ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಈಗ ಮತ್ತೊಂದು ಲೈಂಗಿಕ ದೌರ್ಜನ್ಯದ ಕಳಂಕ ಬೆನ್ನೇರಿದೆ. ಮಲಯಾಳಂ ನಟಿ ರಿನಿ ಜಾರ್ಜ್ ಮತ್ತು ನಂತರ ಬರಹಗಾರ ಹನಿ ಭಾಸ್ಕರನ್ ಅವರು ನೀಡಿದ ಕಿರುಕುಳ ಆರೋಪದ ನಂತರ ಈಗ ಮಂಗಳಮುಖಿ ಅವಂತಿಕಾ ರಾಹುಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಮಮ್‌ಕೂಟತಿಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ. ಚುನಾವಣಾ ಚರ್ಚೆಯ ಸಮಯದಲ್ಲಿ ಅವರು ಮೊದಲು ಭೇಟಿಯಾಗಿದ್ದರು. ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾದದ್ದು ಸಾಮಾಜಿಕ ಮಾಧ್ಯಮದಲ್ಲಿನ ಸಂದೇಶಗಳ ಮೂಲಕ ಅಸಹ್ಯಕರ ಅನುಭವವಾಗಿ ಬದಲಾಯಿತು ಎಂದು ಅವಂತಿಕಾ ಹೇಳಿದ್ದಾರೆ.
ರಾಹುಲ್ ಮಮ್‌ಕೂಟತಿಲ್ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ. ಬಿಡುವಿನಲ್ಲಿ ಬೆಂಗಳೂರು ಅಥವಾ ಹೈದರಾಬಾದ್ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ಮಂಗಳಮುಖಿ ಅವಂತಿಕಾ ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕಿಯೊಬ್ಬರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್‍ಗೆ ಆಹ್ವಾನಿಸಿದ್ದಾರೆ ಎಂದು ರಿನಿ ಆರೋಪಿಸಿದ್ದರು. ಅವರು ಯಾರನ್ನೂ ಹೆಸರಿಸದಿದ್ದರೂ, ಬಿಜೆಪಿ ಮತ್ತು ಡಿವೈಎಫ್‍ಐ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಮ್‍ಕೂಟತಿಲ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಶಾಸಕ ರಾಹುಲ್ ಬಗ್ಗೆ ಈ ಹಿಂದೆಯೂ ಹಲವು ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿದ್ದರೂ ಅವರಿಗೆ ಪಾಲಕ್ಕಾಡ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಅದೇ ಕ್ಷೇತ್ರದಲ್ಲಿ ಈ ಹಿಂದೆ ಶಾಸಕನಾಗಿದ್ದ ಹಾಲಿ ಸಂಸದ ಶಾಫಿ ಪಾರಂಬಿಲ್ ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯಿಸಿದ್ದರು. ಆರೋಪ ಇರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟ ಬಗ್ಗೆಯೂ ಈಗ ಕಾಂಗ್ರೆಸ್ ವೇದಿಕೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಈ ಬೆಳವಣಿಗೆ ಪಕ್ಷದ ಹೈಕಮಾಂಡ್ ಸಹ ಸ್ಥಳೀಯ ನಾಯಕರ ಮೇಲೆ ಛೀಮಾರಿ ಹಾಕಿದೆ.