ರಾಮ ಮಂದಿರ ಟ್ರಸ್ಟ್‌ನಲ್ಲಿ ಮತ್ತೊಂದು ರಾಜೀನಾಮೆ; ಸುರೇಶ್ ಭಯ್ಯಾಜಿ ಜೋಶಿ ‘ಪೋಷಕ’ ಸ್ಥಾನದಿಂದ ಹೊರಕ್ಕೆ

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಮತ್ತು ಕಳವು ಆರೋಪಗಳ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ನಾಯಕ ಸುರೇಶ್‌ ‘ಭಯ್ಯಾಜಿ’ ಜೋಶಿ ಅವರು ಟ್ರಸ್ಟ್‌ನ ‘ಪೋಷಕ’ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೂಲಗಳ ಪ್ರಕಾರ, ಜೋಶಿ ಅವರನ್ನು ಟ್ರಸ್ಟ್‌ನ ‘ಪೋಷಕ’ ಜವಾಬ್ದಾರಿಗಳಿಂದ ಅಧಿಕೃತವಾಗಿ ಮುಕ್ತಗೊಳಿಸಲಾಗಿದೆ. ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಇದಕ್ಕೂ ಮುನ್ನ ಟ್ರಸ್ಟ್‌ನ ಸದಸ್ಯ ಅನಿಲ್‌ ಮಿಶ್ರಾ ಹಾಗೂ ವಿಶೇಷ ಆಹ್ವಾನಿತ ಗೋಪಾಲ್‌ರಾವ್‌ ಅವರನ್ನು ಕೂಡ ತಮ್ಮ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಟ್ರಸ್ಟ್‌ನ ಸಭೆಗಳಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಿದ್ದ ಭಯ್ಯಾಜಿ ಜೋಶಿ ಅವರ ನಿರ್ಗಮನವು ಟ್ರಸ್ಟ್‌ನಲ್ಲಿನ ಬೆಳವಣಿಗೆಗಳಿಗೆ ಮತ್ತಷ್ಟು ಮಹತ್ವವನ್ನು ತಂದಿದೆ.

ದೇಣಿಗೆ ದುರುಪಯೋಗ ಪ್ರಕರಣದ ಬಳಿಕ ಟ್ರಸ್ಟ್‌ನಲ್ಲಿ ಸರಣಿ ರಾಜೀನಾಮೆಗಳು ಮತ್ತು ಹುದ್ದೆಗಳಿಂದ ತೆರವು ಕ್ರಮಗಳು ನಡೆಯುತ್ತಿರುವುದು ಗಮನಾರ್ಹವಾಗಿದ್ದು, ಈ ಬೆಳವಣಿಗೆಗಳು ರಾಮ ಮಂದಿರ ಟ್ರಸ್ಟ್‌ನ ಆಡಳಿತದ ಮೇಲೆ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

Related Articles

ಇತ್ತೀಚಿನ ಸುದ್ದಿಗಳು