗ ಕೇವಲ ವರ್ಷಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ ತೊಡೆ ತಟ್ಟಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿಯಲ್ಲಿ ವಿಶೇಷವಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಇದೇ ನಾಯಕ ನಂತರ ಬಿಜೆಪಿ ತೊರೆದು ಹೊಸ ಪಕ್ಷ ರಚನೆ ಮಾಡಿ ಬಿಜೆಪಿ ಸೋಲಿಸುವುದೇ ನನ್ನ ಗುರಿ ಎಂದು ತನ್ನ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು.

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧವಾಗಿ ನಿಂತಿದ್ದ ಇದೇ ವ್ಯಕ್ತಿ ಈಗ ಮತ್ತೊಮ್ಮೆ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಅಂತದ್ದೇನು ದೊಡ್ಡ ಅಲೆ ಸೃಷ್ಟಿಸದೇ.. ತನ್ನ ಪರವಾಗಿ ಕೇವಲ ಒಂದು ಸ್ಥಾನವನ್ನಷ್ಟೆ ಪಡೆಯಲು ಶಕ್ತರಾಗಿದ್ದ ವ್ಯಕ್ತಿ ಈಗ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

ಅಂದಹಾಗೆ ಆ ರಾಜಕಾರಣಿ ಬೇರಾರೂ ಅಲ್ಲ, ಒಂದು ಕಾಲದಲ್ಲಿ ರಾಜ್ಯದಲ್ಲಿ ಆಪರೇಷನ್ ಕಮಲದ ಪ್ರಮುಖ ರೂವಾರಿಯಾಗಿ ನಿಂತು, ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಮಾಡಲು ಹೆಗಲಿಗೆ ಹೆಗಲು ಕೊಟ್ಟಿದ್ದ, ನಂತರ ಅಕ್ರಮ ಗಣಿ ದೂಳಿನ ಕಮಟಿಗೆ ಜೈಲು ಪಾಲಾಗಿ ಇದೇ ಬಿಜೆಪಿ ನಾಯಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ, ಬಿಜೆಪಿ ಸೋಲಿಸುವುದೇ ನನ್ನ ಗುರಿ ಎಂದು ಬಳ್ಳಾರಿ ಭಾಗದಲ್ಲಿ ಗಮನಾರ್ಹ ಬದಲಾವಣೆ ತರುವುದಾಗಿ ನಿಂತು ತನ್ನ ಪಕ್ಷದಿಂದ ಕೇವಲ ಒಂದು ಸ್ಥಾನ ಮಾತ್ರ ಗೆದ್ದು ಬರಲು ಕಾರಣವಾದ ಗಾಲಿ ಜನಾರ್ಧನ ರೆಡ್ಡಿ.

ಹೌದು. ಬಿಜೆಪಿ ಈಗ ಅಲ್ಲಿ ಇಲ್ಲಿ ಅಳಿದುಳಿದ ಬಿಜೆಪಿ ತೊರೆದು ಹೋಗಿದ್ದ ಶತ್ರುಗಳನ್ನು ರಾಜಿ ಮಾಡಿಸಿ ಮತ್ತೆ ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಈಗ ಜನಾರ್ಧನ ರೆಡ್ಡಿಗೆ ಗಾಳ ಹಾಕಿದೆ. ಈಗ ರೆಡ್ಡಿ ಕೂಡ ಇದಕ್ಕೆ ತಲೆಯಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕೆ ಸರಿಯಾಗಿ ಇಂದು ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಶ್ರೀರಾಮಮಂದಿರ ನಿರ್ಮಾಣದಲ್ಲಿ ಮೋದಿಜೀಯವರನ್ನು ಅಭಿನಂದಿಸಬೇಕು. ಮೋದಿಯವರು ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.

ಅಷ್ಟೆ ಅಲ್ಲದೆ ಈಗಾಗಲೇ ಬಿಜೆಪಿ ಹೈಕಮಾಂಡ್ ಕೂಡಾ ಜನಾರ್ಧನ ರೆಡ್ಡಿ ಸಂಪರ್ಕ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಧ್ಯ ಜನಾರ್ಧನ ರೆಡ್ಡಿ ಕೂಡಾ ಹಲವಷ್ಟು ಪ್ರಕರಣ ಎದುರಿಸುತ್ತಿದ್ದು, ಸಧ್ಯಕ್ಕೆ ಅವೆಲ್ಲವುಗಳಿಂದ ಬಚಾವಾಗಲು ಬಿಜೆಪಿ ಅವಶ್ಯಕತೆ ಇದ್ದು, ಬಿಜೆಪಿಗೆ ಮರಳುವ ಬಗ್ಗೆಯೂ ಜನಾರ್ಧನ ರೆಡ್ಡಿ ಮನಸ್ಸು ಮಾಡಿರಬಹುದು ಎಂಬ ಮಾತುಗಳು ಕೇಳಿ ಬಂದಿದೆ.

ಅಷ್ಟೆ ಅಲ್ಲದೆ ದೇಶದ ವಿಚಾರ ಬಂದಾಗ ಬಿಜೆಪಿಯವರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಆಗುವುದಾದರೆ ಕೇವಲ ಬಿಜೆಪಿಯೊಂದಿಗೆ ಮಾತ್ರ. ಕಾಂಗ್ರೆಸ್ ಪಕ್ಷದೊಂದಿಗೆ ಈ ವಿಷಯವೇ ಅಪ್ರಸ್ತುತ” ಎಂದು ಜನಾರ್ಧನ ರೆಡ್ಡಿ ತಿಳಿಸಿದ್ದು, ಇವೆಲ್ಲವೂ ಮುಂದಿನ ದಿನಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿಗೆ ಹೋಗುವ ಮುನ್ಸೂಚನೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು