Home ಬ್ರೇಕಿಂಗ್ ಸುದ್ದಿ ಭೂಸುಧಾರಣಾ ತಿದ್ದುಪಡಿ ವಾಪಸ್‌‌ಗೆ ಆಗ್ರಹ – ಆರ್. ಪಾಟೀಲ್ ಪತ್ರ

ಭೂಸುಧಾರಣಾ ತಿದ್ದುಪಡಿ ವಾಪಸ್‌‌ಗೆ ಆಗ್ರಹ – ಆರ್. ಪಾಟೀಲ್ ಪತ್ರ

ಬೆಂಗಳೂರು: ಕಾಂಗ್ರೆಸ್ (Congress) ಶಾಸಕ ಬಿ.ಆರ್. ಪಾಟೀಲ್ (BR Patil) ಅವರು ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು (Land Reforms Act amendment) ವಾಪಸ್ ಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ (Rahul Gandhi) ಪತ್ರ ಬರೆದಿದ್ದಾರೆ. ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಯನ್ನು ನೆನಪಿಸಿರುವ ಅವರು, ತಮ್ಮ ಆಗ್ರಹಕ್ಕೆ ಬೆಂಬಲವಾಗಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನೂ ಪತ್ರದೊಂದಿಗೆ ಲಗತ್ತಿಸಿದ್ದಾರೆ.

ರಾಜ್ಯ ಸರ್ಕಾರವು ರೈತ ವಿರೋಧಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪಾಟೀಲ್, ಭೂಸುಧಾರಣಾ ಕಾಯ್ದೆಯ 79A, 79B ಹಾಗೂ 79C ಸೆಕ್ಷನ್‌ಗಳನ್ನು ತಕ್ಷಣವೇ ಮರುಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 2021ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 19.92 ಲಕ್ಷ ಎಕರೆ ಕೃಷಿ ಭೂಮಿ ಮಾರಾಟವಾಗಿದ್ದು, ಇದರಲ್ಲಿ ಶೇ. 60ರಷ್ಟು ಭಾಗ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಮುಖ್ಯವಾಗಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದ ಕೃಷಿ ಭೂಮಿ ಕೈಬದಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಯ್ದೆಯ ಈ ಪ್ರಮುಖ ಸೆಕ್ಷನ್‌ಗಳನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶಾಸನಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೀಡಿರುವ ಲಿಖಿತ ಉತ್ತರಕ್ಕೆ ಬಿ.ಆರ್. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು, ತಿದ್ದುಪಡಿ ಹಿಂಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿದ್ದಾರೆ.

You cannot copy content of this page

Exit mobile version