ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ಜೋಸೆಫ್ ವಿಜಯ್ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಡಿಎಂಕೆ ಶಾಸಕ ಅನಿತಾ ಆರ್ ರಾಧಾಕೃಷ್ಣನ್ ಅವರನ್ನು ತಮಿಳುನಾಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಗಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 20ರಂದು ಆಥೂರ್ ನಲ್ಲಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಧಾಕೃಷ್ಣನ್ ಅವರು ಮುಖ್ಯಮಂತ್ರಿ ವಿಜಯ್ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದರು. ಭಾಷಣದಲ್ಲಿ ವಿಜಯ್ ಅವರ ವೈಯಕ್ತಿಕ ಜೀವನ ಹಾಗೂ ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದಿರುವುದನ್ನು ವ್ಯಂಗ್ಯವಾಡಿ ಮಾತನಾಡಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಸಭೆಯಲ್ಲಿ ಮಾತನಾಡಿದ್ದ ರಾಧಾಕೃಷ್ಣನ್, ವಿಧಾನಸಭೆಯಲ್ಲಿ ಡಿಎಂಕೆ ಶಾಸಕ ಎಸ್.ಆಸ್ಟಿನ್ ಮತ್ತು ಮುಖ್ಯಮಂತ್ರಿ ವಿಜಯ್ ನಡುವಿನ ಮಾತಿನ ಚಕಮಕಿಯನ್ನು ಉಲ್ಲೇಖಿಸಿ, ವಿಜಯ್ ಅವರ ಬಗ್ಗೆ ವೈಯಕ್ತಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದೇ ವೇಳೆ, ತಾವು ವ್ಯಾಪಾರಿಯಾಗಿರುವುದನ್ನು ಉದಾಹರಿಸಿ, ವಿಧಾನಸಭೆಯಲ್ಲಿ ವಿಜಯ್ ಅವರ ವರ್ತನೆ “ಸಿಕ್ಕಿಬಿದ್ದ ವ್ಯಕ್ತಿಯಂತಿತ್ತು” ಎಂದು ಟೀಕಿಸಿದ್ದರು.
ಶಾಸಕರ ಬಂಧನವನ್ನು ಡಿಎಂಕೆ ಸಂಸದೆ ಕನಿಮೋಳಿ ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದ ವೇಳೆ ರಾಧಾಕೃಷ್ಣನ್ ಅವರನ್ನು ಬಂಧಿಸಿರುವುದು “ಪ್ರಜಾಪ್ರಭುತ್ವ ವಿರೋಧಿ ಹಾಗೂ ದಬ್ಬಾಳಿಕೆಯ ಕ್ರಮ” ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಡಿಎಂಕೆ ಎಂದಿಗೂ ತಲೆಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಮುಂಗಡ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿಕೆ ಇಳಂತಿರೈಯನ್, “1967ರಿಂದ ತಮಿಳುನಾಡಿನಲ್ಲಿ ಸಿನಿಮಾ ಕ್ಷೇತ್ರದಿಂದ ಬಂದ ಹಲವು ನಾಯಕರನ್ನು ಜನರು ಚುನಾಯಿಸುತ್ತಿದ್ದಾರೆ. ಹಾಗಿದ್ದಾಗ ಇಂತಹ ಹೇಳಿಕೆಗಳನ್ನು ಏಕೆ ನೀಡುತ್ತಿದ್ದೀರಿ? ನೀವು ಸಾಮಾನ್ಯ ವ್ಯಕ್ತಿಯಲ್ಲ, ವಿಧಾನಸಭೆಯ ಸದಸ್ಯರು” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಲಯವು ಮುಂಗಡ ಜಾಮೀನು ನಿರಾಕರಿಸಿದ ಬಳಿಕ ಪೊಲೀಸರು ಅನಿತಾ ಆರ್. ರಾಧಾಕೃಷ್ಣನ್ ಅವರನ್ನು ಬಂಧಿಸಿದ್ದಾರೆ.
