Home ಅಪರಾಧ ಮಹಾರಾಷ್ಟ್ರದಲ್ಲಿ ನೀಟ್‌ ಅಕ್ರಮಕ್ಕೆ ಮತ್ತೊಂದು – ವಿದ್ಯಾರ್ಥಿನಿ ಬಲಿ

ಮಹಾರಾಷ್ಟ್ರದಲ್ಲಿ ನೀಟ್‌ ಅಕ್ರಮಕ್ಕೆ ಮತ್ತೊಂದು – ವಿದ್ಯಾರ್ಥಿನಿ ಬಲಿ

ಮಹಾರಾಷ್ಟ್ರ : ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ‘ನೀಟ್’ (NEET) ಸುತ್ತಲಿನ ವಿವಾದಗಳು ತಣ್ಣಗಾಗದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಲಾಲ್ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕೇವಲ 166 ಅಂಕಗಳನ್ನು ಗಳಿಸಿದ ನಂತರ ಆಕೆ ಒತ್ತಡಕ್ಕೊಳಗಾಗಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಷಾಢ ಏಕಾದಶಿಯ ಅಂಗವಾಗಿ ಅಂಕಿತಾ ಅವರ ಪೋಷಕರು ಹಾಗೂ ಸಹೋದರ ಪಂಡರಪುರಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಅಂಕಿತಾ, ಸಂಜೆ ಸುಮಾರು 5:30ರ ಸುಮಾರಿಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಬಂಧಿಕರು ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಅಂಕಿತಾ ಬರೆದಿದ್ದರೆನ್ನಲಾದ ಆತ್ಮಹತ್ಯೆ ಪತ್ರವೊಂದು ಲಭ್ಯವಾಗಿದೆ. ಅದರಲ್ಲಿ ತಮ್ಮ ಹೆತ್ತವರ ಕ್ಷಮೆ ಕೋರಿರುವ ಆಕೆ, “ಅಮ್ಮಾ-ಅಪ್ಪಾ, ನನಗಾಗಿ ನೀವು ಎಷ್ಟೋ ಶ್ರಮಪಟ್ಟಿದ್ದೀರಿ. ನಾನು ನೀಟ್ ಓದುತ್ತಿದ್ದಾಗಲೂ, ನೀವು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ಆದರೆ ನಿಮ್ಮ ಆಸೆಯನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಣ್ಣಾ, ಹೆತ್ತವರನ್ನು ಚೆನ್ನಾಗಿ ನೋಡಿಕೋ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ” ಎಂದು ಅತ್ಯಂತ ಭಾವುಕವಾಗಿ ಬರೆದಿದ್ದಾಳೆ. ಅಂಕಿತಾಗೆ ನೀಟ್ ಮರುಪರೀಕ್ಷೆಯಲ್ಲಿ 166 ಅಂಕಗಳು ಬಂದಿದ್ದವು. ಆದರೆ, ಕಟ್‌ಆಫ್ ಅಂಕಗಳು 177 ಆಗಿದ್ದರಿಂದ ಕೇವಲ 11 ಅಂಕಗಳ ಅಂತರದಲ್ಲಿ ಆಕೆಗೆ ವೈದ್ಯಕೀಯ ಸೀಟು ಕೈತಪ್ಪಿತ್ತು. ಇದರಿಂದ ಮನನೊಂದ ಆಕೆ ಈ ಅಂತಿಮ ನಿರ್ಧಾರ ಕೈಗೊಂಡಿದ್ದಾಳೆ. ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿರುವ ಕರ್ಣತ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

You cannot copy content of this page

Exit mobile version