ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ (Insta Reels) ಕಡೆಗೇ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ‘ಆಂಟಿ-ಪೇಪರ್ ಲೀಕ್ ಮಸೂದೆ’ಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಗೌರವ್ ಗೊಗೋಯ್ ಈ ಹೇಳಿಕೆಗಳನ್ನು ನೀಡಿದ್ದಾರೆ. “ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ವಿದ್ಯಾರ್ಥಿಗಳು ಬೀದಿಯಲ್ಲಿದ್ದು ಹೋರಾಡುತ್ತಿದ್ದರೆ, ಪ್ರಧಾನಿ ಮೋದಿ ಮಾತ್ರ ರೀಲ್ಸ್ ಮಾಡುತ್ತ ಕುಳಿತಿದ್ದಾರೆ. ದೇಶದ ಸಮಸ್ಯೆಗಳ ಬದಲಿಗೆ ಅವರ ಲಕ್ಷ್ಯವೆಲ್ಲವೂ ಇನ್‌ಸ್ಟಾಗ್ರಾಮ್ ಮೇಲೆಯೇ ಇದೆ” ಎಂದು ವಾಗ್ದಾಳಿ ನಡೆಸಿದರು.
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸರ್ಕಾರ 2024 ರಲ್ಲಿ ತಂದಿದ್ದ ಕಾನೂನು ಕಠಿಣವಾಗಿದ್ದರೆ, ಮತ್ತೆ ನೀಟ್ ಪೇಪರ್ ಲೀಕ್ ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿದ ಅವರು, ಈ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಚಿತ್ತಶುದ್ಧಿಯಿಲ್ಲ ಎಂದು ಆರೋಪಿಸಿದರು. ಪ್ರಸ್ತುತ ಮಸೂದೆಗೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳನ್ನು ಗಮನಿಸಿದರೆ, ಸರ್ಕಾರಕ್ಕೆ ಯಾವುದೇ ಅರ್ಥಪೂರ್ಣ ಬದಲಾವಣೆ ತರುವ ಉದ್ದೇಶವಿದ್ದಂತೆ ಕಾಣುತ್ತಿಲ್ಲ. ಇಂತಹ ಪರೀಕ್ಷಾ ಸುಧಾರಣೆಗಳು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಈ ಹಿಂದೆಯೂ ಸರ್ಕಾರ ಇಂತಹದೇ ಆಶ್ವಾಸನೆಗಳನ್ನು ನೀಡಿತ್ತು ಎಂದು ಹೇಳಿದರು.
2024 ರ ನೀಟ್ ಪೇಪರ್ ಲೀಕ್ ಪ್ರಕರಣವನ್ನು ಪ್ರಸ್ತಾಪಿಸಿದ ಗೊಗೋಯ್, ಆ ಸಮಯದಲ್ಲಿ ಧರ್ಮೇಂದ್ರ ಪ್ರಧಾನ್ ಅವರೇ ಶಿಕ್ಷಣ ಸಚಿವರಾಗಿದ್ದರು ಹಾಗೂ ಯಾವುದೇ ಸೋರಿಕೆ ನಡೆದಿಲ್ಲ ಎಂದು ವಿಷಯವನ್ನು ಮುಚ್ಚಿಹಾಕಲು ಯತ್ನಿಸಿದ್ದರು ಎಂದು ನೆನಪಿಸಿದರು. ಸೋಮವಾರ ಬಿಜೆಪಿಯ ನಾಯಕರು ಧರ್ಮೇಂದ್ರ ಪ್ರಧಾನ್ ಅವರಿಗೆ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ ಕೋರಿದ್ದನ್ನು ತೀವ್ರವಾಗಿ ಖಂಡಿಸಿದ ಅವರು, ಅನ್ಯಾಯದ ವಿರುದ್ಧ ಹೋರಾಡಿದ ವಿದ್ಯಾರ್ಥಿಗಳ ಹೋರಾಟದ ಕಿಚ್ಚನ್ನು ಅಭಿನಂದಿಸಿದರು. ಪ್ರತಿಭಟನಾಕಾರರ ಮೇಲೆ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರ ತಲೆಯ ಮೇಲೆಯೇ ಹೊಡೆಯಲು ಪೊಲೀಸರಿಗೆ ಆದೇಶ ನೀಡಿದವರು ಯಾರು ಎಂದು ಗೊಗೋಯ್ ಪ್ರಶ್ನಿಸಿದರು. ಇದೇ ವೇಳೆ ಸಮಾಜವಾದಿ ಪಾರ್ಟಿ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ್ ಯಾದವ್ ಮಾತನಾಡಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವ ಮೂಲಕ ಪ್ರಧಾನಿ ಮೋದಿಯವರನ್ನು ಬಿಜೆಪಿ ರಕ್ಷಿಸಿಕೊಂಡಿದೆ ಎಂದರು. ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡ ಯುವಜನತೆಯನ್ನು ಅವರು ಶ್ಲಾಘಿಸಿದರು. “ದೇವಾಲಯದ ದೇಣಿಗೆಯನ್ನೇ ಕದ್ದವರು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಹೇಗೆ ಸಾಧ್ಯ?” ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸರ್ಕಾರವು ದೇಶದ ಹಿಂದುಳಿದ ವರ್ಗಗಳ ಶಿಕ್ಷಣದ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದಾಗಿನಿಂದಲೂ ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಿದೆ ಎಂದು ಗೊಗೋಯ್ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, 2014 ಕ್ಕಿಂತ ಮೊದಲು ಯುಪಿಎ (UPA) ಆಡಳಿತಾವಧಿಯಲ್ಲಿ ಬರೋಬ್ಬರಿ 22 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈಗ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ನಾಯಕರು, ಅಂದು ರಾಜೀನಾಮೆ ನೀಡಿದ್ದರೇ ಎಂದು ಮರುಪ್ರಶ್ನಿಸಿದರು.
