ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಜಾಮೀನು ಕುರಿತಂತೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದು, ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಈ ಹಿಂದೆ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಬಳಿಕ 2026ರ ಮೇ 15ರಂದು, ಒಂದು ವರ್ಷದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸದಂತೆ ಆದೇಶ ನೀಡಿದ್ದ ನ್ಯಾಯಾಲಯ, ಅದೇ ಅವಧಿಯಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿತ್ತು.
ಈ ಆದೇಶವನ್ನು ಮರುಪರಿಶೀಲಿಸಿ, ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರುವ ಅವಕಾಶ ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಸ್ಪಷ್ಟಪಡಿಸಿ ವಜಾಗೊಳಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಇದುವರೆಗೆ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ದರ್ಶನ್ ಈ ಹಿಂದೆ ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿತ್ತು.
ಹೀಗಾಗಿ, ಮೇ 15ರಂದು ನೀಡಿದ್ದ ಆದೇಶದ ಅನ್ವಯ ಮುಂದಿನ ವರ್ಷದ ಮೇ 15ರವರೆಗೆ ದರ್ಶನ್ ಜೈಲಿನಲ್ಲಿರುವುದು ಅನಿವಾರ್ಯವಾಗಿದ್ದು, ಈ ಅವಧಿಯಲ್ಲಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ವಿಚಾರಣಾ ನ್ಯಾಯಾಲಯದ ಮೇಲಿದೆ.
