ಬೆಂಗಳೂರು : ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಸುಳ್ಳು ಅಥವಾ ದುರುದ್ದೇಶಪೂರ್ವಕವಾಗಿ Form-7 ಅರ್ಜಿಗಳನ್ನು ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಕರ್ನಾಟಕ ಆಗ್ರಹಿಸಿದೆ.

ಈ ಕುರಿತು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರಿಗೆ ಜಾಗೃತ ಕರ್ನಾಟಕದ ಪರವಾಗಿ ಅದಂ ಖಾನ್ ಮನವಿ ಸಲ್ಲಿಸಿದ್ದು, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಲ್ಲಿಕೆಯಾಗಿರುವ ಅನುಮಾನಾಸ್ಪದ Form-7 ಅರ್ಜಿಗಳನ್ನು ಕ್ಷೇತ್ರವಾರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗದ Form-7 ಮಾರ್ಗಸೂಚಿಯ ಪ್ರಕಾರ, ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸಲು ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ನೀಡಿರುವ ಕಾರಣವನ್ನು ಸಮರ್ಥಿಸುವ ಪುರಾವೆ ಒದಗಿಸುವ ಹೊಣೆಗಾರಿಕೆ ಅರ್ಜಿದಾರರದ್ದಾಗಿದೆ. ಅರ್ಜಿಯ ಘೋಷಣೆಯಲ್ಲಿ ಸುಳ್ಳು ಮಾಹಿತಿ ನೀಡುವುದು Representation of the People Act, 1950ರ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಬಹುದು ಎಂದು ಆಯೋಗದ ಮಾರ್ಗಸೂಚಿಯಲ್ಲಿಯೇ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಒಂದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಯಿಂದ ಅಸಾಮಾನ್ಯ ಪ್ರಮಾಣದಲ್ಲಿ Form-7 ಅರ್ಜಿಗಳು ಸಲ್ಲಿಕೆಯಾಗಿರುವ ಪ್ರಕರಣಗಳನ್ನು ವಿಶೇಷವಾಗಿ ಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅರ್ಜಿಗಳಲ್ಲಿರುವ ಕಾರಣಗಳು ನಿಜವೇ ಎಂಬುದನ್ನು ಸಂಬಂಧಪಟ್ಟ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಲಭ್ಯವಿರುವ ಅಧಿಕೃತ ದಾಖಲೆಗಳ ಮೂಲಕ ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಸುಳ್ಳು ಮಾಹಿತಿ, ನಕಲಿ ದಾಖಲೆ ಅಥವಾ ಉದ್ದೇಶಪೂರ್ವಕ ತಪ್ಪು ಘೋಷಣೆ ನೀಡಿ ಅರ್ಜಿ ಸಲ್ಲಿಸಿರುವುದು ತನಿಖೆಯಲ್ಲಿ ಸಾಬೀತಾದರೆ, ಸಂಬಂಧಪಟ್ಟ ಅರ್ಜಿದಾರರ ವಿರುದ್ಧ ಪೊಲೀಸ್ ದೂರು ಸೇರಿದಂತೆ ಸೂಕ್ತ ಕಾನೂನು ಕ್ರಮ ಆರಂಭಿಸಬೇಕು. ಮತ್ತೊಬ್ಬರ ಪರವಾಗಿ ದೊಡ್ಡ ಪ್ರಮಾಣದಲ್ಲಿ Form-7 ಅರ್ಜಿಗಳನ್ನು ಸಲ್ಲಿಸಿರುವ ವ್ಯಕ್ತಿಗಳು ಅಥವಾ ಮಧ್ಯವರ್ತಿಗಳ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಜಾಗೃತ ಕರ್ನಾಟಕ ತಿಳಿಸಿದೆ.
ಕರ್ನಾಟಕದ ಭಾಲ್ಕಿ ಮತ್ತು ಬಬಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ Form-7 ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ಕುರಿತು ಇತ್ತೀಚಿನ ವರದಿಗಳು ಬೆಳಕಿಗೆ ಬಂದಿವೆ. ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ, ಭಾಲ್ಕಿ ಮತ್ತು ಬಬಲೇಶ್ವರ ಕ್ಷೇತ್ರಗಳಲ್ಲಿ ಸೆ.22 ಮತ್ತು 23ರಂದು ಕೇವಲ 38 ಮಂದಿ ಒಟ್ಟು 3,757 ಮತದಾರರ ಹೆಸರುಗಳನ್ನು ಅಳಿಸುವಂತೆ ಆಕ್ಷೇಪಣೆ ಸಲ್ಲಿಸಿದ್ದರು. ಈ ಅರ್ಜಿಗಳಲ್ಲಿ ಬಹುತೇಕ ಹೆಸರುಗಳು ಮುಸ್ಲಿಂ ಮತದಾರರಿಗೆ ಸಂಬಂಧಿಸಿದ್ದವು ಎಂದು ವರದಿ ಹೇಳಿದೆ.
ಇದೇ ವೇಳೆ, Form-7 ಅರ್ಜಿಗಳಲ್ಲಿ ಕೆಲವು ಈಗಾಗಲೇ ಮುದ್ರಿತವಾಗಿದ್ದವು ಎಂಬ ವರದಿಗಳೂ ಬಂದಿವೆ. ದಿ ಹಿಂದೂ ವರದಿಯನ್ನು ಆಧರಿಸಿದ ಸ್ಕ್ರೋಲ್ ವರದಿ ಪ್ರಕಾರ, ಕನಿಷ್ಠ ಎರಡು ಪ್ರಕರಣಗಳಲ್ಲಿ ಮತದಾರರ ಹೆಸರು ಅಳಿಸುವಂತೆ ಈಗಾಗಲೇ ಭರ್ತಿ ಮಾಡಿ ಮುದ್ರಿಸಲಾಗಿದ್ದ Form-7ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಆಕ್ಷೇಪಣೆ ಸಲ್ಲಿಸುವವರ ಹೆಸರುಗಳನ್ನು ಮಾತ್ರ ಕೈಬರಹದಲ್ಲಿ ನಮೂದಿಸಲಾಗಿತ್ತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, Form-7 ಅರ್ಜಿಗಳ ಸಲ್ಲಿಕೆ ಮತ್ತು ಪರಿಶೀಲನಾ ಪ್ರಕ್ರಿಯೆಯ ಕುರಿತು ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ಜಾಗೃತ ಕರ್ನಾಟಕ ಒತ್ತಾಯಿಸಿದೆ. ವಿಶೇಷವಾಗಿ ಅಸಾಮಾನ್ಯ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಜಿದಾರರ ವಿವರ, ಆಕ್ಷೇಪಣೆಯ ಕಾರಣ, ಪರಿಶೀಲನೆಯ ಫಲಿತಾಂಶ ಮತ್ತು ಕೈಗೊಂಡ ಕ್ರಮಗಳ ಕುರಿತು ಜಿಲ್ಲಾವಾರು ಹಾಗೂ ಕ್ಷೇತ್ರವಾರು ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಉಳಿಯುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕಿನೊಂದಿಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ Form-7 ವ್ಯವಸ್ಥೆಯ ದುರುಪಯೋಗದ ಆರೋಪಗಳ ಕುರಿತು ಚುನಾವಣಾ ಆಯೋಗವು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಕರ್ನಾಟಕ ಒತ್ತಾಯಿಸಿದೆ.
ಅಕ್ರಮ Form-7 ಅರ್ಜಿಗಳ ಕುರಿತು ಇದುವರೆಗೆ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಚುನಾವಣಾ ಆಯೋಗವು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗೂ ಅಗತ್ಯವಿರುವ ಪ್ರಕರಣಗಳಲ್ಲಿ ಪೊಲೀಸ್ ದೂರು ದಾಖಲಿಸಬೇಕು ಎಂದು ಅದಂ ಖಾನ್ ಆಗ್ರಹಿಸಿದ್ದಾರೆ.