ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ವಿದ್ಯುತ್ ಸರಬರಾಜು ಪರವಾನಗಿ ಕೋರಿ ಸಲ್ಲಿಸಿದ್ದ ತನ್ನ ಪ್ರಸ್ತಾವನೆಯನ್ನು ಟಾಟಾ ಪವರ್ ಸಂಸ್ಥೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಮುಂದೆ ಅಧಿಕೃತವಾಗಿ ಹಿಂಪಡೆದಿದೆ.
ಕೆಇಆರ್‌ಸಿ ನಡೆಸಿದ ಆಕ್ಷೇಪಣೆ ಆಲಿಕೆ ವೇಳೆ ಸಂಸ್ಥೆಯು ತನ್ನ ಅರ್ಜಿಯನ್ನು ವಾಪಸ್ ಪಡೆದಿದೆ. ಈ ಪ್ರಸ್ತಾವನೆಗೆ ರಾಜ್ಯಾದ್ಯಂತ ರೈತ ಸಂಘಟನೆಗಳು, ಎಸ್ಕಾಂ (ESCOM) ನೌಕರರು ಹಾಗೂ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವ್ಯಾಪಕ ಜನವಿರೋಧದ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಹೋರಾಟಕ್ಕೆ ಸಿಕ್ಕ ಜಯ: ಗುತ್ತಿಗೆದಾರರ ಸಂಘ
ಟಾಟಾ ಪವರ್ ತನ್ನ ಅರ್ಜಿಯನ್ನು ಹಿಂಪಡೆದಿರುವುದನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸ್ವಾಗತಿಸಿದೆ. ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಮುಖ್ಯಮಂತ್ರಿ ಸಲಹೆಗಾರ ಸಿಎಂಡಿ ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಟಾಟಾ ಪವರ್ ಪ್ರಸ್ತಾವನೆ ವಿರುದ್ಧ ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ರೈತರು, ಇಲಾಖೆಯ ನೌಕರರು ಹಾಗೂ ಗುತ್ತಿಗೆದಾರರು ನಡೆಸಿದ ಒಗ್ಗಟ್ಟಿನ ಹೋರಾಟಕ್ಕೆ ಇದು ದೊರೆತ ಜಯ ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಕಂಪನಿಯು ಸ್ವಯಂಪ್ರೇರಿತವಾಗಿ ಹಿಂದೆ ಸರಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದೂ ತಿಳಿಸಿದ್ದಾರೆ.
ಸಚಿವರ ಭರವಸೆ ಬಳಿಕ ಮಹತ್ವದ ಬೆಳವಣಿಗೆ
ಮೂರು ದಿನಗಳ ಹಿಂದಷ್ಟೇ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ವಿದ್ಯುತ್ ಖಾಸಗೀಕರಣದ ಕುರಿತು ಸಾರ್ವಜನಿಕರಲ್ಲಿ ಮೂಡಿದ್ದ ಆತಂಕ ನಿವಾರಿಸಲು ಸ್ಪಷ್ಟನೆ ನೀಡಿದ್ದರು. 2003ರಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ, ಕರ್ನಾಟಕದಲ್ಲಿ ಖಾಸಗೀಕರಣ ಜಾರಿಯಾಗಿಲ್ಲ ಎಂದು ಅವರು ಹೇಳಿದ್ದರು.
ಟಾಟಾ ಪವರ್ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ ತಕ್ಷಣವೇ ಅದರ ವಿರುದ್ಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯದ ವಿದ್ಯುತ್ ನಿಗಮಗಳಿಗೆ ಸೂಚನೆ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದರು. ಆಯೋಗದ ಅಂತಿಮ ಆದೇಶದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದ್ದರೂ, ಇಲಾಖೆಯ ಆಕ್ಷೇಪಣೆ ಮತ್ತು ಸಾರ್ವಜನಿಕರ ತೀವ್ರ ವಿರೋಧದ ನಡುವೆ ಟಾಟಾ ಪವರ್ ಸಂಸ್ಥೆಯೇ ತನ್ನ ಪ್ರಸ್ತಾವನೆಯನ್ನು ಹಿಂಪಡೆದಿರುವುದು ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
