Home ಅಪರಾಧ ಪ್ರಜ್ವಲ್ ರೇವಣ್ಣ ಜೈಲು ಕೊಠಡಿಯಲ್ಲಿ ಮತ್ತೊಂದು ಮೊಬೈಲ್ ಪತ್ತೆ; ದೇವರ ಫೋಟೋ ಹಿಂದೆ ಅಡಗಿಸಿಟ್ಟಿದ್ದು ಬಯಲಿಗೆ

ಪ್ರಜ್ವಲ್ ರೇವಣ್ಣ ಜೈಲು ಕೊಠಡಿಯಲ್ಲಿ ಮತ್ತೊಂದು ಮೊಬೈಲ್ ಪತ್ತೆ; ದೇವರ ಫೋಟೋ ಹಿಂದೆ ಅಡಗಿಸಿಟ್ಟಿದ್ದು ಬಯಲಿಗೆ

0

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರಿದ್ದ ಬ್ಯಾರಕ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಮತ್ತೊಂದು ಮೊಬೈಲ್ ಫೋನ್ ಪತ್ತೆಯಾಗಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಗೋಡೆಯ ದೇವರ ಫೋಟೋ ಹಿಂದೆ ಅಡಗಿಸಿಟ್ಟಿದ್ದ ಫೋನ್
‘ಸಿ’ ಬ್ಯಾರಕ್‌ನ ಎರಡನೇ ಕೊಠಡಿಯಲ್ಲಿ ಜೈಲು ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾಗ, ಗೋಡೆಗೆ ತೂಗುಹಾಕಿದ್ದ ದೇವರ ಫೋಟೋದ ಹಿಂಭಾಗದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಪತ್ತೆಯಾದ ಸಂದರ್ಭದಲ್ಲಿ ಫೋನ್ ಸ್ವಿಚ್ ಆಫ್ ಆಗಿದ್ದು, ಒಳಗೆ ಯಾವುದೇ ಸಿಮ್ ಕಾರ್ಡ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾದ ತಕ್ಷಣ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಸಾಧನವನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆಯೂ ಸಿಕ್ಕಿತ್ತು ಮೊಬೈಲ್ ಜಾಲ
ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿ ಎಫ್‌ಐಆರ್ ದಾಖಲಾಗಿತ್ತು. ವರದಿಗಳ ಪ್ರಕಾರ, ಜೈಲಿನಲ್ಲಿ ಈವರೆಗೆ ಸಿಕ್ಕ ಮೂರೂ ಮೊಬೈಲ್‌ಗಳು ಒಂದೇ ಕಂಪನಿಯದ್ದಾಗಿದ್ದು, ಆಂಧ್ರಪ್ರದೇಶ ಮೂಲದ ಜಾಲವೊಂದು ಕೈದಿಗಳಿಗೆ ಅಕ್ರಮವಾಗಿ ಫೋನ್ ಪೂರೈಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಜಾಲದ ಸಹಾಯದಿಂದ ಈ ಹಿಂದೆ ಕೆಲ ಕೈದಿಗಳು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಹೊಸ ಎಫ್‌ಐಆರ್ ದಾಖಲು
ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ. ಕಟ್ಟುನಿಟ್ಟಿನ ಭದ್ರತೆ ಇರುವ ಕೊಠಡಿಗೆ ಮೊಬೈಲ್ ತಲುಪಿಸಿದ್ದು ಯಾರು, ಇದನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಮತ್ತು ಇದರ ಹಿಂದೆ ಜೈಲು ಸಿಬ್ಬಂದಿಯ ಕೈವಾಡ ಇದೆಯೇ ಎಂಬ ಬಗ್ಗೆ ಪೊಲೀಸರು ಆಳವಾದ ತನಿಖೆ ಆರಂಭಿಸಿದ್ದಾರೆ.

ಅಷ್ಟೇ ಅಲ್ಲದೇ ಈಗಾಗಲೇ ಅಪರಾಧಿ ಎಂದು ಸಾಭೀತಾದರೂ ಜೈಲಿನ ಸಮವಸ್ತ್ರ ಹಾಕದೇ ಸಾದಾ ಸೀದಾ ಇರುವ ಬಟ್ಟೆ ಹಾಕಿರುವ ವಿಡಿಯೋಗಳು ಈಗ ಜೈಲಿನ ಒಳಗಿನ ವ್ಯವಸ್ಥೆ ಬಗ್ಗೆ ಹೊರ ಪ್ರಪಂಚಕ್ಕೆ ತೀವ್ರ ಅನುಮಾನ ಮೂಡುವಂತಾಗಿದೆ. ವಿಡಿಯೋದಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣ ಎಲ್ಲರಂತೆ ಬಟ್ಟೆ ಹಾಕಿದ್ದಾನೆ, ಮತ್ತು ಕೋರ್ಟ್ ಸೂಚಿಸಿದ ಯಾವುದೇ ಕೆಲಸ ಮಾಡುವುದಿಲ್ಲ ಎಂಬ ರೀತಿಯಲ್ಲಿ ಹಠ ಹಿಡಿದಿದ್ದಾನೆ ಎನ್ನಲಾಗಿದೆ.

ಪದೇ ಪದೇ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಿನ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ.

You cannot copy content of this page

Exit mobile version